Advertisement

ಮಾತಿಗೆ ಮುನ್ನ: ಭಾವ-ವಿಕಾಸ

07:30 AM Mar 25, 2018 | |

ಭಾವವೊಂದನ್ನು ಹಿಡಿದು ತನ್ನ ನುಡಿಯಲ್ಲಿ ಆಲಾಪಿಸಹೊರಡುವ ಕವಿತೆಯು ಆ ಭಾವದ ಎಲ್ಲ ಮುಖಗಳನ್ನೂ ಪ್ರಕಟಿಸುತ್ತದೆ ಎಂದೇನೂ ಇಲ್ಲ. ಪ್ರಕಟಿಸಬೇಕೆಂದೂ ಇಲ್ಲ. ಒಂದು ರೀತಿಯಲ್ಲಿ ಇದು ಅಸಾಧ್ಯವೆಂದೂ ಹೇಳಬಹುದು. ಏಕೆಂದರೆ, ಭಾವವೊಂದು ನಮಗೆ ಪರಿಚಿತವಾದ ರೀತಿಗಳಲ್ಲಿ ಮಾತ್ರವಲ್ಲ ಅನೂಹ್ಯವಾದ ಹಾದಿಗಳಲ್ಲೂ ವಿಕಾಸಗೊಳ್ಳಬಹುದು. ಪ್ರಜ್ಞಾಪೂರ್ವಕವಾಗಿ ಭಾವವೊಂದನ್ನು ಕವಿಯು ಬೆಳೆಸುತ್ತ ಹೋಗುವುದು ನಮಗೆ ಪರಿಚಿತವಾಗಿರುವಂಥದ್ದು. ಆದರೆ, ಭಾವದ ಸೆಳವಿಗೆ ಸಿಕ್ಕಿ ಎಲ್ಲಿಗೆ ಬೇಕಾದರೂ ನನ್ನನ್ನು ಒಯ್ದುಬಿಡು ಎಂದು ಕವಿ ತನ್ನನ್ನು ಒಪ್ಪಿಸಿಕೊಂಡಂಥ ಕವಿತೆಗಳು ಸಾಮಾನ್ಯವಾಗಿ ನಮಗೆ ಅಪರಿಚಿತವಾಗಿರುವಂಥವು ಮತ್ತು ಇಂಥ ಕವಿತೆಗಳೂ ವಿರಳವಾಗಿರುವಂಥವು. ಅಲ್ಲದೆ ಬಿದ್ದ ಬಾಳೆಯ ಗಿಡದ ಗೊನೆ ಬಿದ್ದಲ್ಲಿಯೇ ಬೆಳೆಯುವಂತೆ- ಕವಿತೆಯು ಹೇಗೂ, ಯಾವ ಅವಸ್ಥೆಯಲ್ಲಿಯೂ ಬೆಳೆಯಬಹುದು! ತಾನು ಭಾವಲೋಕವನ್ನು ಪೂರ್ತಿಯಾಗಿ ಅಭಿವ್ಯಕ್ತಿಸಲಾರೆನೆನ್ನುವ ಕೊರಗೂ ಅಭಿವ್ಯಕ್ತಿಯ ಅಂಗವೇ ಆಗಿ, ಅಭಿವ್ಯಕ್ತಿಗೇ ಹೊಸ ಕಸುವನ್ನು ಕೊಡುವಂತೆ! ಯಾವುದೋ ಸಂದರ್ಭದಲ್ಲಿ ತಾನು ತಪ್ಪಿ ನಡೆದೆನೆನ್ನುವ ಭಾವದ ಕವಿತೆ ತನ್ನ ಪಾಪಪ್ರಜ್ಞೆಯ ನುಡಿಗಳ ಮೂಲಕವೇ ಪಾಪವನ್ನು ಮೀರಿದ ಭಾವವನ್ನು ಸೃಷ್ಟಿಸುವಂತೆ ! ಅಲ್ಲದೆ ಒಂದೇ ಭಾವ, ಒಬ್ಬನೇ ಕವಿಯ, ಕವಯಿತ್ರಿಯ, ಅನೇಕ ಕವಿತೆಗಳಲ್ಲಿ ಬಗೆಬಗೆಗಳಲ್ಲಿ ಬೆಳೆಯಬಹುದು ಮತ್ತು ಅನೇಕ ಕವಿಗಳು ಒಂದೇ ಭಾವವನ್ನು ತಮ್ಮ ತಮ್ಮದೇ ರೀತಿಗಳಲ್ಲಿ ಬೆಳೆಸಬಹುದು. ಈ ಹಿನ್ನೆಲೆಯಲ್ಲಿ ಬೇಂದ್ರೆಯವರ ತುಸು ಅಪರೂಪದ್ದೆನ್ನುವ-ತಪ್ಪೊಪ್ಪಿಗೆಯ ರೀತಿಯ-ಒಂದು ಪದ್ಯವನ್ನು ನೋಡೋಣ. ಈ ಕವಿತೆಗೆ ಮೊದಲು ಗೆ ಎನ್ನುವ ಶೀರ್ಷಿಕೆ ಇತ್ತು. ಅದು ಹೆಚ್ಚು ಅರ್ಥಪೂರ್ಣವಿತ್ತು. ಈಗ ಕದ್ದು ನೋಡುವ ಕನ್ಯೆಎನ್ನುವ  ಹೆಸರಿನಲ್ಲಿದೆ. ಪ್ರಾಯಃ ಈ ಬದಲಾವಣೆಯನ್ನು ಬೇಂದ್ರೆಯವರು ಮಾಡಿದ್ದಿರಲಾರರು. ಅದಿರಲಿ. ಕವಿತೆ ಹೀಗೆ ಮೊದಲಾಗುತ್ತದೆ: 

