Advertisement
ನನ್ನ ಪ್ರೀತಿಯ ಗೌರಮ್ಮನನ್ನ ಬಿಟ್ಟು ದೂರ ಹೋಗಬೇಕು ಎನ್ನುವ ನಿನ್ನ ಮಾತು ಹೇಗಿತ್ತು ಎಂದರೆ, ವೀಣೆಯ ಮೊದಲ ತಂತಿ ತುಂಡಾದ ನಂತರ ಬರುವ ಸದ್ದಿನಂತೆ ಇತ್ತು. ನಿಜ ಹೇಳು, ಇದೆಲ್ಲ ನಿನಗೆ ಮುಂಚೆಯೇ ಗೊತ್ತಿತ್ತಾ? ಒಂದು ಸಲ ಹೇಳಿ ಬಿಡು, ಅಪ್ಪಿಕೊಂಡ ಎರಡು ಸುಕೋಮಲ ಕೈಗಳ ಪೈಕಿ ಯಾವುದರಲ್ಲಿ ಚೂರಿ ಅಡಗಿಸಿಟ್ಟುಕೊಂಡಿದ್ದೆ?
Related Articles
Advertisement
ಮೊದಲಿನಿಂದಲೂ ಅಷ್ಟೇ, ನಿನ್ನ ವರ್ತನೆ ಹೀಗೆಯೇ ಇರುತ್ತದೆ ಎನ್ನುವ ಹಾಗಿರಲಿಲ್ಲ. ಒಮ್ಮೆ ಪ್ರೀತಿಯ ಹೂಬಿಸಿಲು, ಮತ್ತೂಮ್ಮೆ ಚೆಲುವಿನ ಬೆಳದಿಂಗಳು, ಒಮ್ಮೆ ಬೇಸರದ ಕಡುಮೋಡ, ಇನ್ನೊಮ್ಮೆ ದಿವ್ಯನಗೆಯ ಧರೆದೀಪ. ನೀನು ಆ ರಾತ್ರಿ ಪರಿಚಯವೇ ಇಲ್ಲದಂತೆ ನನ್ನ ಜೊತೆ ಮಾತಾಡಿದೆ ಅಲ್ವಾ? ಆ ದಿನವೇ ನಾನು ಸತ್ತು ಹೋಗಬೇಕಾಗಿತ್ತು. ಈ ಪತ್ರ ಬರೆಯಲು, ಅಸಲಿಗೆ ನಾನು ಬದುಕಿರಬಾರದಿತ್ತು. ಆದರೆ, ಅವತ್ತೇ ನೀನು ಇದು ಕೊನೆಯ ದಿನವಾದೀತು ಎಂಬ ಸುಳಿವನ್ನೇ ಕೊಡಲಿಲ್ಲ. ಇದೇ ಕಾರಣಕ್ಕೆ ಮತ್ತೆ ನಾನು ನಿನ್ನ ಹುಡುಕೋ ಹಾಗೆ ಆಗಿದ್ದು. ಹುಡುಕಿದ ನನ್ನ ಶ್ರಮಕ್ಕೆ ಮತ್ತೆ ನೀನು ನನ್ನ ಜೊತೆಯಾಗಿದ್ದು, ತುಂಬಾ ಮಾತಾಡಿದ್ದು.
ಇವಾಗ ಮತ್ತೆ ನನ್ನಿಂದ ದೂರ ಹೋಗಲೇಬೇಕು ಎನ್ನುವ ನಿನ್ನ ಸಡಗರಕ್ಕೆ ನಾನು ಯಾವತ್ತೂ ಅಡ್ಡಿ ಬರುವುದಿಲ್ಲ. ಬಿಟ್ಟು ಹೊರಡುತ್ತಿರುವುದಕ್ಕೆ ಕಾರಣವನ್ನೂ ಕೇಳುವುದಿಲ್ಲ. ಒಟ್ಟಿನಲ್ಲಿ ನೀನು ಮತ್ತೆ ನನ್ನಿಂದ ದೂರ ಆಗಲೇಬೇಕೆಂದು ನಿರ್ಧರಿಸಿದ್ದೀಯಾ ಅಲ್ಲವೇ? ನಿನ್ನ ನಿರ್ಧಾರವೇ ಜಾರಿಗೆ ಬರಲಿ. ಮತ್ತೆ ನಾನು ನಿನ್ನ ಜೊತೆ ಮಾತಾಡ್ತೀನೋ ಇಲ್ವೋ ಗೊತ್ತಿಲ್ಲ? ಗುಂಡಗಿರುವ ಈ ಭೂಮಿ ಎಷ್ಟೇ ಚಿಕ್ಕದು ಅಂತ ಅಂದುಕೊಂಡರೂ, ಮತ್ತೆ ಭೇಟಿಯಾಗುತ್ತೀವೋ ಇಲ್ವೋ ಗೊತ್ತಿಲ್ಲ? ಆಡುವ ಮಾತುಗಳು ಕೊನೆಯವೇ ಆದರೂ, ಸ್ವಲ್ಪ ಹೊತ್ತು ಕುಳಿತು ಮಾತನಾಡೋಣವಾ?
ನಿನ್ನ ಬದುಕಿನ ಬಾಳ ಪಯಣದಲ್ಲಿ ನಿನ್ನ ಜೊತೆಯಾಗುವವನು ನನಗಿಂತ ಚೆಲುವ, ಶ್ರೀಮಂತ, ಸುಶಿಕ್ಷಿತ, ಗಂಭೀರ, ಧೈರ್ಯವಂತ ಎಲ್ಲವೂ ಆಗಿರುತ್ತಾನೆ. ಆದರೆ, ನನಗಿಂತ ಹೆಚ್ಚು ಪ್ರೀತಿಸುವವನಾಗಿರಲಾರ. ನಾನು ಅಹಂಕಾರ ಪಡಲಿಕ್ಕೆ ನನಗೆ ಉಳಿದಿರೋದು ಇದೊಂದೇ.
ಮತ್ತೆ ಬಾ ಎಂದು ಖಂಡಿತ ನಾ ನಿನ್ನ ಕರೆಯಲಾರೆ. ಬಂದರೂ, ಬಂದೇನು ಎಂಬ ಭ್ರಮೆ ಹುಟ್ಟಿಸಿ ಹೋಗಬೇಡ. ಎಲ್ಲಾ ಹುಡುಗಿಯರು ಮಾಡುವ ತಪ್ಪನ್ನು ನೀನೂ ಮಾಡಬೇಡ. ಎದುರಿಗೆ ಸಿಕ್ಕಾಗ ಹಳೆಯ ಕನಸು, ಕನವರಿಕೆ ಬೇಡ. ಇದು ಇಲ್ಲಿಗೇ ಮುಗಿದು ಹೋಗಲಿ.
ಎಂದೆಂದಿಗೂ ನಾನು ನಿನ್ನ ಪ್ರೀತಿಯ ಬಿ.ಕೆ