Advertisement

ಪ್ರತ್ಯೇಕ ರಾಜ್ಯ ಕೇಳುವ ಮುನ್ನ..

06:00 AM Jul 19, 2018 | |

ಉತ್ತರ ಕರ್ನಾಟಕದ ಯಾವ ನಾಯಕರೂ ಪ್ರಾದೇಶಿಕ ಅಸಮತೋಲನ ಸರಿಪಡಿಸುವ ನಿಟ್ಟಿನಲ್ಲಿ ಹೋರಾಡಿಲ್ಲ. ಗಟ್ಟಿಯಾದ ಧ್ವನಿ ಎತ್ತಿಲ್ಲ. ನಿಜವಾಗಿಯೂ ಇವರಿಗೆ ಉತ್ತರ ಕರ್ನಾಟಕದ ಬಗ್ಗೆ ಕಾಳಜಿ ಇಲ್ಲ.  ನಿರೀಕ್ಷಿತ ಎಂಬಂತೆ ಇತ್ತೀಚಿನ ಅಂಕಿ-ಅಂಶ ಪ್ರಕಾರ ತಲಾ ಆದಾಯ ಉತ್ತರ ಕರ್ನಾಟಕ ಭಾಗದಲ್ಲಿ ಕಡಮೆ ಇದೆ. ಬೆಳಗಾವಿಯಲ್ಲಿ 67 ಸಾವಿರ ಇದ್ದರೆ, ಬೆಂಗಳೂರಿನಲ್ಲಿ 2.5 ಲಕ್ಷ ಇದೆ. ರಾಜಧಾನಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿ, ಹಣದ ಹರಿವು ಹೆಚ್ಚಿರುವುದರಿಂದ ತಲಾ ಆದಾಯ ಹೆಚ್ಚಿದೆ. ಆದರೆ, ಅದೇ ಪ್ರಮಾಣದ ಉದ್ಯೋಗ ಸೃಷ್ಟಿ, ತಲಾ ಆದಾಯ ಹೆಚ್ಚಳದ ಅವಕಾಶ ಇಲ್ಲಿ ಇಲ್ಲ. ಸಂಪನ್ಮೂಲಗಳಿದ್ದರೂ ಅದನ್ನು ಬಳಸಿಕೊಳ್ಳುವ ಸೂಕ್ತ ವ್ಯವಸ್ಥೆ ಇಲ್ಲ. ಇದೆಲ್ಲವನ್ನೂ ಕಲ್ಪಿಸುವಲ್ಲಿ, ಯೋಜನೆಗಳನ್ನು ತರುವಲ್ಲಿ ನಮ್ಮ ರಾಜಕೀಯ ನಾಯಕರು ಮೊದಲು ಹೋರಾಡಲಿ. 

Advertisement

“ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಲೇಬೇಕು!’
ಸಮ್ಮಿಶ್ರ ಸರ್ಕಾರದ ಚೊಚ್ಚಲ ಬಜೆಟ್‌ ಎಂಬ ಗಜ ಪ್ರಸವದ ಬಳಿಕ ಮತ್ತೂಮ್ಮೆ ಮುನ್ನೆಲೆಗೆ ಬಂದ ಪದ ಇದು. ಸದನದ ಒಳಗೆ ಹಾಗೂ ಹೊರಗೆ “ಉತ್ತರ ಕರ್ನಾಟಕಕ್ಕೆ ಅನ್ಯಾಯ’ ಬಹು ಚರ್ಚಿತ ವಿಷಯ. ಎಲ್ಲರ ಬಾಯಲ್ಲಿ ನುಲಿಯುವ “ಅನ್ಯಾಯ’ ಘೋಷವಾಕ್ಯ ಕೇವಲ ಮಾತು, ಚರ್ಚೆ, ವಾದ, ಪ್ರತಿವಾದ, ಆರೋಪ, ಪ್ರತ್ಯಾರೋಪಕ್ಕೆ ಮಾತ್ರ ಸೀಮಿತವಾಗಿದೆ. ನಿಜರ್ಥದಲ್ಲಿ ಅದರ ಬಗ್ಗೆ ಸುದೀರ್ಘ‌ ಹಾಗೂ ತರ್ಕಬದ್ಧವಾಗಿ ಮಾತನಾಡುವ ಛಲ, ವಿಷಯ ಜ್ಞಾನದ ಜತೆಗೆ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ.