Advertisement

ಕದ್ದು ನೋಡುವ ಕನ್ಯೆ ಎದ್ದು ಮೂಡಿಹುದಿಲ್ಲಿ
ಮುದ್ದು ಮೂರುತಿಯು ಮನದಲ್ಲಿ
ತಿದ್ದುತಿದೆ ರಾಗದಲಿ ಚಿತ್ತವೃತ್ತಿಗಳನ್ನು
ಆಡುವದದೆಂತು ಜನದಲ್ಲಿ?

ಕವಿ; ಹೆಸರಾಂತ ಕವಿ. ಅಂದ ಮೇಲೆ ಜನರ ನಡುವೆ ತನ್ನ ಹೆಸರನ್ನು ಕಾಪಾಡಿಕೊಳ್ಳಬೇಕು. ಓಪ್ಪ , ಓರಣ, ಸಂಸ್ಕೃತಿಸಂಪನ್ನ ನುಡಿಗಳನ್ನಷ್ಟೆ ಬಿತ್ತರಿಸಬೇಕಾದ ಧ್ವನಿವರ್ಧಕದಂತೆ ಕವಿಯ ಕಲಕಂಠವನ್ನು ಜನ ಮಾಡಿಬಿಡುವರು. ಮನದೊಳಗಿನ ಮಾತಾಡಿದರೆ ಅದು ಓರಣಗೆಟ್ಟ ಮಾತಾಗಬಹುದು. ಏಕೆಂದರೆ ಕನ್ಯೆಯ ಚಿತ್ರ ತಿದ್ದುತಿದೆ ರಾಗದಲಿ ಚಿತ್ತವೃತ್ತಿಗಳನ್ನು. ಹಾಗಾಗಿ- ಆಡುವದದೆಂತು ಜನದಲ್ಲಿ?

ಕವಿ ರವೀಂದ್ರರ ಬಾಳಿನಲ್ಲಿಯೂ ಇಂಥ ವಿವರಗಳಿವೆ. ತನ್ನ ಇಮೇಜ್‌ ಅನ್ನು ಉಳಿಸಿಕೊಳ್ಳುವುದಕ್ಕಾಗಿ ಒಳಮನದ ಅನುಭವಗಳನ್ನು ಹೇಳಲಾಗದ ಪಾಡು. ಸೃಷ್ಟಿಶೀಲತೆ ತನ್ನಲ್ಲೇ ಆರ್ತವಾಗಿ ಕೊರಗುವ ಪಾಡು. ರವೀಂದ್ರರ ಅನುಭವವೇ ಬೇಂದ್ರೆಯವರಲ್ಲಿಯೂ ಹಣಕಿತೆ? ಆದರೆ, ಕವಿ ತನ್ನ ಅನುಭವದ ಕುರಿತೇ ಆ ಅನುಭವದ ಸಹಭಾಗಿನಿಯಾಗಿ ಕನ್ಯೆಯಲ್ಲೇ ಮುಕ್ತವಾಗಿ ಮಾತಾಡತೊಡಗುತ್ತಾನೆ; ಬೇರೆ ದಾರಿಗಳನ್ನು ಹುಡುಕದೆ. ಮಾತಿನಲ್ಲಿ ತಪ್ಪೊಪ್ಪಿಗೆಯ ಭಾವವಿದೆ. ಏಕೆ ತಪ್ಪೆನ್ನುವುದಕ್ಕೆ ಕಾರಣಗಳೂ ಇವೆ.

