Advertisement
ಅಂದ ಹಾಗೆ ಇಷ್ಟೊಂದು ಪರಿಶ್ರಮ ಪಟ್ಟು ಕಟ್ಟಿದ ಮನೆ ನಮ್ಮ ಎಣಿಕೆಯಂತೆ ರೂಪುಗೊಳ್ಳದಿರಲು ಮುಖ್ಯಕಾರಣ ಅದರ ವಿನ್ಯಾಸದ ಕೊರತೆ. ಸಾಮಾನ್ಯವಾಗಿ ನಾವು ಮನೆ ಕಟ್ಟಲು ಆರ್ಕಿಟೆಕ್ಟ್ ಬಳಿಯೋ, ಇಂಜಿನಿಯರ್ ಬಳಿಯೋ ತೆರಳುತ್ತೇವೆ. ಅವರು ನಮ್ಮ ಅಭಿರುಚಿ, ಖರ್ಚು-ವೆಚ್ಚ , ಬೇಕು-ಬೇಡಗಳ ಪಟ್ಟಿ ಸಿದ್ಧಪಡಿಸಿ ಕೆಲವೊಂದು ನಕ್ಷೆಗಳನ್ನು ಬರೆದುಕೊಡುತ್ತಾರೆ. ಅದರದಲ್ಲಿ ನಮಗೆ ರುಚಿಸಿದ ಯಾವುದಾದರೊಂದು ನಕ್ಷೆ ಆಯ್ದುಕೊಟ್ಟರೆ ಮುಗಿಯಿತು, ಇಂಜಿನಿಯರುಗಳು ಗೃಹ ನಿರ್ಮಾಣಕ್ಕೆ ಮುಂದಡಿಯಿಡುತ್ತಾರೆ. ಆದರೆ, ಕಟ್ಟಡದ ಸ್ಪಷ್ಟಚಿತ್ರಣ ಸಿಗುವುದು ಅದು ಮುಕ್ತಾಯದ ಹಂತಕ್ಕೆ ಬಂದಾಗಲೇ. ಆಗ ನಾವು ಅದು ಸರಿ ಇಲ್ಲ, ಇದು ಹೀಗಾಗಬೇಕಿತ್ತು ಅಂತ ತಗಾದೆ ತೆಗೆಯೋ ಹಾಗಿಲ್ಲ. ಒಂದು ಪಕ್ಷ ಅಂತಿಮಘಟ್ಟದಲ್ಲಿ ಹೊರಾಂಗಣ ವಿನ್ಯಾಸ ಬದಲಿಸಿದಲ್ಲಿ ಕಟ್ಟಡವನ್ನು ಅಲ್ಲಲ್ಲಿ ಒಡೆಯಬೇಕಾದೀತು; ಇದರಿಂದ ಸಮಯ-ದುಡ್ಡು ಎಲ್ಲ ವ್ಯರ್ಥ, ಅಂತೆಯೇ ಕಟ್ಟಡದ ಗುಣಮಟ್ಟಕ್ಕೂ ಕೊಡಲಿಯೇಟು ಕೊಟ್ಟಂತೆ. ಹಾಗಾದರೆ, ಇದಕ್ಕೇನು ಪರಿಹಾರ? ನಮ್ಮ ಕನಸಿನ ಮನೆಯ ಚಿತ್ರಣ ಮೊದಲೇ ಸಿಕ್ಕಿಬಿಟ್ಟರೆ ಎಷ್ಟು ಚೆನ್ನ ಅಲ್ವಾ ?
ಕಟ್ಟಡ ಯಾವುದೇ ಇರಲಿ, ಅದು ರೂಪುಗೊಳ್ಳುವ ಮೊದಲೇ ಅದರ ಅಂದ-ಚೆಂದವನ್ನು ಕಣ್ತುಂಬಿಕೊಳ್ಳಲು ಇರುವ ಏಕೈಕ ಮಾರ್ಗವೇ 3ಡಿ ಡಿಸೈನ್. ಮೊದಲೆಲ್ಲ ಕಟ್ಟಡದ ಹೊರಾಂಗಣ ವಿನ್ಯಾಸವನ್ನು 2ಡಿ (ಎರಡು ಆಯಾಮ) ವಿಧಾನದ ಮೂಲಕ ಚಿತ್ರಿಸುತ್ತಿದ್ದರು. ಇದರಲ್ಲಿ ಕಟ್ಟಡದ ಒಂದು ಪಾರ್ಶ್ವವನ್ನು ಅಂದಾಜಿಸಬಹುದಿತ್ತು, ಆದರೆ, ಕಟ್ಟಡದ ಸ್ಪಷ್ಟಚಿತ್ರಣ ಸಿಗುತ್ತಿರಲಿಲ್ಲ. ಈಗ 3ಡಿ ಡಿಸೈನ್ ತಂತ್ರಜ್ಞಾನದಿಂದ ಮೂರು ಆಯಾಮದ ಚಿತ್ರವನ್ನು ಪಡೆಯಬಹುದು. ಹೀಗಾಗಿ, ಕಟ್ಟಡ ನಿರ್ಮಾಣಕ್ಕೂ ಮೊದಲೇ ಅದರ ಚಿತ್ರಪಟ ನಿಮ್ಮ ಮುಂದೆ ರೆಡಿಯಾಗಿರುತ್ತೆ.ಇದರಿಂದ ಕಟ್ಟಡದ ಬಣ್ಣ, ವಿನ್ಯಾಸ, ಕಿಟಕಿ-ಬಾಗಿಲುಗಳ ಸ್ಥಾನ ಎಲ್ಲವನ್ನೂ ಸ್ಪಷ್ಟವಾಗಿ ಕಂಡುಕೊಳ್ಳಬಹುದು. ಉಪಯೋಗಗಳು
1. ಮೊತ್ತ ಮೊದಲನೆಯದಾಗಿ ಕಟ್ಟಡದ ಸ್ಪಷ್ಟಚಿತ್ರಣ ಸಿಗುವುದರಿಂದ ಅಂತಿಮ ಸ್ಪರ್ಶದ (ಫೈನಲ್ ಟಚ್) ಬಗ್ಗೆ ಅನಗತ್ಯ ಗೊಂದಲವಿರದು.
