Advertisement

ಹೆಚ್ಚಾಗುತ್ತಿದೆ ಭಿಕ್ಷಾಟನೆ; ಜಂಕ್ಷನ್‌ ಗಳೇ ಗುರಿ ; ಇಲಾಖೆಗಳಿಂದ ಬೇಕಿದೆ ಸೂಕ್ತ ಕ್ರಮ

05:56 PM Dec 19, 2022 | Team Udayavani |

ಮಹಾನಗರ: ವಿದ್ಯಾವಂತರ ಜಿಲ್ಲೆಯ ಗುರುತಿಸಿ ಕೊಂಡಿರುವ ಮಂಗಳೂರು ನಗರದಲ್ಲಿ ಭಿಕ್ಷಾಟನೆ ಹೆಚ್ಚಾಗುತ್ತಿದೆ. ಅದರಲ್ಲೂ ನಗರದ ವಿವಿಧ ಜಂಕ್ಷನ್‌ಗಳಲ್ಲಿ ಭಿಕ್ಷಾಟನೆಯಲ್ಲಿ ನಿರತ ಮಂದಿ ಕಾಣಸಿಗುತ್ತಾರೆ. ಇದು ನಗರಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ.

Advertisement

ಇತ್ತೀಚಿನ ದಿನಗಳಲ್ಲಿ ನಗರದ ವಿವಿಧ ಕಡೆಗಳಲ್ಲಿ ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿರುವುದು ಕಂಡು ಬರುತ್ತಿದೆ. ನಗರದ ನಂತೂರು, ಕೆಪಿಟಿ ಮತ್ತು ಪಂಪ್‌ವೆಲ್‌ ಭಾಗದಲ್ಲಿ ಡಿ. 15ರಂದು ಭಿಕ್ಷಾಟನೆಯಲ್ಲಿ ನಿರತರಾಗಿದ್ದ ಇಬ್ಬರು ಮಕ್ಕಳನ್ನು ಚೈಲ್ಡ್‌ಲೈನ್‌ನ ವತಿಯಿಂದ ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿ ಹಾಜರುಪಡಿಸಲಾಗಿದೆ. ಈ ರೀತಿಯ ಪ್ರಕರಣಗಳು ಕೆಲವು ತಿಂಗಳಿನಿಂದ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಾದ ಸಂಬಂಧಿತ ಇಲಾಖೆ ಮಾತ್ರ ಮೌನವಾಗಿದೆ.

ಹೆಚ್ಚಾಗಿ ಪೆನ್ನು, ಟವಲ್‌, ಮೊಬೈಲ್‌ ಸ್ಟಾಂಡ್‌ ಸಹಿತ ವಿವಿಧ ವಸ್ತುಗಳನ್ನು ಸಿಗ್ನಲ್‌ ಗಳಲ್ಲಿ ಮಾರಾಟ ಮಾಡುವ ತಂಡ ನಗರದ ವಿವಿಧೆಡೆ ಕಾರ್ಯಚರಿಸುತ್ತಿದೆ. ತಂಡದಲ್ಲಿ ಗಂಡು ಮಕ್ಕಳು ಮಾತ್ರವಲ್ಲದೆ, ಹೆಣ್ಣು ಮಕ್ಕಳು, ಯುವತಿಯರು, ಹಿರಿಯರು, ವೃದ್ಧರು ಎಲ್ಲರೂ ಸೇರಿಕೊಂಡಿದ್ದಾರೆ. ಪ್ರಮುಖವಾಗಿ ನಗರದ ಪಿ.ವಿ.ಎಸ್‌. ಜಂಕ್ಷನ್‌, ಲಾಲ್‌ಬಾಗ್‌, ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ, ಸ್ಟೇಟ್‌ಬ್ಯಾಂಕ್‌, ನಂತೂರು ವೃತ್ತ ಸಹಿತ ವಿವಿಧ ಜಂಕ್ಷನ್‌ ಗಳಲ್ಲಿ ಮಾರಾಟ ಸಾಗುತ್ತಿದೆ.

ಲಾಲ್‌ಬಾಗ್‌ ಬಳಿ ಸ್ಥಳೀಯರೊಬ್ಬರು “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ, “ನಗರದಲ್ಲಿ ಭಿಕ್ಷಾಟನೆ ಹೆಚ್ಚುತ್ತಿದೆ. ಜಂಕ್ಷನ್‌ ಗಳೇ ಅವರ ಟಾರ್ಗೆಟ್‌ ಆಗುತ್ತಿದೆ. ಕೆಲವು ಕಡೆ ಭಿಕ್ಷೆ ನೀಡದಿದ್ದರೆ ಗದರಿಸುವುದೂ ನಡೆಯುತ್ತದೆ. ಸಂಬಂಧಪಟ್ಟ ಇಲಾಖೆ ಮಾತ್ರ ಮೌನವಾಗಿದ್ದು, ತತ್‌ಕ್ಷಣ ಭಿಕ್ಷಾಟನೆ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ.