ಮುಗ್ಧ ಕುವರಿಯೆ ನಾನು ಗೃಹಿಯಾಗಿ ನಿನ್ನನ್ನು 
ನಲ್ನೋಟ ಬೇಟಕೆಳಸಿ
ದುಗ್ಧ ದೃಷ್ಟಿಯ ನಿಂದು ಕದಡಿಸಿದೆ ಕಣ್ಣ
ತಾರಾ ಮೈತ್ರಿಯನ್ನು ಬೆಳಸಿ

ನೀನು ಮುಗ್ಧ ಹುಡುಗಿ. ನಿನ್ನದು ಹಾಲ್ಬಿಳುಪಿನ ದೃಷ್ಟಿ . ನಾನು ಬೇರೆಯೇ ಒಂದು ನೋಟದಿಂದ ನಿನ್ನ ನೋಡಿದೆ. ನೋಡಿ ಆ ಬಿಳುಪನ್ನು ಕದಡಿಸಿದೆನೆ? ತಾರಾಮೈತ್ರಿ- ಎಂದರೆ ನಾಲ್ಕು ಕಣ್ಣುಗಳು ಕೂಡುವುದು. ತಾರಾ ಎಂದರೆ ಕಣ್ಣಿನ ಕಪ್ಪು. ಕಣ್ಮಣಿ. ಕನೀನಿಕೆ. ನಮಗೆ ನೋಟವನ್ನು ಸಾಧ್ಯವಾಗಿಸುವ ಕಣ್ಣಿನ ಕಪ್ಪು , ಹಾಲ್ಬಿಳುಪಿನ ಮುಗ್ಧತೆಯನ್ನು ಕೆಡಿಸುವ ಕೆಟ್ಟ ದೃಷ್ಟಿಯನ್ನು ಬೀರಿ ಕಪ್ಪು ಚುಕ್ಕಿಯಾಗಿಬಿಟ್ಟಿತೆ? ಕಣ್ಣಿನಲ್ಲಿಯೇ ಬಿಳಿಯನಡುವೆ ಇರುವ ಕಣ್ಮಣಿ, ಬಿಳಿಯ ನಡುವಿನ ಕಪ್ಪು ಚುಕ್ಕಿಯಂತಾಗಬಹುದು! ಹೀಗೆಂದು ಸೂಚಿಸುವುದು-ಬೇಂದ್ರೆ ಪ್ರತಿಭೆ !
ತಪ್ಪಾಗಿರಬಹುದು, ನಿಜ. ಆದರೆ ಅನುಭವವು ಕೇವಲ ಅನುಭವ-ಅಷ್ಟೆ. ಅದು ಪಾಪ-ಪುಣ್ಯಗಳನ್ನು ಸರಿ-ತಪ್ಪುಗಳನ್ನು ಮೀರಿದ್ದು.

ಪಾಪವೋ ಪುಣ್ಯವೋ ತಿಳಿಯದವರಿಗೆ.
ನಿನ್ನಮುಖತೀರ್ಥಕೆಂದು ಬಂದೆ. 
ಶಾಪ ಕೊಡದಿರು ಎನಗೆ ತಿಳಿದಮೇಲ್‌ ಮುನಿಸಾಗಿ
ಹೇ ಕುವರಿ ಗೌರಿ ವಂದೇ

Advertisement

ಈಗ ಕನ್ಯೆ ಗೌರಿಯಂತೆ ಎಂಬ ಭಾವ ಕವಿಯಲ್ಲಿ ಬೆಳೆದಿದೆ; ಬೆಳೆದು ಇವಳತ್ತ ತಾನು ಆಕರ್ಷಿತನಾದದ್ದು ಸಹಜ ಎನ್ನುವ ಹೊಳಹು ಕೂಡ ಹೊಳೆದಿದೆ. ಈ ಸಾಲು ನೋಡಿ: ಸೃಷ್ಟಿ ಚುಂಬಕ ನಿನ್ನ ದೃಷ್ಟಿಯಲಿ ನನ್ನ ಸಂಚಾರಿ ಮನವ ಕರೆದೆ ಅಂದರೆ ತಾನು ಈ ಕರೆಗೆ ಓಗೊಡದಿರಲು ಸಾಧ್ಯವೆ? ಎಂಬ ಭಾವ. ಅಲ್ಲದೆ ಇನ್ನೊಂದು ಅಚ್ಚರಿ ಕೂಡ ನಡೆದಿದೆ. ಅದೆಂದರೆ, ಮುಗ್ಧವಾದುದನ್ನು ಕಂಡು ತಾನು ಮುಗ್ಧನೇ ಆಗಿ ಅದರಿಂದ ಶುದ್ಧನೇ ಆಗಬಹುದೆನ್ನುವ ಭಾವ.

