ಕಳೆದ ಕೆಲವು ದಿನಗಳಿಂದ ದೇಶದ ಗಮನ ಸೆಳೆದಿದ್ದ ಕರ್ನಾಟಕ ರಾಜ್ಯ ರಾಜಕಾರಣದ ಕುತೂಹಲಕ್ಕೆ ಶನಿವಾರ ತೆರೆ ಬಿದ್ದಿದೆ. ಸುಪ್ರೀಂಕೋರ್ಟ್ ಆದೇಶದಂತೆ ಹಂಗಾಮಿ ಸ್ಪೀಕರ್ ಕೆಜಿ ಬೋಪಯ್ಯ ಅವರ ನೇತೃತ್ವದಲ್ಲಿ ನಡೆದ 15ನೇ ವಿಧಾನಸಭೆಯ ಚೊಚ್ಚಲ ಅಧಿವೇಶನದಲ್ಲಿ ಎಲ್ಲಾ 221 ಮಂದಿ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ರಾಜ್ಯ ರಾಜಕಾರಣದ ವಿಶ್ವಾಸಮತ ಯಾಚನೆ ಪ್ರಹಸನದಲ್ಲಿ ಬಿಎಸ್ ಯಡಿಯೂರಪ್ಪ ಭಾವನಾತ್ಮಕ ಭಾಷಣ ಮಾಡುತ್ತಾ ವಿಶ್ವಾಸಮತ ಯಾಚಿಸದೆಯೇ ರಾಜೀನಾಮೆ ಸಲ್ಲಿಸುವುದಾಗಿ ಘೋಷಿಸಿದ್ದರು. ಬಳಿಕ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ನಾನು ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ಆ ಸಂದರ್ಭದಲ್ಲಿ ರಾಜ್ಯದ ಜನರು ಅಭೂತಪೂರ್ವವಾಗಿ ಬೆಂಬಲ ವ್ಯಕ್ತಪಡಿಸಿದ್ದರು. 2019ರಲ್ಲಿ ನಾವು ರಾಜ್ಯದಲ್ಲಿ 28ಕ್ಕೆ 28 ಲೋಕಸಭೆ ಸ್ಥಾನವನ್ನು ಗೆಲ್ಲುವ ವಿಶ್ವಾಸವ್ಯಕ್ತಪಡಿಸಿದರು. ಅಲ್ಲದೇ ಕಾಂಗ್ರೆಸ್ , ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ರಾಜಕೀಯ ಜೀವನದ ಹೋರಾಟದಲ್ಲಿ ಅನೇಕ ಏಳು ಬೀಳುಗಳನ್ನು ಕಂಡಿದ್ದ ಯಡಿಯೂರಪ್ಪ ಮೂರು ಬಾರಿ ಮುಖ್ಯಮಂತ್ರಿ ಗದ್ದುಗೆ ಏರಿದ್ದರೂ ಕೂಡಾ ಒಂದು ಬಾರಿ 7 ದಿನ, 2ನೇ ಬಾರಿ 3ವರ್ಷ 62 ದಿನ ಹಾಗೂ 3ನೇ ಬಾರಿ ಕೇವಲ 55ಗಂಟೆಗಳಲ್ಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಂತಾಗಿದೆ.