Advertisement

ನಮಗೇ ಬೇಕು ಸಾವಯವ ಕೃಷಿ ವಿವಿ

05:39 PM Feb 14, 2021 | Shreeraj Acharya |

ವಿಜಯಪುರ: ಗುಜರಾತ, ಛತ್ತೀಸಗಡ ರಾಜ್ಯಗಳಲ್ಲಿ ಇರುವಂತೆ ಕರ್ನಾಟಕದಲ್ಲೂ ಮೊಟ್ಟ ಮೊದಲ ಬಾರಿಗೆ ಮುಖ್ಯಮಂತ್ರಿ ತವರು ಶಿವಮೊಗ್ಗ ಜಿಲ್ಲೆಯಲ್ಲಿ ಸಾವಯವ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

Advertisement

ಆದರೆ ರಾಜಕೀಯ ಶಕ್ತಿಗಿಂತ ಯೋಜನೆ ಹಾಗೂ ಉದ್ದೇಶ ಈಡೇರಿಕೆಗೆ ಪೂರಕ ವಾತಾವರಣ, ಸಂಪನ್ಮೂಲ ಲಭ್ಯವಿರುವ ವಿಜಯಪುರ ಜಿಲ್ಲೆಯಲ್ಲಿ ಸಾವಯವ ಕೃಷಿ ವಿಶ್ವವಿದ್ಯಾಲಯದ ಸ್ಥಾಪನೆಗೆ ಕೂಗು ಎದ್ದಿದೆ.

ಕೃಷಿ ಸಚಿವ ಬಿ.ಸಿ. ಪಾಟೀಲ ರಾಜ್ಯದಲ್ಲಿ ಸಾವಯವ ಕೃಷಿ ವಿವಿ ಆರಂಭಕ್ಕೆ ಚಿಂತನೆ ನಡೆದಿದೆ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಸ್ಥಾಪಿಸಲಾಗುತ್ತಿದೆ ಎಂದು ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಶಿವಮೊಗ್ಗ ಜಿಲ್ಲೆಗಿಂತ ನಿರಂತರ ಬರದಿಂದ ತತ್ತರಿಸಿದರೂ ಸಾವಯವ ಹಾಗೂ ದೇಶಿ ಬೀಜಗಳ ಬಳಕೆಯನ್ನೇ ಪ್ರಧಾನವಾಗಿ ಉಸಿರಾಗಿಸಿಕೊಂಡಿರುವ ಬಸನವಾಡು ಸೂಕ್ತ ಎಂಬ ಧ್ವನಿ ಆರಂಭಗೊಂಡಿದೆ. ಮುಖ್ಯಮಂತ್ರಿ ತವರು ಜಿಲ್ಲೆ ಎಂಬ ಕಾರಣಕ್ಕೆ ಉದ್ದೇಶಿತ ಸಾವಯವ ಕೃಷಿ ವಿಶ್ವವಿದ್ಯಾಲಯವನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಸ್ಥಾಪಿಸುವುದು ಸೂಕ್ತವಲ್ಲ.
ರಾಜ್ಯದಲ್ಲಿ ಕೃಷಿ, ತೋಟಗಾರಿಕೆ ಪ್ರತ್ಯೇಕ ವಿಶ್ವವಿದ್ಯಾಯಗಳಿದ್ದರೂ ರಾಜಕೀಯ ಪ್ರಭಾವ, ತವರು ಜಿಲ್ಲೆಯ ಪ್ರೇಮದಿಂದ ಕೃಷಿ-ತೋಟಗಾರಿಕೆ ವಿಶ್ವವಿದ್ಯಾಲಯ ಸ್ಥಾಪಿಸಿಕೊಂಡಿದ್ದಾರೆ. ಪಶ್ಚಿಮ ಘಟ್ಟದ ಮಲೆನಾಡು ಪ್ರದೇಶವಾಗಿರುವ ಅರಣ್ಯ ಪ್ರದೇಶದಲ್ಲಿ ಬಗರಹುಕುಂ ಸಾಗುವಳಿ ಹೆಚ್ಚಿದೆ.
ಅಡಕೆಯಂಥ ವಾಣಿಜ್ಯ ಬೆಳೆ, ಹೆಚ್ಚಿನ ಪ್ರಮಾಣದಲ್ಲಿ ಹೈಬ್ರಿಡ್‌ ತಳಿಯ ಬೀಜ ಹಾಗೂ ರಸಗೊಬ್ಬರ ಬಳಸಲಾಗುತ್ತದೆ.