ಪ್ರತಿ ಬಾರಿ ಮಂಡನೆಯಾಗುವ ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತದೆ ಎಂಬುದು ನಿರೀಕ್ಷಿತ. ರಾಜಧಾನಿ ಬೆಂಗಳೂರು ಹಾಗೂ ಅದರ ಕೂಗಳತೆ ದೂರದಲ್ಲಿರುವ ಮಂಡ್ಯ, ಮೈಸೂರು, ರಾಮನಗರ ಸೇರಿದಂತೆ ಹಳೇ ಮೈಸೂರು ಭಾಗದ ಜಿಲ್ಲೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತಿದೆ ಎಂಬುದು ಒಪ್ಪತಕ್ಕದ್ದೆ. ಆದರೆ, ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗುವ ಮೊದಲು ಧ್ವನಿ ಎತ್ತದ ನಾಯಕರು, ಹೋರಾಟಗಾರರು ಎಲ್ಲ ಮುಗಿದ ಬಳಿಕ “ಪ್ರತ್ಯೇಕ ರಾಜ್ಯ’ ಅನಿವಾರ್ಯ, ಅದೊಂದೇ ಪರಿಹಾರ ಎನ್ನುವ ಧಾಟಿಯಲ್ಲಿ ಮಾತನಾಡುತ್ತಾರೆ. 

ಆದರೆ, ಇದು ಎಷ್ಟರ ಮಟ್ಟಿಗೆ ಸರಿ, ಒಡಕಿನ ಮಾತಿಗೆ ಬೆಲೆ ಕೊಡಲು ಸಾಧ್ಯವೇ ಎನ್ನುವುದನ್ನು ಯೋಚಿಸಲೇಬೇಕಾದ ಅನಿವಾರ್ಯತೆ ಇದೆ.

ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ಅಧಿಕಾರ ವಿಂಗಡನೆಯಿಂದ ಸವಲತ್ತು ಪಡೆಯಲು ಸಾಧ್ಯ ಎಂಬುದನ್ನು ಮನಗಂಡ ನಾಡು. ಹಾಗಂತ ತುಂಡು ತುಂಡು ಮಾಡಿ ಪ್ರಗತಿ ಸಾಧಿಸುತ್ತೇವೆ, ಅನ್ಯಾಯ ಹತ್ತಿರ ಸುಳಿಯಲು ಬಿಡುವುದಿಲ್ಲ ಎಂಬುದು ಅತಿರೇಕದ ಪರಮಾವಧಿ. ರಾಜಕಾರಣದ ವಿವಿಧ ಸ್ತರದಲ್ಲಿ ಅನ್ಯಾಯಕ್ಕೆ ನೀರೆರೆದು ಪೋಷಿಸಲಾಗುತ್ತಿದೆ ಎಂಬುದು ಈಗ ಜಗಜ್ಜಾಹೀರು. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಬೊಬ್ಬೆ ಹೊಡೆಯುವ ರಾಜಕಾರಣಿಗಳದ್ದೇ ಇದರಲ್ಲಿ ಹೇರಳವಾದ ಕೊಡುಗೆ ಇದೆ ಎಂಬುದು ಕಟು ಸತ್ಯ. ಈ ಭಾಗದ ಜನನಾಯಕ ಎಂದು ಹಣೆಪಟ್ಟಿ ಕಟ್ಟಿಕೊಂಡವರ ಇಚ್ಛಾಶಕ್ತಿ ಕೊರತೆಯಿಂದಲೇ ಇದು ಮುನ್ನಡೆದುಕೊಂಡು ಬಂದಿದೆ. ಉತ್ತರ ಕರ್ನಾಟಕದ ಯಾವ ನಾಯಕರೂ ಪ್ರಾದೇಶಿಕ ಅಸಮತೋಲನ ಸರಿಪಡಿಸುವ ನಿಟ್ಟಿನಲ್ಲಿ ಹೋರಾಡಿಲ್ಲ. ಗಟ್ಟಿಯಾದ ಧ್ವನಿ ಎತ್ತಿಲ್ಲ. ಆರಂಭ ಶೂರತ್ವ ಪ್ರದರ್ಶಿಸಿ ರಾಜಕೀಯ ಮಾಡುತ್ತಿದ್ದಾರೆಯೇ 
ಹೊರತು ನಿಜವಾಗಿಯೂ ಇವರಿಗೆ ಉತ್ತರ ಕರ್ನಾಟಕದ ಬಗ್ಗೆ ಕಾಳಜಿ ಇಲ್ಲ.  

