ಇದು ಡಿಜಿಟಲ್ ಯುಗ, ಒಂದೆಡೆ ಹಲವು ಸಂಸ್ಥೆಗಳು ಗ್ರಾಹಕರ ಮನಸೆಳೆಯುವಂತಹ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆಗೊಳಿಸುತ್ತಿರುವಾಗಲೇ, ಇತ್ತ ಅಪ್ಲಿಕೇಶನ್ ಗಳು ಕೂಡ ದಿನದಿಂದ ದಿನಕ್ಕೆ ನಾವಿನ್ಯತೆಯನ್ನು ಹೊಂದಿ ಜನಪ್ರಿಯವಾಗುತ್ತಿದೆ. ಕಳೆದ ಒಂದು ದಶಕದಿಂದ ಮೆಸೇಜಿಂಗ್ ಆ್ಯಪ್ ಗಳ ಸಂಖ್ಯೆಯೂ ವೃದ್ಧಿಸುತ್ತಿದೆ. ಪರಿಣಾಮವಾಗಿ ಹಲವು ಸ್ಮಾರ್ಟ್ ಪೋನ್ ಗಳಲ್ಲಿ ಸ್ಟೋರೇಜ್ ಸಂಗ್ರಹ ಸಾಮಾರ್ಥ್ಯ ಪ್ರಮುಖ ಸಮಸ್ಯೆಯಾಗಿ ತಲೆದೋರುತ್ತಿದೆ.
ಗಮನಾರ್ಹ ಸಂಗತಿಯೆಂದರೇ ಇಂದಿನವರೆಗೂ ವಾಟ್ಸಾಪ್ ಅಪ್ಲಿಕೇಶನ್ ಅತೀ ಹೆಚ್ಚು ಜನರ ಮೊಬೈಲ್ ಗಳಲ್ಲಿ ಸರ್ವೆಸಾಮಾನ್ಯ ಎಂಬಂತಾಗಿತ್ತು. ಆದರೇ ಇತ್ತೀಚಿನ ದಿನಗಳಲ್ಲಿ ಐಓಎಸ್ ಡಿವೈಸ್ ಗಳಲ್ಲಿ ಕಂಡುಬರುವ ‘ಐ-ಮೆಸೇಜ್’, ರಾತ್ರಿ ಬೆಳಗಾಗುವುದೊರೊಳಗೆ ಜನಪ್ರಿಯವಾದ ‘ಸಿಗ್ನಲ್’ ಅಪ್ಲಿಕೇಶನ್ ಗಳನ್ನೂ ಅತೀ ಹೆಚ್ಚು ಬಳಕೆದಾರರು ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಇದರೊಂದಿಗೆ ಫೇಸ್ ಬುಕ್, ಇನ್ ಸ್ಟಾಗ್ರಾಂ ಸೇರಿದಂತೆ ಹಲವು ಮೆಸೇಜಿಂಗ್ ಆ್ಯಪ್ ಗಳು ಗ್ರಾಹಕರ ಸ್ಮಾರ್ಟ್ ಫೋನ್ ಅನ್ನು ಅಲಂಕರಿಸಿದೆ.