ವಿಜಯಪುರ ಜಿಲ್ಲೆಯ ರೈತರು ದೇಶಿ ಜವಾರಿ ಬೀಜಗಳನ್ನೇ ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿದ್ದು, ಶೇ.60ಕ್ಕಿಂತ ಹೆಚ್ಚಿನ ಆಹಾರ ಧಾನ್ಯ ಹಾಗೂ
ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದಾರೆ. ಮಳೆ ಆಶ್ರಿತ, ಸತತ ಭೀಕರ ಬರ ಪೀಡಿತ ಈ ಜಿಲ್ಲೆ ಈಗಷ್ಟೇ ನೀರಾವರಿ ಕಾಣುತ್ತಿದೆ. ಸುಮಾರು 9 ಲಕ್ಷ ಹೆಕ್ಟೇರ್‌ ಭೂಮಿ ಕೃಷಿ ಯೋಗ್ಯವಿದ್ದು, ಈಗಾಗಲೇ 3 ಲಕ್ಷ ಹೆಕ್ಟೇರ್‌ ಪ್ರದೇಶ ನೀರಾವರಿ ಆಗಿದೆ. ನೀರಾವರಿ ಯೋಜನೆಗಳು
ಪೂರ್ಣ ಅನುಷ್ಠಾನಗೊಂಡಲ್ಲಿ ಇನ್ನೂ ಸುಮಾರು 4 ಲಕ್ಷ ಹೆಕ್ಟೇರ್‌ ಪ್ರದೇಶ ನೀರಾವರಿ ಆಗಲಿದೆ. ವಿಶ್ವ ದರ್ಜೆ ರಫ್ತು ಗುಣಮಟ್ಟ: ವಿಜಯಪುರ ಜಿಲ್ಲೆಯಲ್ಲಿ ಮಣ್ಣಿನ ಗುಣಧರ್ಮ, ನೀರು, ಹವಾಮಾನ ಕೂಡ ಸಾವಯವ ಕೃಷಿಗೆ ಪೂರಕವಾಗಿದೆ. ಇಲ್ಲಿ ಬೆಳೆಯುವ ದ್ರಾಕ್ಷಿ, ಲಿಂಬೆ, ಈರುಳ್ಳಿ, ವೀಳ್ಯದೆಲೆ, ಬಿಳಿಜೋಳ, ತೊಗರಿ ಸೇರಿದಂತೆ ವಿವಿಧ ಕೃಷಿ-ತೋಟಗಾರಿಕೆ ಬೆಳೆಗಳು ವಿಶ್ವ ದರ್ಜೆಯ ರಫ್ತು ಗುಣಮಟ್ಟ
ಹೊಂದಿವೆ.

ವಿಜಯಪುರ ಜಿಲ್ಲೆಯಲ್ಲಿ ರೈತರು ಕೃಷಿ ಉಪ ಕಸುಬುಗಳಾದ ಹೈನುಗಾರಿಕೆ, ಕುರಿ-ಮೇಕೆ ಸಾಕಾಣಿಕೆ, ಕ್ಷೀರ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಹೀಗಾಗಿ ಜಾನುವಾರುಗಳ ಸಾಕಾಣಿಕೆ ಪ್ರಧಾನವಾಗಿರುವ ವಿಜಯಪುರ ಜಿಲ್ಲೆಯಲ್ಲಿ ತಿಪ್ಪೆಗೊಬ್ಬರವನ್ನೇ ರೈತರು ಕೃಷಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿರುವುದು ಸಾವಯವ ಕೃಷಿ ಅನುಷ್ಠಾನಕ್ಕೆ ಪೂರಕವಾಗಿದೆ.

