Advertisement
ತಂತ್ರಜ್ಞಾನ ಜೀವನವನ್ನು ಸರಳಗೊಳಿಸಿರುವ ಜತೆ ಜತೆಗೆ ಸಂಬಂಧವನ್ನೂ, ಸಾಮಾಜಿಕ ಮೌಲ್ಯವನ್ನೂ ಸಂಕೀರ್ಣಗೊಳಿಸಿರುವುದು ಕೂಡ ಅಷ್ಟೇ ಸತ್ಯ. ನಮ್ಮ ದಿನ ಆರಂಭವಾಗುವುದು ಮತ್ತು ಅಂತ್ಯವಾಗುವುದು ಸಾಮಾಜಿಕ ಜಾಲತಾಣದೊಂದಿಗೇ ಎನ್ನುವುದು ವಿಷಾದದ ಸಂಗತಿ.
ಇತ್ತೀಚೆಗೆ ತೆರೆಕಂಡ ಮಲೆಯಾಳಂ ಚಿತ್ರ “ವಿಕೃತಿ’ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ಬಗ್ಗೆ ಚರ್ಚಿಸುತ್ತದೆ. ಸಿಕ್ಕ ಸಿಕ್ಕ ಫೋಟೋಗಳನ್ನು ಕ್ಲಿಕ್ಕಿಸಿ “ವೈರಲ್’ ಮಾಡುತ್ತಿರುವ ನಮ್ಮ ಮನಃಸ್ಥಿತಿಯನ್ನು ಟೀಕಿಸುವುದರೊಂದಿಗೆ ಇದಕ್ಕೆ “ಆಹಾರ’ವಾಗುವ ವ್ಯಕ್ತಿಯ ಜೀವನದಲ್ಲಾಗುವ ತಲ್ಲಣಗಳನ್ನು ತೆರೆದಿಡುತ್ತದೆ. ಮಾತು ಬಾರದ, ಕಿವಿ ಕೇಳದ ಎಲ್ದೊ ಮತ್ತು ಎಲ್ಸಿ ದಂಪತಿಗೆ ಇಬ್ಬರು ಮಕ್ಕಳು. ಎಲ್ದೊ ಶಾಲೆಯೊಂದರಲ್ಲಿ ಕ್ಲರ್ಕ್ ಆಗಿದ್ದರೆ, ಎಲ್ಸಿ ಗಾರ್ಮೆಂಟ್ಸ್ ಉದ್ಯೋಗಿ. ಇತ್ತ ವಿದೇಶದಲ್ಲಿ ಉದ್ಯೋಗದಲ್ಲಿರುವ ಸಮೀರ್ ರಜೆಯಲ್ಲಿ ಊರಿಗೆ ಬರುತ್ತಾನೆ. ಪ್ರತಿಯೊಂದನ್ನೂ ವಾಟ್ಸಾಪ್, ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡುವುದು ಸಮೀರ್‌ನ ಹವ್ಯಾಸ. ಒಂದು ದಿನ ಎಲ್ದೊ ಮಗಳು ಹುಷಾರಿಲ್ಲದೆ ಆಸ್ಪತ್ರೆ ದಾಖಲಾಗುತ್ತಾಳೆ. ಅವಳ ಜತೆ ಆಸ್ಪತ್ರೆಯಲ್ಲಿರುತ್ತಾನೆ ಎಲ್ದೊ. ಎರಡು ದಿನ ಬಿಟ್ಟು ಮನೆಗೆ ಹೊರಡುತ್ತಾನೆ. ನಿದ್ದೆ ಇಲ್ಲದ ಕಾರಣ ಮೆಟ್ರೋ ಹತ್ತಿದವನು ಅಲ್ಲೇ ನಿದ್ದೆ ಹೋಗುತ್ತಾನೆ. ಅದೇ ರೈಲಿನಲ್ಲಿರುವ ಸಮೀರ್ ಇದ್ಯಾವುದೂ ತಿಳಿಯದೆ ಎಲ್ದೊ ಮಲಗಿರುವ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್ ಮಾಡುತ್ತಾನೆ. ಅದು ವೈರಲ್ ಆಗಿ ಎಲ್ದೊವನ್ನು ಅಮಾನತುಗೊಳಿಸಲಾಗುತ್ತದೆ. ಮುಂದೆ ಆತನ ಮೇಲಿನ ಆರೋಪ ನಿವಾರಣೆಗೆ ದೊಡ್ಡ ಹೋರಾಟವೇ ಮಾಡಬೇಕಾಗುತ್ತದೆ. ಈ ಸಮಯದಲ್ಲಿ ಆತ ಎದುರಿಸುವ ಅವಮಾನ, ಅವನ ಮನೆಯವರನ್ನು ಸಮಾಜ ನೋಡುವ ರೀತಿಯನ್ನು ಮನಮುಟ್ಟುವಂತೆ, ನೈಜವಾಗಿ ಚಿತ್ರಿಸಲಾಗಿದೆ.
Related Articles
Advertisement
ಹೊರಬನ್ನಿಅತಿಯಾದ ಮೊಬೈಲ್, ಸಾಮಾಜಿಕ ಜಾಲತಾಣಗಳ ಬಳಕೆ ದೇಹಾರೋಗ್ಯದ ಜತೆಗೆ ಸಂಬಂಧಗಳ ಆರೋಗ್ಯವನ್ನೂ ಬಾಧಿಸುತ್ತದೆ. ಆದ್ದರಿಂದ ಆಧುನಿಕ ತಂತ್ರಜ್ಞಾನಗಳನ್ನು ಅಗತ್ಯಕ್ಕೆ ತಕ್ಕಷ್ಟು ಮಾತ್ರ ಉಪಯೋಗಿಸುವುದನ್ನು ರೂಢಿಸಿಕೊಳ್ಳಿ. ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡದೆಯೂ ಒಂದೆಡೆಯಿಂದ ಇನ್ನೊಂದೆಡೆಗೆ ಸಂಚರಿಸಬಹುದು ಎನ್ನುವುದನ್ನು ಮರೆಯದಿರೋಣ. - ಆರ್.ಬಿ.