Advertisement

ತ್ಯಾಜ್ಯ ಮುಕ್ತವಾಗದ ಬೀಡಿನಗುಡ್ಡೆ

09:20 PM Nov 22, 2021 | Team Udayavani |

ಉಡುಪಿ: ನಗರದ ಬೀಡಿನಗುಡ್ಡೆಗೆ ತ್ಯಾಜ್ಯ ಮುಕ್ತವಾಗುವ ಪರಿಸ್ಥಿತಿಯೇ ನಿರ್ಮಾಣವಾಗುತ್ತಿಲ್ಲ. ನಗರಸಭೆ ಸಹಿತ ಸಂಘ, ಸಂಸ್ಥೆಗಳ ನಿರಂತರ ಜಾಗೃತಿ, ಸ್ವಚ್ಛತೆ ಕಾರ್ಯಕ್ರಮಗಳ ಹೊರತಾಗಿಯೂ ಸಾರ್ವಜನಿಕರ ನಿರ್ಲಕ್ಷ್ಯದಿಂದಾಗಿ ಬೀಡಿನಗುಡ್ಡೆಗೆ ತ್ಯಾಜ್ಯದಿಂದ ಮುಕ್ತಿ ಸಿಗಲು ಸಾಧ್ಯವಾಗುತ್ತಿಲ್ಲ.

Advertisement

ಬಯಲು ರಂಗಮಂದಿರ ಎದುರು ರಸ್ತೆ ಬದಿ ಉದ್ದಕ್ಕೂ ತ್ಯಾಜ್ಯಗಳು ಚೆಲ್ಲಾಡಿಕೊಂಡು ಬಿದ್ದಿದೆ. ಬೃಹತ್‌ ಆಕಾರದಲ್ಲಿ ಬೆಳೆದಿದ್ದ ಹುಲ್ಲುಗಳನ್ನು ನಗರಸಭೆ ಸಿಬಂದಿ ಕತ್ತರಿಸಿ ತೆಗೆದಿದ್ದಾರೆ. ಆ ಹುಲ್ಲುಗಳ ನಡುವೆ ಸಾಕಷ್ಟು ಪ್ರಮಾಣದಲ್ಲಿ ತ್ಯಾಜ್ಯ ಎಸೆದಿರುವುದು ಗಮನಕ್ಕೆ ಬಂದಿದೆ. ದೊಡ್ಡದೊಡ್ಡ ಗಂಟುಗಳಲ್ಲಿ ತ್ಯಾಜ್ಯವನ್ನು ಕಟ್ಟಿ ಇಲ್ಲಿ ಎಸೆಯಲಾಗಿದೆ.

ಪ್ಲಾಸ್ಟಿಕ್‌, ಮದ್ಯದ ಬಾಟಲಿಗಳು ಇಲ್ಲಿ ರಾಶಿ ಬಿದ್ದಿವೆ ಎಂದು ಸ್ಥಳೀಯರು ದೂರಿದ್ದಾರೆ. ನಗರಸಭೆ ಸಿಬಂದಿ ಇತ್ತೀಚೆಗೆ ಸ್ವತ್ಛಗೊಳಿಸಿದರೂ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ.

ಕೋಳಿ, ಮೀನು ಮಾಂಸದ ತ್ಯಾಜ್ಯ, ಮದ್ಯ ಬಾಟಲಿ, ತರಕಾರಿ ತ್ಯಾಜ್ಯ, ಕೊಳೆತ ಆಹಾರಗಳು, ಪ್ಲಾಸ್ಟಿಕ್‌ ಬಾಟಲಿ, ದೊಡ್ಡ ಗಂಟುಗಳಲ್ಲಿ ನಾನ ಬಗೆಯ ತ್ಯಾಜ್ಯಗಳನ್ನು ಇಲ್ಲಿ ಸುರಿಯಲಾಗಿದೆ. ಪರಿಸರದಲ್ಲಿ ಬೀಡಿನಗುಡ್ಡೆ, ಕುಂಜಿಬೆಟ್ಟು ಕಡೆಯವರು ಈ ರಸ್ತೆಯಲ್ಲಿ ಸಾಗುತ್ತಾರೆ. ಪಾದಚಾರಿಗಳಿಗೆ, ದ್ವಿಚಕ್ರ, ಕಾರುಗಳಲ್ಲಿ ಸಾಗುವರಿಗೆ ಆಗಾಗ ದುರ್ವಾಸನೆಯಿಂದ ಮೂಗುಮುಚ್ಚಿಕೊಂಡು ಸಾಗಬೇಕಾಗುತ್ತದೆ. ಇಲ್ಲಿನ ಮಳೆ ನೀರು ಹರಿಯುವ ಚರಂಡಿಯಲ್ಲಿ ತ್ಯಾಜ್ಯ, ಮಣ್ಣಿನ ರಾಶಿ ಸಿಲುಕಿದ್ದು, ನೀರು ಸರಾಗವಾಗಿ ಹರಿಯಲು ತಡೆಯಾಗಿದೆ ಎಂದು ನಾಗರಿಕರು ದೂರಿದ್ದಾರೆ.