Advertisement

ಸೌಲಭ್ಯ ಏನೇನಿದೆ?: ವಿಜಯಪುರ ನಗರಕ್ಕೆ ಹೊಂದಿಕೊಂಡಿರುವ ಹಿಟ್ನಳ್ಳಿ ಬಳಿ 567 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಕೃಷಿ ಮಹಾವಿದ್ಯಾಲಯ ಹಾಗೂ ಬೃಹತ್‌ ಪ್ರಮಾಣದ ಆಡಳಿತ ಕಟ್ಟಡ ಹೊಂದಿದೆ. ಇದೇ ಆವರಣದಲ್ಲಿ ಪದವಿ-ಸ್ನಾತಕೋತ್ತರ ಕೃಷಿ ಅಧ್ಯಯನ
ಮಾಡುತ್ತಿರುವ 400 ವಿದ್ಯಾರ್ಥಿನಿಯರು ಹಾಗೂ 500 ವಿದ್ಯಾರ್ಥಿಗಳು ವಾಸ್ತವ್ಯಕ್ಕೆ ಹಾಸ್ಟೆಲ್‌ಗ‌ಳಿವೆ. ಬೋಧನೆಗೆ ಅಗತ್ಯ ಕೋಠಡಿಗಳು ಸೇರಿದಂತೆ ಭೌತಿಕ ಅಗತ್ಯ ತುರ್ತು ಸಂಪನ್ಮೂಲಗಳೂ ಲಭ್ಯವಿದೆ. ಇದಲ್ಲದೇ ಹಿಟ್ನಳ್ಳಿ, ಆಲಮೇಲದಲ್ಲಿ ಕೃಷಿ ಸಂಶೋಧನಾ ಕೇಂದ್ರ, ರಾಷ್ಟ್ರೀಯ ಕೃಷಿ ಸಂಸೋಧನಾ ಯೋಜನೆ ಕೇಂದ್ರ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಹಿಟ್ನಳ್ಳಿ, ಇಂಡಿ ಕೃಷಿ ವಿಜ್ಞಾನ ಕೇಂದ್ರ, ತಿಡಗುಂದಿ ತೋಟಗಾರಿಕೆ ಸಂಶೋಧನೆ ಕೇಂದ್ರ ಹೀಗೆ ಎಲ್ಲ ರೀತಿಯಲ್ಲೂ ಪೂರಕವಾದ ಆಡಳಿತಾತ್ಮಕ ಸಂಪನ್ಮೂಲಗಳು ಬಸವನಾಡಿನಲ್ಲಿ ಲಭ್ಯವಿವೆ.
ಮತ್ತೂಂದೆಡೆ ನೂತನವಾಗಿ ನೀರಾವರಿ ಸೌಲಭ್ಯ ಕಾಣುವ ನೆಲಕ್ಕೆ ಅವೈಜ್ಞಾನಿಕ ರಸಗೊಬ್ಬ ಹಾಗೂ ಹೈಬ್ರಿಡ್‌ ತಳಿ ವಾಣಿಜ್ಯ ಬೆಳೆ ಪ್ರವೇಶ ಮಾಡುವ ಮುನ್ನ ಸಾವಯವ ಕೃಷಿ-ತೋಗಾರಿಕೆ ಹಾಗೂ ಸಂರಕ್ಷಿತ ಜವಾರಿ ತಳಿಗಳ ಸಂವರ್ಧನೆಗೂ ಪೂರಕ ಪರಿಸ್ಥಿತಿ ನಿರ್ಮಾಣವಾಗಲಿದೆ.

ರಸಗೊಬ್ಬರ ಅಧಿ ಕವಾಗಿ ಬಳಸುವ ರೈತರನ್ನು ಸಾವಯವ ವ್ಯವಸ್ಥೆಗೆ ಮನ ಪರಿವರ್ತನೆ ಮಾಡುವುದು ಸುಲಭವಲ್ಲ. ರಸಗೊಬ್ಬರ-ಕ್ರಿಮಿನಾಶಕ ಹೆಚ್ಚು ಬಳಸುವ ಪ್ರದೇಶಕ್ಕಿಂತ ಸಾಂಪ್ರದಾಯಿಕ ಕೃಷಿಯನ್ನೇ ಅವಲಂಬಿಸಿರುವ ವಿಜಯಪುರ ಜಿಲ್ಲೆಯಲ್ಲಿ ಸಾವಯವ ಕೃಷಿಗೆ ಭೂಮಿಯನ್ನು ಹೊಂದಿಸುವುದು ಹಾಗೂ ನಿರೀಕ್ಷಿತ ಫಲ-ಪರಿಣಾಮ-ಫಲಿತಾಂಶ ಪಡೆಯಲು ಸುಲಭವಾಗುತ್ತದೆ.

–ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next