Advertisement

ನಿರೀಕ್ಷಿತ ಎಂಬಂತೆ ಇತ್ತೀಚಿನ ಅಂಕಿ-ಅಂಶ ಪ್ರಕಾರ ತಲಾ ಆದಾಯ ಉತ್ತರ ಕರ್ನಾಟಕ ಭಾಗದಲ್ಲಿ ಕಡಮೆ ಇದೆ. ಬೆಳಗಾವಿಯಲ್ಲಿ 67 ಸಾವಿರ ಇದ್ದರೆ, ಬೆಂಗಳೂರಿನಲ್ಲಿ 2.5 ಲಕ್ಷ ಇದೆ. ರಾಜಧಾನಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿ, ಹಣದ ಹರಿವು ಹೆಚ್ಚಿರುವುದರಿಂದ ತಲಾ ಆದಾಯ ಹೆಚ್ಚಿದೆ. ಆದರೆ, ಅದೇ ಪ್ರಮಾಣದ ಉದ್ಯೋಗ ಸೃಷ್ಟಿ, ತಲಾ ಆದಾಯ ಹೆಚ್ಚಳದ ಅವಕಾಶ ಇಲ್ಲಿ ಇಲ್ಲ. ಸಂಪನ್ಮೂಲಗಳಿದ್ದರೂ ಅದನ್ನು ಬಳಸಿಕೊಳ್ಳುವ ಸೂಕ್ತ ವ್ಯವಸ್ಥೆ ಇಲ್ಲ. ಇದೆಲ್ಲವನ್ನೂ ಕಲ್ಪಿಸುವಲ್ಲಿ, ಯೋಜನೆಗಳನ್ನು ತರುವಲ್ಲಿ ನಮ್ಮ ರಾಜಕೀಯ ನಾಯಕರು ಮೊದಲು ಹೋರಾಡಲಿ. ವೈಯಕ್ತಿಕವಾಗಿ ಬೆಳೆಯುವ, ಉದ್ಯಮ ಸೃಷ್ಟಿಸಿಕೊಂಡು ದುಡ್ಡು ಮಾಡುವುದರ ಜತೆಗೆ ಜನರ ಅಭಿವೃದ್ಧಿ ಬಗ್ಗೆಯೂ ಕಾಳಜಿ ವಹಿಸಲಿ. ಬೆಳಗಾವಿ, ಬಾಗಲಕೋಟೆ ಭಾಗದಲ್ಲಿ ರಾಜಕಾರಣಿಗಳ ಕಬ್ಬಿನ ಕಾರ್ಖಾನೆಗಳಿವೆ. ದುರಂತ ಎಂದರೆ ಅವರ ಕಾರ್ಖಾನೆಯಲ್ಲೇ ಕಬ್ಬಿನ ಬಾಕಿ ಹೆಚ್ಚಿದೆ. ಮೊದಲು ಇದನ್ನೆಲ್ಲಾ ಸರಿಪಡಿಸಲಿ.