ಪರಿಣಾಮವಾಗಿ ಸ್ಟೋರೇಜ್ ಸಮಸ್ಯೆ ಅತೀ ಹೆಚ್ಚು ಜನರನ್ನು ಕಾಡುತ್ತಿದೆ. ಇದನ್ನು ಬಗೆಹರಿಸಲೆಂದೇ ಹೊಸತೊಂದು ಆ್ಯಪ್ ಪ್ಲೇಸ್ಟೋರ್ ಮತ್ತು ಆ್ಯಪಲ್ ಸ್ಟೋರ್ ಗೆ ಲಗ್ಗೆಯಿಟ್ಟಿದೆ. ಅದೇ ‘ಬೀಪರ್’( Beeper). ಪೆಬಲ್ ಸಿಇಓ ಮತ್ತು ಸಹಸಂಸ್ಥಾಪಕ ಎರಿಕ್ ಮಿಗಿಕೋವಸ್ಕಿ ಈ ಕುರಿತು ಮಾಹಿತಿ ನೀಡಿದ್ದು, ಬೀಪರ್ ಅಪ್ಲಿಕೇಶನ್ ಐ-ಮೆಸೇಜ್, ವಾಟ್ಸಾಪ್ ಸೇರಿದಂತೆ 13 ಇತರ ಮೆಸೇಜಿಂಗ್ ಆ್ಯಪ್ ಫ್ಲ್ಯಾಟ್ ಫಾರ್ಮ್ ಗಳನ್ನು ಒಂದುಗೂಡಿಸುತ್ತದೆ. ಬಳಕೆದಾರರು ಈ ಒಂದು ಆ್ಯಪನ್ನು ಡೌನ್ ಲೋಡ್ ಮಾಡಿಕೊಂಡರೇ ಉಳಿದೆಲ್ಲಾ ಅಪ್ಲಿಕೇಶನ್ ಗಳನ್ನು ಇದರ ಮೂಲಕವೇ ಬಳಸಬಹುದು ಎಂದು ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಬೀಪರ್ ಆ್ಯಪ್ ಅನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಇದೀಗ ಈ ಅಪ್ಲಿಕೇಶನ್ ವಿಂಡೋಸ್, ಐಓಎಸ್, ಆ್ಯಂಡ್ರಾಯ್ಡ್ ಮುಂತಾದ ಕಡೆ ಲಭ್ಯವಿದೆ ಎಂದು ಎರಿಕ್ ಮಿಗಿಕೋವಸ್ಕಿ ತಿಳಿಸಿದ್ದಾರೆ.
ಗಮನಿಸಬೇಕಾದ ಅಂಶವೆಂದರೇ ಐ-ಮೆಸೇಜ್ ಕೂಡ ಆ್ಯಂಡ್ರಾಯ್ಡ್ ಗಳಲ್ಲಿ ಈ ಆ್ಯಪ್ ಮೂಲಕ ಕಾರ್ಯನಿರ್ವಹಿಸಲಿದೆ ಎಂದು ಎರಿಕ್ ಮಾಹಿತಿ ನೀಡಿದ್ದಾರೆ.
ಬೀಪರ್ ನಲ್ಲಿ ಯಾವೆಲ್ಲಾ ಅಪ್ಲಿಕೇಶನ್ ಗಳಿರಲಿವೆ ?
ವಾಟ್ಸಾಪ್, ಫೇಸ್ ಬುಕ್ ಮೆಸೆಂಜರ್, ಐ-ಮೆಸೇಜ್, ಆ್ಯಂಡ್ರಾಯ್ಡ್ ಮೆಸೇಜ್ (ಎಸ್ ಎಂಎಸ್), ಟೆಲಿಗ್ರಾಮ್, ಟ್ವಿಟ್ಟರ್, ಸ್ಲ್ಯಾಕ್, ಹ್ಯಾಂಗೌಟ್ಸ್, ಇನ್ ಸ್ಟಾಗ್ರಾಂ, ಸ್ಕೈಪ್, ಐಆರ್ ಸಿ, ಮ್ಯಾಟ್ರಿಕ್ಸ್, ಡಿಸ್ ಕಾರ್ಡ್, ಸಿಗ್ನಲ್ , ಬೀಪರ್ ನೆಟ್ ವರ್ಕ್
ಅದಾಗ್ಯೂ ಬೀಪರ್ ಅಪ್ಲಿಕೇಶನ್ ಒಂದು ಸಬ್ ಸ್ಕ್ರಿಪ್ಷನ್ (ಚಂದಾದಾರಿಕೆ) ಆ್ಯಪ್ ಆಗಿದ್ದು, ಗ್ರಾಹಕರು ಹಣ ಪಾವತಿಸುವ ಮೂಲಕ ಇದನ್ನು ಬಳಸಬೇಕಾಗುತ್ತದೆ.