Advertisement

ಜೇನುನೊಣಗಳೇ ಕೋವಿಡ್ ಪತ್ತೆ ಸಾಧನಗಳು! ಬಡರಾಷ್ಟ್ರಗಳಿಗೆ ಬಹಳ ಉಪಕಾರಿಯೆಂದ ಜೀವಶಾಸ್ತ್ರಜ್ಞರು

10:33 PM May 08, 2021 | Team Udayavani |

ಆ್ಯಮ್‌ಸ್ಟರ್ಡಮ್‌ (ನೆದರ್ಲೆಂಡ್‌): ಕೊರೊನಾ ಎಲ್ಲರನ್ನೂ ಕಾಡಿಸುತ್ತಿರುವಾಗ, ನೆದರ್ಲೆಂಡ್‌ನ‌ ವಾಜೆನಿಂಗೆನ್‌ ವಿಶ್ವವಿದ್ಯಾಲಯದ ಸಂಶೋಧಕರು ವಿಶಿಷ್ಟ ದಾರಿಯೊಂದನ್ನು ಹುಡುಕಿದ್ದಾರೆ. ಇದು ಆಧುನಿಕ ವೈದ್ಯಕ್ರಮ ಅನುಸರಿಸುವ ಸಾಂಪ್ರದಾಯಿಕ ಪದ್ಧತಿಯಲ್ಲ, ಸ್ವಲ್ಪ ಬೇರೆಯದ್ದೇ ಆದ, ಪ್ರಕೃತಿಸಹಜ ಕ್ರಮ, ಆಯುರ್ವೇದಕ್ಕೂ ಹತ್ತಿರ!

Advertisement

ಅಲ್ಲಿನ ಸಂಶೋಧಕರು ಜೇನುನೊಣಗಳಿಗೆ ಕೊರೊನಾಪತ್ತೆ ಹಚ್ಚುವುದಕ್ಕೆ ತರಬೇತಿ ನೀಡಿದ್ದಾರೆ! ಸಂಶೋಧಕರೇ ಹೇಳಿದಂತೆ ಬಡರಾಷ್ಟ್ರಗಳಿಗೆ ಈ ಕ್ರಮ ಬಹಳ ನೆರವಾಗುತ್ತದೆ. ಈ ಹೊಸಕ್ರಮ ಶೇ.95ರಷ್ಟು ಬಾರಿ ನಿಖರ ಫ‌ಲಿತಾಂಶವನ್ನೇ ನೀಡಿದೆಯಂತೆ.

ತರಬೇತಿ ಹೇಗೆ?: 150 ಜೇನುನೊಣಗಳನ್ನು ನಿಗದಿತ ಸ್ಥಳದಲ್ಲಿ ಕೂಡಿ ಹಾಕಲಾಯಿತು. ಪ್ರತೀಬಾರಿ ಕೊರೊನಾ ವೈರಸ್‌ ವಾಸನೆಯನ್ನು ಅವುಗಳ ಅನುಭವಕ್ಕೆ ತರಿಸಿದಾಗ, ಸಕ್ಕರೆ ದ್ರವವನ್ನು ಸವಿಯಲು ನೀಡಲಾಯಿತು. ಕೊರೊನಾ ಇಲ್ಲದ ವಾಸನೆ ಇದ್ದಾಗ, ಸಕ್ಕರೆ ದ್ರವವನ್ನು ನೀಡಲಿಲ್ಲ. ಹೀಗೆ ಗಂಟೆಗಟ್ಟಲೆ ಪ್ರಯೋಗ ಮಾಡಿದಾಗ ಕೊರೊನಾ ವೈರಸ್‌ ಸುಳಿವು ಕಂಡಕೂಡಲೇ ತಮ್ಮ ನಾಲಗೆಯನ್ನು ಹೊರಚಾಚಲು ಶುರು ಮಾಡಿದವು. ಕಡೆಕಡೆಗೆ ಅವುಗಳಿಗೆ ಸಕ್ಕರೆ ದ್ರವವನ್ನು ನೀಡದಿದ್ದಾಗಲೂ ಕೊರೊನಾವನ್ನು ಪತ್ತೆಹಚ್ಚಲು ಶುರು ಮಾಡಿದವು. ಮುಂದೆ ಕ್ಷಣಗಳಲ್ಲಿ ತಮ್ಮ ಪಾಡಿಗೆ ತಾವು ಕೊರೊನಾವನ್ನು ಪತ್ತೆ ಹಚ್ಚಿವೆ.

ಇದನ್ನೂ ಓದಿ :ರಾಜ್ಯದಲ್ಲಿಂದು 47563 ಕೋವಿಡ್ ಹೊಸ ಪ್ರಕರಣ ಪತ್ತೆ: 482 ಜನರ ಸಾವು  

ಆಯುರ್ವೇದಕ್ಕೆ ಹೇಗೆ ಹತ್ತಿರ?: ಆಯುರ್ವೇದದಲ್ಲಿ ಇಂಬಳಗಳನ್ನು (ರಕ್ತಹೀರುವ ಸಣ್ಣ ಹುಳಗಳು) ಕೆಟ್ಟರಕ್ತ ಹೀರುವುದಕ್ಕೆಂದೇ ಸಾಕಲಾಗುತ್ತದೆ. ಯಾರ ಶರೀರದಲ್ಲಿ ಕೆಟ್ಟ ರಕ್ತವಿರುತ್ತದೋ, ಅಂತಹವರಿಗೆ ಕಚ್ಚಲು ಬಿಟ್ಟು ರಕ್ತವನ್ನು ಹೀರಿಸಲಾಗುತ್ತದೆ. ಹೆಚ್ಚುಕಡಿಮೆ ವಾಜೆನಿಂಗೆನ್‌ ವಿವಿ ಕ್ರಮ ಅದನ್ನೇ ಹೋಲುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next