ಬೀರೂರು: ಕೋವಿಡ್-19 ಸೋಂಕಿನಿಂದ ಶಿವಮೊಗ್ಗದಲ್ಲಿ ಮೃತಪಟ್ಟ ಕಡೂರಿನ ಶಿಕ್ಷಕರೊಬ್ಬರ ಮೃತದೇಹದ ಅಂತ್ಯಕ್ರಿಯೆಯನ್ನು ಬೀರೂರಿನ ರೋಟರಿ ಮೋಕ್ಷಧಾಮದಲ್ಲಿ ನಡೆಸಿದ ತಾಲೂಕು ಆಡಳಿತದ ನಿರ್ಧಾರಕ್ಕೆ ಪಟ್ಟಣದ ನಾಗರೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ಮೃತಪಟ್ಟ ಶಿಕ್ಷಕರ ಮೃತ ದೇಹದ ಅಂತ್ಯಕ್ರಿಯೆಯನ್ನು ಕಡೂರಿನ ಮೋಕ್ಷಧಾಮದಲ್ಲಿ ನಡೆಸುವ ಉದ್ದೇಶದಿಂದ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಕಡೂರಿನಲ್ಲಿ ಅಂತ್ಯ ಸಂಸ್ಕಾರ ನಡೆಸಲು ಅವಕಾಶವಿದ್ದರೂ ಅಲ್ಲಿನ ನಾಗರೀಕರ ಪ್ರತಿಭಟನೆ ಹಿನ್ನೆಲೆಯಲ್ಲಿ ದಿಢೀರನೆ ನಿರ್ಧಾರ ಬದಲಿಸಿದ ತಾಲೂಕು ಆಡಳಿತ ಮತ್ತು ದಂಡಾಧಿಕಾರಿಗಳು ರಾತ್ರಿ 10 ಗಂಟೆಗೆ ಬೀರೂರಿನ ಮೋಕ್ಷಧಾಮದಲ್ಲಿ ಮೃತದೇಹದ ಅಂತ್ಯ ಕ್ರಿಯೆ ನಡೆಸಲು ತಯಾರಿ ನಡೆಸಿದ್ದರು. ಮೋಕ್ಷಧಾಮಕ್ಕೆ ತೆರಳುವ ಮಾರ್ಗದಲ್ಲಿ ಜಮಾಹಿಸಿದ ನಾಗರೀಕರು ಆ್ಯಂಬುಲೆನ್ಸ್ ತಡೆಯಲು ಯತ್ನಿಸಿದರು. ಯಗಟಿ ರಸ್ತೆಯ ಪರ್ಯಾಯ ಮಾರ್ಗದ ಮೂಲಕ ನಾಗರೀಕರ ಕಣ್ತಪ್ಪಿಸಿ ಮೋಕ್ಷಧಾಮ ತಲುಪಿ ಮೃತದೇಹದ ದಹನ ಕ್ರಿಯೆ ನಡೆಸಿದರು. ಇದನ್ನು ಪ್ರಶ್ನಿಸಿದ ನಾಗರೀಕರಿಗೆ ಲಾಠಿ ರುಚಿ ತೋರಿಸಿ ಅಧಿಕಾರಿಗಳು ಸರ್ವಾಧಿಕಾರ ಪ್ರವೃತ್ತಿ ತೋರಿದ್ದಾರೆಂದು ಅಸಮಾಧಾನ ಹೊರಹಾಕಿದ್ದಾರೆ.
ಮುಂದೆ ಇಂತಹ ದಿಢೀರ್ ನಿರ್ಧಾರಗಳನ್ನು ಕೈಗೊಂಡರೆ ತಾಲೂಕು ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ. ಕೋವಿಡ್ ನಿಂದ ಮೃತಪಟ್ಟವರ ಅಂತ್ಯಕ್ರಿಯೆ ಪ್ರತ್ಯೇಕ ಜಾಗದಲ್ಲಿ ನಡೆಸಲು ಸರ್ಕಾರ ಮುಂದಾಗಬೇಕೆಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಂ. ವಿನಾಯಕ್ ಆಗ್ರಹಿಸಿದರು.
ಕಡೂರು ತಹಶೀಲ್ದಾರ್ ಉಮೇಶ್ ದೂರವಾಣಿ ಮೂಲಕ ಪ್ರತಿಕ್ರಿಯಿಸಿ ಕೋವಿಡ್ ಸೋಂಕಿತನ ಅಂತ್ಯಸಂಸ್ಕಾರಕ್ಕೆ ಪೂರ್ವಭಾವಿಯಾಗಿ ಎಲ್ಲಾ ಮುಂಜಾಗರೂಕತಾ ಕ್ರಮ ಗಳನ್ನು ಕೈಗೊಳ್ಳಲಾಗಿತ್ತು. ಅಂತ್ಯಸಂಸ್ಕಾರದಿಂದ ನಾಗರೀಕರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಕಡೂರು ರುದ್ರಭೂಮಿಗೆ ಹೋಲಿಸಿದರೆ ಬೀರೂರು ಮೋಕ್ಷಧಾಮ ಪಟ್ಟಣದಿಂದ ಹೊರಭಾಗದಲ್ಲಿದೆ. ಇಲ್ಲಿ ಮಾಡಿದರೆ ಸುರಕ್ಷಿತವೆಂಬ ಹಿನ್ನೆಲೆಯಲ್ಲಿ ಸಂಸ್ಕಾರ ನಡೆಸಲಾಗಿದೆ. ತಾಲೂಕು ಆಡಳಿತ ಜವಾಬ್ದಾರಿಯನ್ನು ಕಾನೂನಾತ್ಮಕವಾಗಿ ನಿರ್ವಹಿಸಿದೆ.
ಉಮೇಶ್, ಕಡೂರು
ತಹಶೀಲ್ದಾರ್