1098ಗೆ ಕರೆ ಮಾಡಿ
ಭಿಕ್ಷಾಟನೆಯನ್ನು ನಿಷೇಧಿಸಲಾಗಿದ್ದು, ಇನ್ನು ನಿಯಮದ ಉಲ್ಲಂಘನೆಯಾಗುತ್ತದೆ. ನಗರದ ನಂತೂರು ಭಾಗದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ ಮಕ್ಕಳನ್ನು ಇತ್ತೀಚೆಗೆ ರಕ್ಷಿಸಲಾಗಿದೆ. ಮುಂದಿನ ದಿನಗಳಲ್ಲಿ ನಗರದಲ್ಲಿ ಮಕ್ಕಳು ಭಿಕ್ಷೆ ಬೇಡುತ್ತಿದ್ದರೆ ಸಾರ್ವಜನಿಕರು ಚೈಲ್ಡ್‌ ಲೈನ್‌ ಗಮನಕ್ಕೆ ತರಬಹುದು. 1098 ಟೋಲ್‌ ಪ್ರೀ ನಂಬರ್‌ಗೆ ಕರೆ ಮಾಡಿ ಮಾಹಿತಿ ನೀಡಬಹುದು.
-ರೆನ್ನಿ ಡಿ”ಸೋಜಾ, ಚೈಲ್ಡ್‌ಲೈನ್‌ ವೆಲ್ಫೆರ್‌ ಕಮಿಟಿ ಚೇರ್‌ಪರ್ಸನ್‌

Advertisement

ತಿಂಗಳಲ್ಲಿ 12 ಕರೆ
ಮಕ್ಕಳು ಭಿಕ್ಷಾಟನೆ ಮಾಡುತ್ತಿರುವ ಬಗ್ಗೆ ಚೈಲ್ಡ್‌ಲೈನ್‌ಗೆ ಒಂದು ತಿಂಗಳಿನಲ್ಲಿ ಒಟ್ಟು 12 ಕರೆಗಳು ಬಂದಿವೆ. ಕಳೆದ ತಿಂಗಳು ಐದು ಕರೆಗಳು ಬಂದಿವೆ. ಸದ್ಯ ಇಬ್ಬರು ಮಕ್ಕಳನ್ನು ರಕ್ಷಿಸಲಾಗಿದ್ದು ಚಿಲ್ಡ್ರನ್‌ ಹೋಂನಲ್ಲಿ ಇರಿಸಲಾಗಿದೆ. ಈ ರೀತಿ ಭಿಕ್ಷೆ ಬೇಡುವುದು ಕಂಡುಬಂದರೆ ಪೊಲೀಸರ ಸಹಾಯದ ಮೂಲಕ ರಕ್ಷಿಸಲಾಗುತ್ತದೆ ಮತ್ತು ಅವರ ಮೇಲೆ ಪ್ರಕರಣವನ್ನೂ ದಾಖಲು ಮಾಡಲಾಗುತ್ತದೆ. ಬಳಿಕ ಚಿಲ್ಡ್ರನ್‌ ಹೋಂನಲ್ಲಿ ಇರಿಸಲಾಗುತ್ತದೆ. ಮಕ್ಕಳ  ಹೆತ್ತವರಿದ್ದರೆ ಅವರು ಮಕ್ಕಳ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿಗೆ ಸಮರ್ಪಕ ದಾಖಲೆ ನೀಡಬೇಕಾಗುತ್ತದೆ.

ಕಂಕುಳದಲ್ಲಿ ಮಗು; ಕೈಯಲ್ಲಿ ಪೆನ್ನು
ಕೆಲವು ಕಡೆಗಳಲ್ಲಿ ಕಂಕುಳದಲ್ಲಿ ಮಗು ಇಟ್ಟುಕೊಂಡು ಭಿಕ್ಷಾಟನೆಯಲ್ಲಿ ತೊಡಗಿಕೊಳ್ಳುವ ತಂಡವೂ ನಗರದಲ್ಲಿದೆ. ನಗರದ ವಿವಿಧ ಜಂಕ್ಷನ್‌ಗಳಲ್ಲಿ ಒಂದು ಕೈಯಲ್ಲಿ ಮಗು ಹಿಡಿದು ಮತ್ತೂಂದು ಕೈಯಲ್ಲಿ ಪೆನ್ನು ಮಾರುತ್ತಿರುವ ದೃಶ್ಯ ಕಂಡುಬರುತ್ತಿದೆ. ಮಗುವಿಗೆ ಊಟಕ್ಕೆಂದು ಭಿಕ್ಷೆ ಕೇಳುತ್ತಿದ್ದಾರೆ. ಹೊರ ರಾಜ್ಯಗಳ ಕೆಲವು ಕುಟುಂಬಗಳೇ ಭಿಕ್ಷಾಟನೆಯಲ್ಲಿ ತೊಡಗಿಕೊಳ್ಳುತ್ತಿದೆ. ಜಂಕ್ಷನ್‌ಗಳಲ್ಲಿ, ಸಿಗ್ನಲ್‌ ಬೀಳುವ ವೇಳೆ ಭಿಕ್ಷಾಟನೆಯಲ್ಲಿ ಅವರು ನಿರತರಾಗಿರುತ್ತಾರೆ.

*ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next