Advertisement

ಚಿತ್ರಸಂತೆ ಕಲಾ ಪ್ರತಿಭೆಗೆ ವೇದಿಕೆ: ನ್ಯಾ|ಸಿದ್ರಾಮ್‌

04:11 PM Feb 03, 2020 | Naveen |

ಬೀದರ: ಮನುಷ್ಯ ತಾನು ಹೇಳಿಕೊಳ್ಳಲಾಗದ ಭಾವನೆಗಳನ್ನು ಚಿತ್ರಕಲೆಯ ಮೂಲಕ ವ್ಯಕ್ತಪಡಿಸುತ್ತಾನೆ. ಕಲಾವಿದರ ಪ್ರತಿಭೆ ಗುರುತಿಸುವ ವೇದಿಕೆಯಂತಿರುವ ಚಿತ್ರಸಂತೆ ಅಂತಹ ಕಾರ್ಯಕ್ರಮಗಳು ಬೀದರನಲ್ಲಿ ನಿರಂತರವಾಗಿ ನಡೆಯಬೇಕು ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಟಿ.ಪಿ. ಸಿದ್ರಾಮ್‌ ಸಲಹೆ ನೀಡಿದರು.

Advertisement

ನಗರದ ಜಿಲ್ಲಾ ನ್ಯಾಯಾಲಯದ ಮುಖ್ಯ ರಸ್ತೆಯಲ್ಲಿ ರವಿವಾರ ಚಿತ್ರಕಲಾ ಕಾಲೇಜುಗಳು, ಚಿತ್ರಕಲಾ ಶಿಕ್ಷಕರ ಸಂಘ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮೂರನೇ ಚಿತ್ರಸಂತೆ, ವರಕವಿ ಬೇಂದ್ರೆ ಜಯಂತ್ಯುತ್ಸವ ಮತ್ತು ಬಹುಭಾಷಾ ಕವಿಗೋಷ್ಠಿಗೆ ಉದ್ಘಾಟಿಸಿ ಅವರು ನೀಡಿ ಮಾತನಾಡಿದರು.

ಜನರಿಗೆ ಚಿತ್ರಗಳು, ಕಲೆಗಳ ಬಗ್ಗೆ ತಿಳಿಯಬೇಕು. ಕಲೆ, ಸಾಹಿತ್ಯ ಕುರಿತು ಅರಿಯುವುದಕ್ಕಾಗಿ ಇಂತಹ ಕಾರ್ಯಕ್ರಮಗಳು ಆಗಾಗ ನಡೆಯುತ್ತಿರಬೇಕು ಎಂದು ಅಭಿಪ್ರಾಯಪಟ್ಟರು.

ನಗರದ ಶಿವಾಜಿ ವೃತ್ತದಿಂದ ತಹಶೀಲ್ದಾರ್‌ ಕಚೇರಿ ಪಾದಚಾರಿ ರಸ್ತೆ ಮೇಲೆ ನಡೆದ ಚಿತ್ರ ಸಂತೆಯನ್ನು ಕಲಾಸಕ್ತರು ಕಣ್ತುಂಬಿಕೊಂಡರು. ಬೀದರ, ಕಲಬುರಗಿ, ಬಳ್ಳಾರಿ, ರಾಯಚೂರು, ಬಳ್ಳಾರಿ, ಬೆಂಗಳೂರು ಮಾತ್ರವಲ್ಲದೇ ಕೋಲ್ಕತ್ತಾ, ಮುಂಬೈ, ನಾಗಪುರ, ಹೈದರಾಬಾದನ ಕಲಾವಿದರು ಸಂತೆಯಲ್ಲಿ ಮಳಿಗೆಗಳನ್ನು ಹಾಕಿದ್ದು, ಕಲಾಕೃತಿಗಳು ಜನಮನ ಸೆಳೆದವು.

ಕೃಷಿ, ಹಳ್ಳಿ ಬದುಕು, ದೇವರು, ಪ್ರಾಣಿಗಳು, ವ್ಯಾಪಾರ- ವಹಿವಾಟು ಸೇರಿದಂತೆ ವಿವಿಧ ಬಗೆಯ ಚಿತ್ರಗಳು ಚಿತ್ರ ಸಂತೆಯಲ್ಲಿವೆ. ಕಲಾ ರಸಿಕರು ಕಲಾಕೃತಿಗಳನ್ನು ವೀಕ್ಷಿಸಿದರೆ, ಕೆಲವರು ಆಸಕ್ತಿಯಿಂದ ಖರೀದಿಯೂ ಮಾಡಿದರು.

Advertisement

ವಿದ್ಯಾರ್ಥಿಗಳು ಚಿತ್ರಗಳನ್ನು ಸ್ಥಳದಲ್ಲೇ ಬಿಡಿಸುತ್ತಿದ್ದ ದೃಶ್ಯ ಆಕರ್ಷಿಸಿತು. ಚಿತ್ರ ಸಂತೆ ನಿಮಿತ್ತ ನ್ಯಾಯಾಲಯದ ಆವರಣದಲ್ಲಿ ಶಾಲಾ ಮಕ್ಕಳಿಗಾಗಿ ಚಿತ್ರಕಲಾ ಮತ್ತು ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿವಿಧ ಶಾಲೆಯ ವಿದ್ಯಾರ್ಥಿಗಳು, ಮಹಿಳೆಯರು ಭಾಗವಹಿಸಿದ್ದರು. ಮತ್ತೂಂದೆಡೆ ಮಕ್ಕಳಿಂದ ನಡೆದ ವೇಷ ಭೂಷಣ ಸ್ಪರ್ಧೆಯು ಎಲ್ಲರ ಗಮನ ಸೆಳೆಯಿತು.

ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ, ಉದ್ಯಮಿ ಧನರಾಜ ತಾಳಂಪಳ್ಳಿ, ಹಿರಿಯ ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ್‌ ಸಿಂಧೆ, ಪ್ರಮುಖರಾದ ಎ.ಎಸ್‌. ಪಾಟೀಲ, ವಿಷ್ಣುಕಾಂತ ಠಾಕೂರ್‌, ಮಲ್ಲಿಕಾರ್ಜುನ ಕೋರವಾರಕರ್‌, ಶಿವಶಂಕರ ಟೋಕರೆ ಸೇರಿದಂತೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next