ಮುಂಬಯಿ: ಉತ್ತರ ಪ್ರದೇಶ ಮತ್ತು ಬಿಹಾರದ ಲೋಕಸಭೆ ಸ್ಥಾನಗಳಿಗೆ ಇತ್ತೀಚೆಗೆ ನಡೆದ ಉಪಚುನಾವಣೆಗಳಲ್ಲಿ ಸೋಲು ಅನುಭವಿಸಿರುವುದು ಬಿಜೆಪಿಯ ಅಂತ್ಯದ ಆರಂಭ ಎಂದು ಮಿತ್ರಪಕ್ಷ ಶಿವಸೇನೆ ಅಣಕವಾಡಿದೆ.
ಇತ್ತೀಚಿನ ಉಪಚುನಾವಣಾ ಫಲಿತಾಂಶಗಳು ಮತ್ತು ಒಟ್ಟಾರೆಯಾಗಿ ಸದ್ಯ ದೇಶದಲ್ಲಿ ಕಂಡುಬರುತ್ತಿರುವ ರಾಜಕೀಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದ್ದೇ ಆದಲ್ಲಿ 2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 100-110 ಸ್ಥಾನಗಳಲ್ಲಿ ಜಯ ಗಳಿಸಲಷ್ಟೇ ಶಕ್ತವಾಗಲಿದೆ. ಈ ಎಲ್ಲಾ ಬೆಳವಣಿಗೆಗಳು ಬಿಜೆಪಿಯ ಅಂತ್ಯಕ್ಕೆ ನಾಂದಿ ಹಾಡಿದಂತಾಗಿದೆ ಎಂದು ಶಿವಸೇನೆಯ ಮುಖವಾಣಿಯಾಗಿರುವ “ಸಾಮ್ನಾ’ದ ಸಂಪಾದಕೀಯದಲ್ಲಿ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಲಾಗಿದೆ.
ಬಿಜೆಪಿ ಪ್ರಾಬಲ್ಯದ ಕ್ಷೇತ್ರಗಳಾದ ಉತ್ತರಪ್ರದೇಶದ ಗೋರಕ್‌ಪುರ ಮತ್ತು ಫೂಲ್ಪುರಗಳಲ್ಲಿ ಸಮಾಜವಾದಿ ಪಾರ್ಟಿಯ ಅಭ್ಯರ್ಥಿಗಳು ಜಯಭೇರಿ ಬಾರಿಸಿರುವುದು ಬಿಜೆಪಿ ಪಾಳಯದಲ್ಲಿ ಆತಂಕವನ್ನು ಸೃಷ್ಟಿಸಿದೆ. ವಾರದ ಹಿಂದೆಯಷ್ಟೇ ತ್ರಿಪುರದಲ್ಲಿ ಸಾಧಿಸಿದ ಭರ್ಜರಿ ಗೆಲುವಿನ ಸಂಭ್ರಮಾಚರಣೆಯಲ್ಲಿದ್ದ ಬಿಜೆಪಿಗೆ ಉಪಚುನಾವಣೆಯಲ್ಲಾದ ಸೋಲು ಒಂದಿಷ್ಟು ನಡುಕವನ್ನು ಉಂಟುಮಾಡಿರುವುದಂತೂ ಸುಳ್ಳಲ್ಲ ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ.
ಉತ್ತರಪ್ರದೇಶದ ಎರಡೂ ಲೋಕಸಭೆ ಸ್ಥಾನಗಳಲ್ಲಿ ಸಮಾಜವಾದಿ ಪಾರ್ಟಿಯ ಅಭ್ಯರ್ಥಿಗಳು ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದು ಜನರು ಬಿಜೆಪಿಯನ್ನು ಸೋಲಿಸಲು ಪಣತೊಟ್ಟಿದ್ದನ್ನು ಸಾಬೀತುಪಡಿಸಿದೆ. ಮೋದಿ ಅಲೆಯಿಂದಾಗಿ 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಆದರೆ ಇದೀಗ ಕ್ರಮೇಣ ಮೋದಿ ಅಲೆ ಕಡಿಮೆಯಾಗತೊಡಗಿದೆ. ಇದೀಗ ದೇಶದ ಜನರಿಗೆ ಎಲ್ಲವೂ ಸ್ಪಷ್ಟವಾಗಿ ಅರಿವಾಗತೊಡಗಿದೆ. ವರ್ಷದ ಹಿಂದೆಯಷ್ಟೇ ಬಿಜೆಪಿ ಉತ್ತರಪ್ರದೇಶ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ದಾಖಲೆಯ 325 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರಕ್ಕೆ ಬಂದಿತ್ತು. ಹಾಲಿ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ್ ಅವರು 1991ರಿಂದೀಚೆಗೆ ಗೋರಕ್‌ಪುರ ಕ್ಷೇತ್ರದಲ್ಲಿ ಸೋಲು ಕಂಡಿರಲಿಲ್ಲ. ಈ ಕಾರಣದಿಂದಾಗಿಯೇ ಅವರು ಮುಖ್ಯಮಂತ್ರಿ ಗಾದಿಗೇರಿದ್ದರು. ಇಷ್ಟೊಂದು ಭಾರೀ ಜನಪ್ರಿಯತೆಯ ಹೊರತಾಗಿಯೂ ಬಿಜೆಪಿಗೆ ತನ್ನ ತವರು ಕ್ಷೇತ್ರವನ್ನು ಉಳಿಸಿಕೊಳ್ಳಲಾಗದಿರಲು ಕಾರಣವೇನು? ಎಂದು ಸಂಪಾದಕೀಯದಲ್ಲಿ ಪ್ರಶ್ನಿಸಲಾಗಿದೆ.
ತೀವ್ರತೆ ಕಳೆದುಕೊಳ್ಳುತ್ತಿರುವ ಮೋದಿ ಅಲೆ
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ದೇಶದಲ್ಲಿ 10 ಉಪಚುನಾವಣೆಗಳು ನಡೆಸಿದ್ದು ಈ ಪೈಕಿ 9ರಲ್ಲಿ ಬಿಜೆಪಿ ಸೋಲು ಕಂಡಿದೆ. ಇದರಿಂದಾಗಿ ಲೋಕಸಭೆಯಲ್ಲಿ 282 ಸ್ಥಾನಗಳನ್ನು ಹೊಂದಿದ್ದ ಬಿಜೆಪಿಯ ಸಂಖ್ಯಾಬಲ ಇದೀಗ 272ಕ್ಕೆ ಕುಸಿದಿದೆ ಎಂದು ಶಿವಸೇನೆ ಬೆಟ್ಟು ಮಾಡಿದೆ.