Advertisement

ಕೇಂದ್ರದ ಅನುಮತಿ ಬಳಿಕ ಬಿಸಿಯೂಟ ಆರಂಭ

12:00 PM Feb 23, 2021 | Team Udayavani |

ದೊಡ್ಡಬಳ್ಳಾಪುರ: ಶಾಲೆಗಳು ಹೆಚ್ಚು ಕಾಲ ಮುಚ್ಚಿದರೆ ದುಡಿಮೆಯತ್ತ ಹಾಗೂ ಬಾಲ್ಯ ವಿವಾಹದತ್ತ ಮಕ್ಕಳುವಾಲುವ ಸಾಧ್ಯತೆ ಹೆಚ್ಚಾಗಲಿದೆ. ಈ ದಿಸೆಯಲ್ಲಿ ಕೋವಿಡ್‌ ಸಂಕಷ್ಟದ ನಡುವೆಯೂ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಶಾಲೆಗಳಲ್ಲಿ ಮುನ್ನೆಚ್ಚರಿಕೆ ವಹಿಸುವಲ್ಲಿ ಯಾವುದೇ ರಾಜಿ ಮಾಡಿಲ್ಲ. ಕೇಂದ್ರ ಸರ್ಕಾರದ ಅನುಮತಿ ನಂತರ ಶಾಲೆಗಳಲ್ಲಿ ಬಿಸಿಯೂಟ ಆರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ತಿಳಿಸಿದರು.

Advertisement

ತಾಲೂಕಿನ ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆ ಸೇರಿದಂತೆ ವಿವಿಧ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದಅವರು, ಫೆ.22 ರಿಂದ 6ರಿಂದ 8ನೇ ತರಗತಿವರೆಗೂ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗಿದ್ದು, ಪೋಷಕರ ಅನುಮತಿ ನೀಡಿದರೆ ಮಾತ್ರ ವಿದ್ಯಾರ್ಥಿಗಳು ಶಾಲೆಗೆ ಬರಬಹುದು ಎಂದರು.

ರಾಜ್ಯದಲ್ಲಿ 2ನೆ ಅಲೆ ಕೋವಿಡ್ ವರದಿಯಾಗಿಲ್ಲ: ಬಾಶೆಟ್ಟಿಹಳ್ಳಿ ಪ್ರೌಢ ಶಾಲೆಯಲ್ಲಿ 8ನೇ ತರಗತಿಯಲ್ಲಿ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿರುವುದು ಉತ್ತಮ ಬೆಳವಣಿಗೆ. ರಾಜ್ಯದ ಎಲ್ಲ ಭಾಗಗಳಲ್ಲಿ ಶಾಲೆ ಪ್ರಾರಂಭಿಸುವಂತೆ ವಿದ್ಯಾರ್ಥಿಗಳು ಕೇಳುತ್ತಿದ್ದಾರೆ. ದೇಶದಲ್ಲಿ 6 ರಾಜ್ಯದಲ್ಲಿ ಕೋವಿಡ್ 2ನೇ ಹಂತದ ಅಲೆ ಇದ್ದರೂ, ರಾಜ್ಯದಲ್ಲಿ ಎಲ್ಲೂ ವರದಿಯಾಗಿಲ್ಲ. ಆನ್‌ಲೈನ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ಪಾಠ ಕೇಳಲು ಸಾಧ್ಯವಾಗುತ್ತಿಲ್ಲ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಂವಾದ ನಡೆಸಲು, ಪ್ರಶ್ನೆ ಕೇಳಲು ಆಗದಿರುವ ಕಾರಣ ಶಾಲೆಗೆ ಬಂದು ಕಲಿಯುವುದು ಉತ್ತಮ ಎಂದು ಹೇಳಿದರು.

ಶಾಲೆ ಮುಚ್ಚಿದರೆ ವಿದ್ಯಾರ್ಥಿಗಳಿಗೆ ಭವಿಷ್ಯವಿಲ್ಲ:

ಶಾಲೆ ಮುಚ್ಚಿದ್ದರ ಪರಿಣಾಮ ಬಾಲಕಾರ್ಮಿಕತೆ ಮತ್ತು ಬಾಲ್ಯ ವಿವಾಹ ಹೆಚ್ಚಾಗಿರುವುದು ಗಮನಕ್ಕೆ ಬಂದಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆಯ ಮೂಲಕ ಶಾಲಾ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

Advertisement

ಶಿಕ್ಷಕರ ಕೊರತೆಯಿಲ್ಲ: ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು 3 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. ಕೆಲವು ಭಾಗಗಳಲ್ಲಿ ನಿವೃತ್ತ ಶಿಕ್ಷಕರು ಸ್ವಯಂ ಪ್ರೇರಣೆಯಿಂದ ವಿದ್ಯಾರ್ಥಿಗಳಿಗೆ ಕಲಿಸಲು ಮುಂದೆ ಬಂದಿದ್ದಾರೆ. 10ನೇ ತರಗತಿ ವಿದ್ಯಾರ್ಥಿನಿ ವರ್ಷಿತಾ ಐಎಎಸ್‌ ಪರೀಕ್ಷೆ ಪಾಸಾಗಬೇಕೆಂಬ ಕನಸನ್ನು ಸಚಿವರ ಗಮನಕ್ಕೆ ತಂದಾಗ, ಬೆಂ.ಗ್ರಾ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬರುವಂತೆ ಸಚಿವರು ವಿದ್ಯಾರ್ಥಿನಿಗೆ ಶುಭ ಹಾರೈಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬು ಕುಮಾರ್‌, ಡಿಡಿಪಿಐ ಗಂಗಮಾರೇಗೌಡ, ಅಜಾಕ್ಸ್‌ ಎಂಜಿನಿಯರಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಸಿಇಒ ಜಗದೀಶ್‌ ಭಟ್‌ ಇದ್ದರು.

ಎಸ್‌ಎಸ್‌ಎಲ್‌ಸಿ ಶೇ.30ರಷ್ಟು ಪಠ್ಯಕ್ರಮ ಕಡಿತ :

ಕೋವಿಡ್‌ ನಿಯಂತ್ರಣದಲ್ಲಿ ದೇಶದಲ್ಲಿಯೇ ರಾಜ್ಯ ಸರ್ಕಾರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಎಸ್‌ ಎಸ್‌ಎಲ್‌ಸಿ ಪರೀಕ್ಷೆಯ ದೃಷ್ಟಿಯಿಂದ ಸಮಯ ಕಡಿಮೆ ಇದ್ದು, ವಿದ್ಯಾರ್ಥಿಗಳಿಗೆ ಹೊರೆ ಆಗದಂತೆಶೇ.30ರಷ್ಟು ಪಠ್ಯವನ್ನು ಕಡಿತಗೊಳಿಸಲಾಗಿದೆ. ಕೆಲವು ಶಾಲೆಗಳಲ್ಲಿ ಪೂರ್ಣ ಪ್ರಮಾಣದ ಪಠ್ಯ ಬೋಧನೆ ಮಾಡುವುದಾಗಿ ಶಿಕ್ಷಕರು ತಿಳಿಸಿದ್ದು, ಮೊದಲ ದಿನ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. 2021ರಲ್ಲಿ ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಲಾಗಿದೆ. ಸಾರ್ವಜನಿಕರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ಫೆ.25ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next