ಇನ್ನು ತೆಲಂಗಾಣ, ಆಂಧ್ರ, ಬಿಹಾರ್‌, ಛತ್ತೀಸಗಡ ಪ್ರತ್ಯೇಕ ರಾಜ್ಯವಾಗಿಲ್ಲವೇ ಎಂದು ಒಡಕಿನ ಮಾತಿನವರು ಪ್ರಶ್ನಿಸಬಹುದು. ಆದರೆ, ಅಲ್ಲಿನ ಭೌಗೋಳಿಕ, ರಾಜಕೀಯ ಸ್ಥಿತ್ಯಂತವೇ ಬೇರೆ. ಬಿಹಾರ ದೊಡ್ಡ ರಾಜ್ಯದ ಜತೆಗೆ ಬುಡಕಟ್ಟು ಜನಾಂಗ ಪ್ರಮಾಣ ಹೆಚ್ಚಿರುವ ಪ್ರದೇಶವಾಗಿತ್ತು. ಛತ್ತೀಸಗಡ ಭಾಗದಲ್ಲಿ ಬುಡಕಟ್ಟು ಜನಾಂಗದ ಸಂಖ್ಯೆ, ಭೌಗೋಳಿಕ ಸ್ಥಿತಿಗತಿ ಆಧರಿಸಿ ಅದನ್ನು ಇಬ್ಭಾಗ ಮಾಡಲಾಗಿದೆ. ಇನ್ನು ಆಂಧ್ರ, ತೆಲಂಗಾಣ ಕಥೆ ಕೂಡ ಇದಕ್ಕಿಂತ ಭಿನ್ನವಾಗಿರಲಿಲ್ಲ. ಪ್ರತ್ಯೇಕ ರಾಜ್ಯವಾದ ಬಳಿಕ “ಅಮರಾವತಿ’ ಎಂಬ ರಾಜಧಾನಿ ಸೃಷ್ಟಿಸಿಕೊಳ್ಳಲು ಅಲ್ಲಿನ ಸಿಎಂ ಚಂದ್ರಬಾಬು ನಾಯ್ಡು ಹೆಣಗಾಡುತ್ತಿದ್ದಾರೆ. ವಿಶೇಷ ಅನುದಾನಕ್ಕಾಗಿ ಕೇಂದ್ರದ ವಿರುದ್ಧ ಜಿದ್ದಿಗೆ ಬಿದ್ದಿದ್ದಾರೆ. ಆದರೆ, ಕರ್ನಾಟಕದ ಸ್ಥಿತಿ ಅವುಗಳಿಗೆ ಹೋಲಿಸುವ ಹಂತಕ್ಕೆ ತಲುಪಿಲ್ಲ. ಪ್ರಾದೇಶಿಕವಾಗಿ ಹಿನ್ನಡೆಯಾಗುತ್ತಿರುವುದು ರಾಜಕಾರಣಿಗಳು, ಅಧಿಕಾರಿಗಳಿಂದ. ಇವರು ಎಚ್ಚೆತ್ತುಕೊಂಡರೆ, ಎಚ್ಚೆತ್ತುಕೊಳ್ಳುವಂತೆ ಮಾಡಿದರೆ ಪರಿಹಾರ ಸಾಧ್ಯ. 

ಇದೆಲ್ಲ ಒತ್ತಟ್ಟಿಗಿರಲಿ, ಪ್ರತ್ಯೇಕ ರಾಜ್ಯದ ಕನಸು ಬಿತ್ತಿರುವ ನಾಯಕರಿಗೆ ಅಭಿವೃದ್ಧಿ ಕಾಳಜಿ ಏನಾದರೂ ಇದೆಯೇ ಎಂದು ಹುಡುಕಲು ಹೊರಟರೆ ಅಲ್ಲಿಯೂ ಸಿಗುವುದು ಅದೇ ಕ್ಷುಲ್ಲಕ ರಾಜಕಾರಣ. ಒಂದು ವೇಳೆ ಪ್ರತ್ಯೇಕ ರಾಜ್ಯವಾದರೆ ಅನ್ಯಾಯ ಸರಿಪಡಿಸುವ ನಿಟ್ಟಿನಲ್ಲಿ ಯಾವ ನೀಲನಕ್ಷೆಯೂ ಸಿದ್ಧಪಡಿಸಿಲ್ಲ. ನಿರುದ್ಯೋಗ ನಿವಾರಣೆ, ತಲಾ ಆದಾಯ ಹೆಚ್ಚಳ, ಸಂಪನ್ಮೂಲಗಳ ಸದ್ಬಳಕೆ, ಕೈಗಾರೀಕರಣ, ವ್ಯಾಪಾರ ವಹಿವಾಟು ವೃದ್ಧಿಗೆ ಯಾವ ಕ್ರಮ ಕೈಗೊಳ್ಳಬಹುದು ಎಂಬ ಪೂರ್ವ ಸಿದ್ಧತೆ ಕೂಡ ಇಲ್ಲ. ಕೇವಲ ರಾಜಕೀಯ ಹೇಳಿಕೆ, ಆರೋಪ, ಪ್ರತ್ಯಾರೋಪ, ಒಬ್ಬರ ಕಾಲು ಮತ್ತೂಬ್ಬರು ಎಳೆಯುವುದಕ್ಕೆ ಮಾತ್ರ ಈ ಪದಪುಂಜ ಹೊರ ಬೀಳುತ್ತಿದೆ! ರಾಜಕೀಯ ಬಿಟ್ಟು ವಾಸ್ತವ ನೆಲೆಗಟ್ಟಿನಲ್ಲಿ ಮಾತನಾಡಲು ಯಾರೂ ಸಿದ್ಧರಿಲ್ಲ.