ಮುಖತೀರ್ಥದಲಿ ಮಿಂದು ದೃಷ್ಟಿ ಪಾವನವಾಗಿ ಬರಲೆಂದು ಹರಕೆ ಹೊತ್ತು ಸುಖೀಯಾಗಿ ನೋಡುತಿಹೆ. ಶುದ್ಧವಾಗುವುದೆಲ್ಲ
ನಿನ್ನದದು ನಿನಗೆ ಗೊತ್ತು. ತೀರ್ಥದಲಿ ಮಿಂದರೆ ಮಡಿಯಾಗುವುದಿಲ್ಲವೆ? ನೋಟವೂ ಕಣ್ಣು ಮಿಂದಂತೆ ಅಲ್ಲವೆ? ನೋಟವೊಂದು ಸುಖಾನುಭವ. ಅದು ಮೈಲಿಗೆಯಾಗುವುದು ಹೇಗೆ? ಈ ಭಾವನೆಗಳೆಲ್ಲ ತನ್ನಲ್ಲಿ ನಡೆಯುತ್ತಿವೆ. ಕನ್ಯೆಯ ಮನದಲ್ಲಿ ಏನು ನಡೆಯುತ್ತಿದೆಯೋ! ನಿನ್ನ ಚಿತ್ತದಲಾವ ವೃತ್ತಿಗಳು ಅರಳಿಹವೋ ಅನುಭವವ ಬಲ್ಲೆ ನೀನೇ ಅವಳೇನೂ ಹೇಳುವುದಿಲ್ಲ. ಆದರೆ, ಈ ಧಾಟಿಗೆ ಹೊರಳಿದಂತೆ ಕವಿಗೆ ಒಳಗಿಂದಲೇ ಅನ್ನಿಸತೊಡಗಿದೆ-ಸೃಷ್ಟಿ ಚುಂಬಕವಾಗಿ ಸೆಳೆಯಬಲ್ಲವಳು ಮೇಲೆತ್ತಲೂ ಬಲ್ಲಳೆಂದು ಮತ್ತು ತನ್ನ ನೋಟದಲ್ಲೇ ತಾನು ಎಡವುತ್ತಿದ್ದೇನೆಂದು ಮತ್ತು ತಾನು ನೋಡಿದ್ದೇ ತನ್ನನ್ನು ಮೇಲೆತ್ತಬಲ್ಲುದೆಂದು!
ಬಿಡದೆನ್ನ ನಿನ್ನೆದೆಯ ನೀರಿನಿಂದೆರೆದೆನ್ನ  ಮನದುರಿಯನಾರಿಸವ್ವ ಕುಡುಕು ಮನವಿತ್ತೀಚೆ ಅಡಿಗಡಿಗೆ ಎಡವುತಿದೆ ಪತನವ ನಿವಾರಿಸವ್ವ ಎದೆಯ ನೀರೆಂದರೆ ಕರುಣೆ! ಅದರಿಂದಲೇ “ಅವ್ವ’ ಎಂಬ ಕರೆ.

