Advertisement

ಸುಖಾಸುಮ್ಮನೆ ಗೀಚುವ ಮುನ್ನ…ಸಾಮಾಜಿಕ ಜಾಲತಾಣದ ಮೇಲೆ ಆಯೋಗದ ಕಣ್ಣು

01:33 PM Apr 04, 2023 | Team Udayavani |

ಉಡುಪಿ: ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಚರ್ಚೆ, ಪರ, ವಿರೋಧ ಪ್ರಚಾರ ಭರಾಟೆ ಜೋರಾಗಿವೆ. ರಾಜಕೀಯ ನಾಯಕರು ಟಿಕೆಟ್‌ ಪಡೆಯಲು ಪಕ್ಷದ ಬಾಗಿಲು ಕಾಯುತ್ತಿದ್ದರೆ, ಚುನಾವಣ ಆಯೋಗ ರಾಜಕೀಯ ನಾಯಕರು ಮತ್ತವರ ಬೆಂಬಲಿಗರ ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಗಾವಲು ಇರಿಸಿದೆ.

Advertisement

ಐದು ವರ್ಷಗಳ ಹಿಂದಿನ ಚುನಾವಣೆಗೆ ಹೋಲಿಸಿದರೆ ಈ ಬಾರಿ ಡಿಜಿ ಟಲ್‌ ಬಹಳಷ್ಟು ಮಹತ್ವ ಪಡೆದುಕೊಂಡಿದೆ. ರಾಜಕೀಯ ಪಕ್ಷಗಳ ಕಾರ್ಯವೈಖರಿ, ಚುನಾವಣೆ ಪ್ರಚಾರವೂ ಬದಲಾಗಿದೆ.

ಸೂಕ್ತ ಕ್ರಮ
ಸಿನೆಮಾ ಹಾಲ್‌ಗ‌ಳು, ಖಾಸಗಿ ಎಫ್ಎಂ ಚಾನೆಲ್‌ಗ‌ಳು, ಸಾರ್ವಜನಿಕ ಸ್ಥಳದಲ್ಲಿ ಆಡಿಯೋ-ವೀಡಿಯೋ ಡಿಸ್‌ಪ್ಲೇ, ಧ್ವನಿ ಸಂದೇಶಗಳು, ಫೋನ್‌ ಮತ್ತು ಸಾಮಾಜಿಕ ಮಾಧ್ಯಮ, ವೆಬ್‌ ಸೈಟ್‌ಗಳಲ್ಲಿ ಅಭ್ಯರ್ಥಿ ಪರ ಮತ ಪ್ರಚಾರದ ಬಗ್ಗೆ ಆಯೋಗ ನಿರಂತರ ನಿಗಾ ಇಡುತ್ತಿದೆ.

ಪ್ರಕಟಿಸಲು ಉದ್ದೇಶಿಸಿರುವ ಜಾಹೀರಾತಿನ ಪ್ರತಿ, ಭಾಷಣ ಅಥವಾ ಸಂದೇಶದ ಮುದ್ರಿತ ಪ್ರತಿಯನ್ನು ಆಯೋಗದ ಸಮಿತಿ ದೃಢೀಕರಿಸಿದ ಬಳಿಕ ಬಿತ್ತರಿಸಬಹುದು. ಪೂರ್ವ- ಪ್ರಮಾಣೀಕರಣ ಪಡೆಯದೆ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳುಯುಟ್ಯೂಬ್‌, ಫೇಸ್‌ಬುಕ್‌, ಇನ್‌ ಸ್ಟಾಗ್ರಾಂ, ರೀಲ್ಸ್ , ಟ್ವಿಟರ್‌ ಸಹಿತ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು, ಸ್ಕ್ರೋಲ್‌ ಮೆಸೇಜ್‌, ಸಂದೇಶಗಳು ಬಿತ್ತರಗೊಂಡರೆ ಕ್ರಮ ಜರಗಿಸಲು ಮುಂದಾಗಿದೆ.

Advertisement

ಜಾಹೀರಾತು ವೆಚ್ಚ ಅಭ್ಯರ್ಥಿಗೆ!
ಅಭ್ಯರ್ಥಿ ಹೆಸರಲ್ಲಿರುವ ಖಾತೆಯ ಸಾಮಾಜಿಕ ಜಾಲತಾಣದಲ್ಲಿ ನಡೆಸುವ ಪ್ರಚಾರವು ಚುನಾವಣ ವೆಚ್ಚಕ್ಕೆ ಹೋಗುತ್ತದೆ. ತನ್ನ ಹೆಸರಿನ ಸಾಮಾಜಿಕ ಜಾಲತಾಣದ ವಿವರಗಳನ್ನು ಅಭ್ಯರ್ಥಿ ಮೊದಲೇ ಸಂಬಂಧಪಟ್ಟ ಚುನಾವಣಾಧಿಕಾರಿಗಳಿಗೆ ನೀಡಿ ಪೂರ್ವಾನುಮತಿ ಪಡೆದಿರಬೇಕು.