2.ಕಿಟಕಿ-ಬಾಗಿಲುಗಳ ವಿನ್ಯಾಸ, ಗೋಡೆಗಳ ಬಣ್ಣದ ಆಯ್ಕೆಗೆ ನೀವು ಸ್ವತಂತ್ರರು.
3.ನಿಮ್ಮ ಅಭಿರುಚಿಗೆ ತಕ್ಕಂತೆ ಹೊರಾಂಗಣ ವಿನ್ಯಾಸ, ಪಾರ್ಕಿಂಗ್ ಜಾಗ, ಸ್ವಿಮ್ಮಿಂಗ್ ಪೂಲ್ ಮುಂತಾದ ಅಗತ್ಯಗಳ ಬಗ್ಗೆ ನಿರ್ಧರಿಸುವ ಆಯ್ಕೆ.
4.ಹೊರಾಂಗಣ ವಿನ್ಯಾಸ ಹಾಗೂ ಒಳಾಂಗಣ ವಿನ್ಯಾಸದ ಖರ್ಚು-ವೆಚ್ಚಗಳ ಬಗ್ಗೆ ನಿಖರ ಮಾಹಿತಿ ಪಡೆದುಕೊಳ್ಳಬಹುದು.
5.ಕಟ್ಟಡದ ಸ್ಪಷ್ಟಚಿತ್ರಣವಿರುವುದರಿಂದ ಕಾರ್ಮಿಕರಿಗೆ ಅನಗತ್ಯ ಅನುಮಾನಗಳಿರದೆ ನಿರಾತಂಕವಾಗಿ ಕೆಲಸ ಸಾಗುವುದು.
6.ಮನೆಯ ಒಳಾಂಗಣ ವಿನ್ಯಾಸವನ್ನು ಇದೇ ತಂತ್ರಜ್ಞಾನ ದಿಂದ ರಚಿಸಬಹುದು. ಇದರಿಂದ ಅಗತ್ಯ ವಸ್ತುಗಳನ್ನು ವ್ಯವಸ್ಥಿತ ವಾಗಿ ಜೋಡಿಸಿ ಕೊಠಡಿಗಳ ಜಾಗ ವ್ಯರ್ಥವಾಗುವುದನ್ನು ತಪ್ಪಿಸಬಹುದು.
7.ಗೋಡೆಗಳಿಗೆ ಬಣ್ಣಗಳ ಹೊರತಾಗಿ ವಾಲ್‌ಪೇಪರ್, ಟೆಕ್ಷ$cರ್, ವಾಲ್‌ಕ್ಲಾಡಿಂಗ್ ಇನ್ನಿತರ ಆಧುನಿಕ ವಸ್ತುಗಳ ಮೆರುಗು ನೀಡಬಹುದು.
Related Articles
ಇದೊಂದು ತಾಳ್ಮೆ ಬೇಡುವ ಕೆಲಸ, ಹಲವು ಗಂಟೆಗಳ ಕಾಲ ಕಂಪ್ಯೂಟರ್ ಮುಂದೆ ಕುಳಿತು ಕೆಲಸಮಾಡಬೇಕಾಗುತ್ತದೆ. ಆದ್ದರಿಂದ ಡಿಸೈನ್ ಮಾಡಲು ತಗಲುವ ವೆಚ್ಚದ ಬಗ್ಗೆ ನಿಖರವಾಗಿ ಹೇಳಲಾಗದು. ಸುಮಾರು ಐದು ಸಾವಿರ ರೂಪಾಯಿಯಿಂದ ಹಿಡಿದು ಲಕ್ಷಗಟ್ಟಲೆ ತನಕ ಶುಲ್ಕ ವಿಧಿಸಬಹುದು. ಅದು ಕಟ್ಟಡದ ಗಾತ್ರ, ವಿನ್ಯಾಸದ ಮೇಲೆ ಅವಲಂಬಿತವಾಗಿರುತ್ತದೆ.
Advertisement
– ಏಡಿ