ಕೊನೆಯಲ್ಲಿ ಈ ಭಾವಗಳೆಲ್ಲ ಕವಿತೆಯಾಗುವ ಪ್ರಕ್ರಿಯೆಯ ಕುರಿತು-ಪಾಡು ಹಾಡಾಗುವ ಕುರಿತು. ಹುರುಳು ತಿಳಿಯದೆ ಅಮ್ಮ? ಇಂತಹ ವಿಕಾರಗಳ ಏನಾಗುದೇನು ಪಾಡು? ಕರುಳವಳ್ಳಿಯ ಕುಡಿಯ ಚಿವುಟಿ ಸೊಸೆಗರೆಸುತಿಹೆ ಇಂಥ ಹಾಲುಳ್ಳ ಹಾಡು ಕರುಳ ಕುಡಿ ಚಿವುಟಿ ಒಸರಿದ ಸೊನೆಯೇ ಈ ಹಾಡು! ಕರುಳಿನ ಇಂಥ ನೋವಿಗೆ ಎದೆಯ ನೀರೇ ಎರೆಯಬೇಕು. “ಸಖೀಗೀತ’ದಲ್ಲಿ ಈ ಸಾಲಿಗೆ ಸಂವಾದಿಯಾದ ಸಾಲೊಂದನ್ನು ಬೇಂದ್ರೆ ಹೇಳಿದ್ದರು. ಆ ಸಾಲು- ಕರುಳಿನ ತೊಡಕನು ಕುಸುರಾಗಿ ಬಿಡಿಸಿಟ್ಟು ತೊಡವಾಗಿ ತಿರಗೊಮ್ಮೆ ನಾ ಧರಿಸಲೆ? ಕರುಳಿನ ತೊಡಕೇ ತೊಡವಾಗಿ ಕವಿಯ ಲಾಂಛನವಾಗುವುದು. ತನ್ನ ಕರುಳಿನ ಮಾಲೆ ತಾನೇ ಕೊರಳಿಗೆ ಹಾಕಿಕೊಂಡು ತೂಗಾಡುವುದೇ ಕವಿಯ ಅದೃಷ್ಟವಿರಬೇಕು! 

ಈ ಕವಿತೆಯೂ ಸಖೀಗೀತವೇ. ಬೇಂದ್ರೆ ಹೇಳಿದ್ದರು- ಕಾವ್ಯಚರಿತೆಯೆ ಸಾಕು, ಬೇರೆ ಚಾರಿತ್ರ್ಯವೇಕೆ ಬೇಕು? ಎಲ್ಲ ಭಾವಗಳಿಗೂ ಅಭಿವ್ಯಕ್ತಿ ಕೊಡುವ ಚಾರಿತ್ರ್ಯವೇ ಕಾವ್ಯ ಚಾರಿತ್ರ್ಯ. ತನ್ನನ್ನೇ ಪ್ರಯೋಗಕ್ಕೆ ಒಡ್ಡುವ ಚಾರಿತ್ರ್ಯವೇ ಕಾವ್ಯ ಚಾರಿತ್ರ್ಯ. ಆಡುವದದೆಂತು ಜನರಲ್ಲಿ? ಎಂಬ ಹಿಂಜರಿಕೆಯನ್ನು ಒಮ್ಮೆ ಅನುಭವಿಸಿ, ಆಮೇಲೆ ಅದನ್ನು ಮೀರಿನಿಂತು ನಿಚ್ಚಳ ಅಭಿವ್ಯಕ್ತಿಯನ್ನು ಕಂಡುಕೊಂಡದ್ದೇ-ಕಾವ್ಯಚಾರಿತ್ರ್ಯ. ಬೇಂದ್ರೆಯವರಿಗೆ ತಾನು ಸೋತು ತನ್ನ ಕಾವ್ಯ ಚಾರಿತ್ರ್ಯವನ್ನು ಗೆಲ್ಲಿಸುವ ಹುಮ್ಮಸ !
ಗೋಪಾಲಕೃಷ್ಣ ಅಡಿಗರ ಕವಿತೆಯೊಂದಿದೆ. ಇದೇ ಭಾವವನ್ನು ಹಿಡಿದು ಇನ್ನೊಂದು ಬಗೆಯ ಬೆಳವಣಿಗೆಯನ್ನು ಕಾಣಿಸಿದ ಹದಿನೈದು ಸಾಲುಗಳ ಪುಟ್ಟ ಕವಿತೆ. “ಸಂತೋಷವಾಗುತ್ತದೆ’ ಎಂದು ಕವಿತೆಯ ಹೆಸರು. ಕವಿತೆ ಹೀಗಿದೆ:

