ಭರಮಸಾಗರ: ಸಮೀಪದ ಬೇಡರಶಿವನಕೆರೆ ಗ್ರಾಮದ ಸುತ್ತಮುತ್ತ ಕಾಣಿಸಿಕೊಂಡ ಕರಡಿಯನ್ನು ಸೆರೆ ಹಿಡಿಯಲು ಕಾರ್ಯಾಚಾರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗೆ ಕರಡಿ ಕಣ್ತಪ್ಪಿಸಿ ಗವೀಶ್ವರ ಗುಡ್ಡದ ಕಡೆಗೆ ಪಲಾಯನ ಮಾಡಿರುವ ಘಟನೆ ನಡೆದಿದೆ.
ಭಾನುವಾರ ಬೇಡರಶಿವನಕೆರೆ ಗ್ರಾಮದ ಸುತ್ತ ಕರಡಿಯೊಂದು ಕಾಣಿಸಿಕೊಂಡ ಸುದ್ದಿ ಕೇಳಿ ಜನ ಭಯಭೀತರಾಗಿದ್ದರು. ಬಳಿಕ ಅರಣ್ಯ ಇಲಾಖೆಗೆ ವಿಷಯ ತಿಳಿಸಿದ ಬಳಿಕ ಸಿಬ್ಬಂದಿ ಬೋನು ಮತ್ತು ಬಲೆಯೊಂದಿಗೆ ಕರಡಿ ಸೆರೆ ಕಾರ್ಯಾಚರಣೆ ನಡೆಸಿದ್ದಾರೆ. ಬೆಳಗ್ಗಿನಿಂದ ಪೊಲೀಸ್ ಮತ್ತು ಅರಣ್ಯ ಸಿಬ್ಬಂದಿ ಮತ್ತು ಗ್ರಾಮಸ್ಥರನ್ನು ಅಲೆದಾಡಿಸಿದ ಕರಡಿ ಬಳಿಕ ತೋಟ ಒಂದರ ಬಳಿ ಅವಿತು ಕೆಲ ಕಾಲ ಉಳಿದಿದೆ. ಇನ್ನೇನು ಕರಡಿ ಬಲೆಗೆ ಬೀಳಿಸಲು ಕಸರತ್ತು ನಡೆಸಿದ ಸಿಬ್ಬಂದಿ ಗೆ ಕೈ ಕೊಟ್ಟ ಕರಡಿ ಹಿರೇಕಬ್ಬಿಗೆರೆ , ಮುದ್ದಾಪುರ ಮೂಲಕ ಗವೀಶ್ವರ ಬೆಟ್ಟದ ಕಡೆ ಪಲಾಯನ ಮಾಡಿದೆ.
ಕರಡಿ ಬೆಟ್ಟದ ಕಡೆ ಹೋದ ಸುದ್ದಿ ತಿಳಿದು ಬೇಡರಶಿವನಕೆರೆ ಸುತ್ತಮುತ್ತಲಿನ ಹಳ್ಳಿ ಗಳ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಕರಡಿ ಬೇಡರಶಿವನಕೆರೆ ಗ್ರಾಮದಲ್ಲಿ ಭಾನುವಾರ ಕಾಣಿಸಿಕೊಂಡಿತ್ತು. ಕರಡಿ ಸೆರೆ ಹಿಡಿಯಲು ಪೋಲಿಸ್ ಮತ್ತು ಅರಣ್ಯ ಸಿಬ್ಬಂದಿ, ಗ್ರಾಮಸ್ಥರು ಸಹಕಾರ ಸಿಕ್ಕಿತ್ತು. ಆದರೆ ಅಂತಿಮವಾಗಿ ಕರಡಿ ಸೆರೆ ಹಿಡಿಯುವಲ್ಲಿ ಅದು ತಪ್ಪಿಸಿ ಕೊಂಡು ಗುಡ್ಡದ ಕಡೆ ಓಡಿದೆ. ಜನರಿಗೆ ಕರಡಿಯಿಂದ ಯಾವುದೇ ತೊಂದರೆ ಆಗಿಲ್ಲ. ಕರಡಿ ಮತ್ತೆ ಜನವಸತಿ ಪ್ರದೇಶ ದ ಕಡೆ ಬರಲು ಸಾಧ್ಯವಿಲ್ಲ.
– ರುದ್ರಮುನಿ, ಡಿಆರ್ ಎಪ್, ಅರಣ್ಯ ಇಲಾಖೆ ಚಿತ್ರದುರ್ಗ.