ಎಚ್ಚೆತ್ತುಕೊಳ್ಳದ ಜನತೆ
ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯಬೇಡಿ ಒಣ ಮತ್ತು ಹಸಿ ಕಸವನ್ನು ಬೇರ್ಪಡಿಸಿ ಒಣಕಸವನ್ನು ಮಾತ್ರ ನೀಡಿ ಎಂದು ಜಿಲ್ಲಾಡಳಿತ, ನಗರಸಭೆ ನಿರಂತರ ಸಲಹೆ, ಸೂಚನೆ ನೀಡುತ್ತಿದೆ.

Advertisement

ಆದರೂ ಕೆಲವು ಜನರು ಈ ಬಗ್ಗೆ ಎಚ್ಚೆತ್ತುಕೊಳ್ಳದೆ ನಿಯಮ ಪಾಲಿಸಲು ಹಿಂದೇಟು ಹಾಕುತ್ತಿದ್ದಾರೆ.ನಗರದ ಕೆಲವು ಭಾಗದಲ್ಲಿ ತ್ಯಾಜ್ಯ ಸಮಸ್ಯೆ ಬಗೆಹರಿಸುವುದೇ ಸವಾಲಾಗಿದೆ ಎಂದು ಅಸಾಹಯಕತೆ ವ್ಯಕ್ತಪಡಿಸುತ್ತಾರೆ ನಗರಸಭೆ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗ.

ಇದನ್ನೂ ಓದಿ:ಏರ್‌ಟೆಲ್‌ ಪ್ರಿ-ಪೇಯ್ಡ್ ಶುಲ್ಕ ಶೇ.25ರ ವರೆಗೆ ಏರಿಕೆ

ದಂಡ ಬಿಸಿ ಮುಟ್ಟಿಸಬೇಕು
ಸ್ಥಳೀಯರು ಇಲ್ಲಿ ತ್ಯಾಜ್ಯ ಎಸೆಯುವುದಿಲ್ಲ. ಇನ್ನೊಂದು ಏರಿಯಾದಿಂದ ರಾತ್ರಿವೇಳೆ ಕಾರು ಮತ್ತು ಬೈಕ್‌ಗಳಲ್ಲಿ ಈ ಭಾಗಕ್ಕೆ ಆಗಮಿಸಿ ಕಸ ಎಸೆಯುತ್ತಾರೆ. ಯಾರಿಗೂ ತಿಳಿಯುವುದಿಲ್ಲ ಎಂದು ಹುಲ್ಲು ಬೆಳೆದ ಜಾಗದ ನಡುವೆ ದೊಡ್ಡ ಗಂಟುಗಳಲ್ಲಿ ಕಸ ತಂದು ಸುರಿಯುತ್ತಾರೆ ಎಂದು ಸ್ಥಳೀಯ ಜನರು ದೂರಿದ್ದಾರೆ. ನಗರಸಭೆ ಈ ಭಾಗದಲ್ಲಿ ನಿಗಾವಹಿಸಿ ಕಸ ಎಸೆಯುವರನ್ನು ಪತ್ತೆ ಮಾಡಿ ದಂಡ ವಿಧಿಸಿ ಬಿಸಿ ಮುಟ್ಟಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ನಿಗಾ ವಹಿಸುವಂತೆ ಸೂಚನೆ
ಅಧಿಕಾರಿಗಳು ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರನ್ನು ಪತ್ತೆ ಮಾಡಿ ಕಾನೂನು ಪ್ರಕಾರ ದಂಡ ವಿಧಿಸುತ್ತಿದ್ದಾರೆ. ಬೀಡಿನಗುಡ್ಡೆ ವ್ಯಾಪ್ತಿಯಲ್ಲಿಯೂ ನಿಗಾ ವಹಿಸುವಂತೆ ಸೂಚನೆ ನೀಡಲಾಗುವುದು. ಬೀಡಿನಗುಡ್ಡೆ ರಂಗಮಂದಿರ ಸಮೀಪ ರಸ್ತೆ ಬದಿಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿರುತ್ತದೆ. ನಗರದ ಎಲ್ಲ ಕಡೆಗಳಲ್ಲಿ ತ್ಯಾಜ್ಯ ರಾಶಿ ಸೃಷ್ಟಿಯಾಗದಂತೆ ಪೌರಕಾರ್ಮಿಕರು ಶ್ರಮದಿಂದ ಕೆಲಸ ಮಾಡುತ್ತಿದ್ದಾರೆ. ಎಷ್ಟೇ ಜಾಗೃತಿ ಮೂಡಿಸಿದರೂ ಕೆಲವರು ಸಾಮಾಜಿಕ ಜವಾಬ್ದಾರಿ ಮರೆತು, ಜವಾಬ್ದಾರಿಯಿಂದ ವರ್ತಿಸದೆ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯುತ್ತಿರುವುದು ವಿಷಾದಕರ.
ಸುಮಿತ್ರಾ ನಾಯಕ್‌, ಅಧ್ಯಕ್ಷರು,
ಉಡುಪಿ ನಗರಸಭೆ

Advertisement

Udayavani is now on Telegram. Click here to join our channel and stay updated with the latest news.

Next