ಸಂತೋಷವಾಗುತ್ತದೆ ಚೆಲುವೆ ಬಳು ಬಳುಕಿ ಸಮೀಪಕ್ಕೆ
ಬಂದು ಮಂದಹಾಸ ಸೂಸಿದರೆ; ಕೊಂಚ ಬೆಚ್ಚಗಾಗಿ ಮನಸ್ಸು ರವಷ್ಟು
ಕಂಪಿಸುತ್ತದೆ; ಕಾವೇರುವುದಿಲ್ಲ. ಕಾದು ಕೆಂಪಾಗಿ ಕಾಯಕರೇಣು
ಮತ್ತೇರಿ ಅಂಬಾರಿ ಸುಟ್ಟು ಅಂಕುಶಕೆಟ್ಟು ದಿಕ್ಕಾಪಾಲು  ಳಿಡುವುದಿಲ್ಲ ;
ಅಗ್ನಿಸ್ತಂಭವಾಗಿ ನಿಲ್ಲುವುದಿಲ್ಲ. ಅಥವಾ ಕಿಶೋರ ಭೀರು
ಹಿಮ್ಮೆಟ್ಟಿ ಮುಖೇಡಿ ಮೂಲೆಗೆ ಸೇರಿ ತಲೆತಗ್ಗಿ ನಿಲ್ಲುವುದಿಲ್ಲ.
ದೇವರ ಮುಂದೆ ತುಪ್ಪದ ದೀಪ ಹಚ್ಚಿಟ್ಟ ಹಾಗೆ. ಸಂಪೂರ್ಣ
ಅರಳಿದ ಸ್ವಸಂಪೂರ್ಣ ಗುಲಾಬಿಹೂವಿನ ಬಳಿಗೆ
ನಿಂತು ಅದರ ಅಪೂರ್ವ ಪರಿಮಳಕ್ಕೆ ಸಮತಾ ಹೊಡೆದ ಹಾಗೆ.
ಎಲ್ಲಿಂದಲೋ ಬರುವ ಕೋಗಿಲೆಯ ಸುಸ್ವರದ ಸರಿಗಮದ
ಆಲಾಪನೆಗೆ ಆಪ್ತವಾದಂತೆ ಪಶ್ಚಾತ್ತಾಪವಿಲ್ಲ.
ಮಾಗುತ್ತಿರುವ ಕಾಯಲ್ಲಿ ಮಲಗಿದ ಬೇರಿ
ಗೇಕೆ ನೆಲಕ್ಕಿಳಿದು ತಡಕಿ ಹುಡುಕುವ ಚಪಲ? ಬೂದಿ
ಪದರು ಪದರುಗಳ ಒಳತಳಕ್ಕೆಲ್ಲೋ ಕಿಡಿಕುಳಿತ ಮುಗಿಯುವ ಕೆಂಡ:
ಮಂದಾಸನದ ಮೇಲೆ ನಮ್ಮಾದಿ ಅಮ್ಮಂದೊ ಅಪ್ಪಂದೊ ವಿಗ್ರಹವಿಟ್ಟ ಬೆಳ್ಳಿಯ ಕರಂಡ

ಮನಸ್ಸು ಕಂಪಿಸದೆ ಕಾವ್ಯವೇ ಇಲ್ಲ. ಯಾವ ಚೆಲುವೂ ಇಲ್ಲ. ಕಂಪಿಸುವುದು ಒಂದು ಬಗೆಯ ನೋವು ಕೂಡ. ಆದರೆ, ರವಷ್ಟು ಕಂಪನ ಸಾಕು; ಭೂಕಂಪನದಂತೆ ತೀವ್ರವಾಗಿ ಅದು ಬೆಳೆಯಬಹುದು. ಕವಿತೆಯಲ್ಲಿ ಹಾಗೆ ಬೆಳೆಯಿತು ಕೂಡ. ಆದರೆ ಅದು ಮತ್ತೇರಿ  àಳಿಟ್ಟ ನೆನಪು ಮಾತ್ರ. ಮತ್ತೆ ಅದು ಕೆಳಗಿಳಿದು ಮುಗಿಯುತ್ತಿರುವ ಕೆಂಡದಲ್ಲಿ ಆರುತ್ತಿರುವ ಬಿಸಿಯಾಗಿ ತನ್ನನ್ನು ತಾನು ಒಪ್ಪಿಕುಳಿತಿದೆ. ತನ್ನನ್ನು ತಾನು ಒಪ್ಪಿದ ಕಿಡಿ-ಸುಡದ ಕಿಡಿ! ಬಳಿಗೆ ಬಂದ ಚೆಲುವೆ ಸಹಜ ನಗುಸೂಸಿ ಏನು ಮಾಡಿದಳೆಂದರೆ-ಕವಿ ತನ್ನನ್ನು ತಾನು ಒಪ್ಪುವಂತೆ ಮಾಡಿದಳು!- ಎಲ್ಲ ಕಂಪನಗಳೂ ಕೃತಕೃತ್ಯವಾದವು! ಇದು ಬೇರೆ ಬಗೆ.

–ಲಕ್ಷ್ಮೀಶ ತೋಳ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next