ಅನುಮತಿ ಅವಶ್ಯ
ಯಾವುದೇ ಅಭ್ಯರ್ಥಿ ಟ್ವಿಟರ್‌, ಫೇಸ್‌ಬುಕ್‌ನಲ್ಲಿ ತನ್ನ ಅಕೌಂಟ್‌ ಹೊಂದಿದ್ದರೆ ಇದನ್ನು ಚುನಾವಣಾಧಿಕಾರಿಗಳಿಗೆ ಮೊದಲೇ ತಿಳಿಸಬೇಕು. ಸಂದೇಶ, ವಾಯ್ಸ ಮೆಸೇಜ್‌ಗಳನ್ನು ಮಾಡುವುದಾದರೆ, ಮುದ್ರಣ ಸಹಿತ ವಿದ್ಯುನ್ಮಾನ, ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡುವ ಮುನ್ನ ಚುನಾವಣಾಧಿಕಾರಿಗಳಿಂದ ಪೂರ್ವಾನುಮತಿ ಪಡೆದಿರಬೇಕು ಎನ್ನುತ್ತಾರೆ ಚುನಾವಣಾಧಿಕಾರಿಗಳು.

ಫಾರ್ವಡ್‌ ಮಾಡುವ ಮುನ್ನ …
ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳ ಪರ-ವಿರೋಧದ ಸಂದೇಶಗಳನ್ನು ಯಾರಾದರೂ ವಾಟ್ಸ್‌ಆ್ಯಪ್‌, ಇನ್‌ಸ್ಟಾಗ್ರಾಂ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಕಳುಹಿಸಿದರೆ ಅದನ್ನು ಫಾರ್ವರ್ಡ್‌ ಮಾಡದಿರುವುದೇ ಉತ್ತಮ. ಯಾಕೆಂದರೆ ಇದು ಚುನಾವಣೆ ಸಮಯ. ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಗಳ ಪರ ಬರಹಗಳನ್ನು ಬರೆಯುವ ಅವರ ವಿರೋಧಿಗಳೂ ಹುಟ್ಟಿಕೊಳ್ಳಬಹುದು! ಇಂತಹ ಎಲ್ಲ ಮೆಸೇಜ್‌ ಗಳ ಮೇಲೆ ಜಿಲ್ಲಾ ಮಟ್ಟದ ಎಂಸಿಎಂಸಿ ನಿಗಾ ಇರಿಸುತ್ತದೆ. ಯಾರ ಮೊಬೈಲ್‌ನಿಂದ ಸಂದೇಶ ರವಾನೆಯಾಗುತ್ತದೆಯೋ ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ. ಅನಂತರ ಕ್ರಮ ಕೈಗೊಳ್ಳುವ ಕುರಿತು ಪರಿಶೀಲಿಸುತ್ತದೆ.

ವೆಚ್ಚ ವಿವರ ಅಗತ್ಯ
ಅಭ್ಯರ್ಥಿ ಮತ್ತು ರಾಜಕೀಯ ಪಕ್ಷ ಇಂಟರ್ನೆಟ್‌, ಸೋಷಿಯಲ್‌ ಮೀಡಿಯಾದಲ್ಲಿ ನೀಡುವ ಕಂಟೆಂಟ್‌ ಗಳೂ ಚುನಾವಣ ನೀತಿ ಸಂಹಿತೆಗೆ ಒಳಪಡಲಿದೆ. ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿ ಅಂತಿಮವಾಗಿ ನೀಡುವ ಚುನಾವಣ ವೆಚ್ಚದ ವಿವರಗಳಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ನೀಡಿದ ಜಾಹೀರಾತು, ಪ್ರಚಾರದ ವೆಚ್ಚವನ್ನು ಸೇರಿಸಿಕೊಳ್ಳಬೇಕು. ಇಂಟರ್ನೆಟ್‌ ಕಂಪೆನಿಗಳು, ವೆಬ್‌ಸೈಟ್‌ಗಳಿಗೆ ನೀಡಿದ ಹಣವನ್ನೂ ಇದರಲ್ಲಿ ಸೇರಿಸಬೇಕು. ಇವೆಲ್ಲವೂ ಚುನಾವಣ ಖರ್ಚಿನ ವ್ಯಾಪ್ತಿಗೆ ಒಳಪಡಲಿದೆ.

ಅನುಮತಿ ಕಡ್ಡಾಯ
ಪತ್ರಿಕೆಗಳು, ದೃಶ್ಯ ಮಾಧ್ಯಮಗಳು, ಕೇಬಲ್‌ ಟಿವಿ, ಫೇಸ್‌ಬುಕ್‌, ವಾಟ್ಸ್‌ ಆ್ಯಪ್‌ ಸಹಿತ ಎಲ್ಲ ರೀತಿಯ ಸಾಮಾಜಿಕ ಜಾಲತಾಣ ಗಳಲ್ಲಿ ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಯ ಪರವಾಗಿ ಜಾಹೀರಾತುಗಳನ್ನು ಪ್ರಕಟಿಸಲು ಜಿಲ್ಲಾ ಎಂಸಿಎಂಸಿ ಸಮಿತಿ ಅನುಮತಿ ಕಡ್ಡಾಯವಾಗಿದೆ. ಅನುಮತಿ ಪಡೆಯದಿದ್ದಲ್ಲಿ ಸಂಬಂಧಿತರ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆ ಯನ್ವಯ ಪ್ರಕರಣ ದಾಖಲಿಸಲಾಗುವುದು.
-ಕೂರ್ಮಾ ರಾವ್‌ ಎಂ., ಡಿಸಿ, ಉಡುಪಿ

*ಪುನೀತ್‌ ಸಾಲ್ಯಾನ್

Advertisement

Udayavani is now on Telegram. Click here to join our channel and stay updated with the latest news.

Next