Advertisement

ಕಸ ತೆರವುಗೊಳಿಸಿ ನಿವೇಶನ ಗುರುತಿಸಿಕೊಡಿ

03:57 PM Feb 14, 2020 | |

ಬೀರೂರು: ಯಗಟಿ ರಸ್ತೆಯ ಮುತ್ತಿನಕಟ್ಟೆ ಪಕ್ಕದ ಆಶ್ರಯ ಬಡಾವಣೆಯಲ್ಲಿ ನಿವೇಶನ ರಹಿತರಿಗೆ ಹಕ್ಕುಪತ್ರ ನೀಡಿ ಮೀಸಲಿಟ್ಟಿದ್ದ ಪುರಸಭೆಗೆ ಸೇರಿದ ಖಾಲಿ ನಿವೇಶನದಲ್ಲಿ ಹಾಕಿರುವ ಕಸದ ರಾಶಿಯನ್ನು ತೆರವುಗೊಳಿಸಿ ನಿವೇಶನಗಳನ್ನು ಗುರುತಿಸಿಕೊಡಬೇಕೆಂದು ಫಲಾನುಭವಿಗಳು ಪುರಸಭೆ ಅಧಿಕಾರಿಗಳನ್ನು ಆಗ್ರಹಿಸಿದರು.

Advertisement

ಈ ಬಗ್ಗೆ ನಿವೇಶನದ ಬಳಿ ಜಮಾವಣೆಗೊಂಡ ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಿದ ಮುಖಂಡ ಅಮ್ಜದ್‌ ಖಾನ್‌, ಪುರಸಭೆ 1996ರಲ್ಲಿ ನಮ್ಮ ಕುಟುಂಬಸ್ಥರ ಹೆಸರಿನಲ್ಲಿ ಮಂಜೂರು ಮಾಡಿರುವ ನಿವೇಶನಗಳ ಬಡಾವಣೆಯಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುದ್ದೀಪದ ಕೊರತೆ ಇದ್ದುದರಿಂದ ಅಲ್ಲಿ ಯಾರೂ ಮನೆಗಳನ್ನು ನಿರ್ಮಿಸಿಲ್ಲ. ನಮ್ಮ ಪೋಷಕರು ನಿಧನರಾದ ಮೇಲೆ ನಾವು 2015ರಲ್ಲಿ ಅರ್ಜಿ ಸಲ್ಲಿಸಿ ನಮ್ಮ ನಿವೇಶನಗಳು ಅಳತೆ ಮಾಡಿ ಕೊಡುವಂತೆ ಪುರಸಭೆಗೆ ಮನವಿ ಮಾಡಿದ್ದೆವು. ಆದರೆ, ಶುಲ್ಕ ಕಟ್ಟಿಸಿಕೊಂಡ ಪುರಸಭೆ ಕ್ರಮ ವಹಿಸಲಿಲ್ಲ ಎಂದು ದೂರಿದರು.

ಈ ಬಗ್ಗೆ ಬಳಿಕ ವಿಚಾರಿಸಿದರೆ ಬಡಾವಣೆಯ ಅಕ್ಕಪಕ್ಕದ ಜಮೀನು ಮಾಲಿಕರು ನಿಮ್ಮ ಜಾಗವನ್ನು ಒತ್ತುವರಿ ಮಾಡಿದ್ದು, ಇದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಒತ್ತುವರಿ ತೆರವುಗೊಳಿಸಿ ಬಳಿಕ ಅಳತೆ ಮಾಡಿಕೊಡಲಾಗುವುದು ಎಂದು ಸಂಬಂಧ ಪಟ್ಟವರು ತಿಳಿಸಿದರೆ ಹೊರತು, ಈವರೆಗೂ ನಮಗೆ ಒಂದು ಸೂರು ಕಟ್ಟಿಕೊಳ್ಳಲು ಸೂಕ್ತ ಪರಿಹಾರ ಹೊದಗಿಸಲು ಯಾರೂ ಮುಂದೆ ಬರಲಿಲ್ಲ ಎಂದು ಆರೋಪಿಸಿದರು.

ಮತ್ತೊಬ್ಬ ಫಲಾನುಭವಿ ಸ್ನೇಕ್‌ ಬಾಬು ಮಾತನಾಡಿ, ಈ ಹಿಂದೆ ಯುಜಿಡಿ ಕಾಮಗಾರಿಯ ನೂರಾರು ಲೋಡ್‌ ಮಣ್ಣನ್ನು ಇಲ್ಲಿ ತಂದು ಸುರಿಯಲಾಗಿತ್ತು. ಪತ್ರಿಕೆಗಳಲ್ಲಿ ವರದಿಯಾದ ಬಳಿಕ ಅದನ್ನು ತೆರವು ಮಾಡಿದ್ದರು. ಈಗ ಪುರಸಭೆ ಪಟ್ಟಣದಲ್ಲಿ ಸಂಗ್ರಹವಾಗುವ ಎಲ್ಲ ಕಸವನ್ನೂ ಇಲ್ಲಿ ತಂದು ಸುರಿಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಆಶ್ರಯ ಬಡಾವಣೆಯಲ್ಲಿ ನಮ್ಮ ನಿವೇಶನ ಯಾವುದು ಎನ್ನುವುದನ್ನು ಗುರುತಿಸುವುದೇ ಕಷ್ಟವಾಗಿದೆ. ಇನ್ನೂ ಹುಡುಕಾಟದಲ್ಲಿದ್ದೇವೆ. ನಮ್ಮ ನಿವೇಶನಗಳನ್ನು ಗುರುತಿಸಿ, ಇಲ್ಲಿ ಸಂಗ್ರಹಿಸಿರುವ ಕಸದ ರಾಶಿಯನ್ನು ತೆರವುಗೊಳಿಸಿ ಮನೆ ಕಟ್ಟಲು ಅವಕಾಶ ಮಾಡಿಕೊಟ್ಟರೆ ನಾವು ಇಲ್ಲಿ ವಾಸಿಸಲು ಸಿದ್ಧ. ಇಲ್ಲವಾದಲ್ಲಿ ಪುರಸಭೆ ನಮಗೆ ಬೇರೆಡೆ ನಿವೇಶನ ಒದಗಿಸಬೇಕೆಂದು ಆಗ್ರಹಿಸಿದರು.

Advertisement

ಒಟ್ಟಿನಲ್ಲಿ ಅರ್ಹ ಫಲಾನುಭವಿಗಳ ಕೂಗು ಸಂಬಂಧಪಟ್ಟವರಿಗೆ ತಲುಪಿ ಸಮಸ್ಯೆ ಬಗೆಹರಿಸಲಿ ಎನ್ನುವುದು ಫಲಾನುಭವಿಗಳ ಒತ್ತಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next