ಹರಿದು ಹಂಚಿ ಹೋಗಿದ್ದ ನಾಡನ್ನು ನಮ್ಮ ಹಿರಿಯ ಚೇತನಗಳು ಹೋರಾಟದಿಂದಲೇ ಏಕೀಕರಣಗೊಳಿಸಿದ್ದಾರೆ. ಅಖಂಡತೆಯ ಪರಿಕಲ್ಪನೆ ಬಿತ್ತಿದ್ದಾರೆ. ದೂರವಾಗಿದ್ದ ಮನಸ್ಸುಗಳನ್ನು ಒಗ್ಗೂಡಿಸಿದ್ದಾರೆ. ಕನ್ನಡ ಹೆಸರಲ್ಲಿ ಶಾಂತಿ, ಸಹಬಾಳ್ವೆಯ ಹೂವು ಅರಳಿಸಿದ್ದಾರೆ. ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಕಲಬುರಗಿ ಎಂದು ಹೆಸರು, ಕಿಮೀಗಳಲ್ಲಿ ದೂರವಿದ್ದರೂ ಕನ್ನಡದ ಒಂದೇ ಮನಸ್ಸುಗಳೆಂಬ ಭೌಗೋಳಿಕ ಪ್ರಜ್ಞೆ ಬೆಳೆಸಿದ್ದಾರೆ. ಆದರೆ, ರಾಜಕೀಯ, ಅಧಿಕಾರ, ಸ್ವಹಿತಾಸಕ್ತಿಗಾಗಿ ಇಂದು ಕೆಲವರು ಇದೆಲ್ಲವನ್ನೂ ಒಡೆಯಲು ಹೊರಟಿದ್ದಾರೆ.

ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಸೇರಿದಂತೆ ರಾಜಧಾನಿ ಸುತ್ತ ಇರುವ ಜಿಲ್ಲೆಗಳಲ್ಲಿ ರಾಜಕೀಯ ಪ್ರಜ್ಞೆ ಹೆಚ್ಚಿದೆ. ಸರಿಯಾಗಿ ಕೆಲಸ ಮಾಡದಿದ್ದರೆ ಪ್ರಶ್ನಿಸುವ ಛಾತಿ ಇದೆ. ನಮ್ಮಂತೆ ಅವರು ಸಹಿಸಿಕೊಂಡು ಕೂಡುವವರಲ್ಲ. ಒಂದು ವೇಳೆ ಕೆಲಸ ಮಾಡದಿದ್ದರೆ ಮುಂದಿನ ಚುನಾವಣೆಯಲ್ಲಿ ಮತದಾನದ ಮೂಲಕ ತಕ್ಕ ಉತ್ತರ ನೀಡುತ್ತಾರೆ. ಅಲ್ಲಿನ ನಾಯಕರಿಗೆ ಇದು ಗೊತ್ತಿರುವುದರಿಂದಲೇ ಅನ್ಯಾಯಕ್ಕೆ ಅವಕಾಶ ನೀಡುವುದಿಲ್ಲ. ಉತ್ತಕ ಕರ್ನಾಟಕದ ಜನ ಮಾತಿನಲ್ಲಿ ಒರಟಿದ್ದರೂ ಮನಸ್ಸಿನಿಂದ ಸೂಕ್ಷ¾. ಹೀಗಾಗಿ ತಮ್ಮ ನಾಯಕ ಏನೇ ಮಾಡಿದರೂ ಸಹಿಸಿ ಕೊಳ್ಳುತ್ತಾರೆ. ಕೆಲಸ ಮಾಡದಿದ್ದರೂ ಪ್ರಶ್ನಿಸಲು ಹೋಗುವುದಿಲ್ಲ. ಇಂಥ ಮನಸ್ಥಿತಿ ಬದಲಾಗದ ಹೊರತು ಉತ್ತರ ಕರ್ನಾಟಕಕ್ಕೆ ಅನ್ಯಾಯ ತಪ್ಪಿದ್ದಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ಅನ್ಯಾಯ ಸರಿಪಡಿಕೊಳ್ಳಲಿ. ಪ್ರತ್ಯೇಕ ರಾಜ್ಯದ ಕೂಗು ಬದಿಗಿಡಲಿ. ಏಕೀಕರಣಕ್ಕೆ ಹೋರಾಡಿದ ಮನಸ್ಸುಗಳ ನೋವಿನ ನುಡಿಗೆ ಇನ್ನಾದರೂ ಬೆಲೆ ಸಿಗಲಿ. ಇಲ್ಲದಿದ್ದರೆ ಅವರ ಮಾತು ನಿಜವಾದೀತು!

ಚನ್ನು ಮೂಲಿಮನಿ

Advertisement

Udayavani is now on Telegram. Click here to join our channel and stay updated with the latest news.

Next