ಬೆಳ್ಳಾರೆ: ರಾಜ್ಯದಲ್ಲಿ ಬೀಡಿ ಕೈಗಾರಿಕೆಯನ್ನು ನಂಬಿಕೊಂಡು ಅನೇಕ ಕುಟುಂಬಗಳು ಜೀವನ ಸಾಗಿಸುತ್ತಿವೆ. ಆದರೆ ಸರಕಾರ ತಂಬಾಕು ನಿಷೇಧ ಕಾಯ್ದೆಯನ್ನು ಜಾರಿ ಮಾಡಿದ್ದರಿಂದ ಬೀಡಿ ಕಾರ್ಮಿಕರು ಅತಂತ್ರಕ್ಕೆ ಸಿಲುಕಿದ್ದಾರೆ. ತಂಬಾಕು ನಿಷೇಧಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಬೀಡಿ ಕೈಗಾರಿಕೆಯನ್ನು ನಂಬಿರುವ ಕುಟುಂಬದವರಿಗೆ ಸರಕಾರ ಬದಲಿ ಉದ್ಯೋಗ ನೀಡಲಿ ಎಂದು ಬೀಡಿ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹೇಳಿದರು.ಅವರು ಸುಳ್ಯದಲ್ಲಿ ನಡೆದ ಬೀಡಿ ಕಾರ್ಮಿಕರ ಸಂಘದ ಮಹಾಸಭೆಯಲ್ಲಿ ಮಾತನಾಡಿದರು.
ಬೀಡಿ ಕೈಗಾರಿಕೆಗೆ ಹಲವು ವರ್ಷಗಳ ಇತಿಹಾಸವಿದೆ. ಒಂದು ಕಾಲದಲ್ಲಿ ಪುರುಷರೇ ಬೀಡಿ ಕೈಗಾರಿಕೆಯಲ್ಲಿ ದುಡಿಯುತ್ತಿದ್ದು, ಕಾಲ ಬದಲಾಗುತ್ತಾ ಮಹಿಳೆಯರು ತೊಡಗಿಸಿಕೊಂಡರು. ಜಿಲ್ಲೆಯ ಅಭಿವೃದ್ಧಿಯಲ್ಲಿಯೂ ಬೀಡಿ ಕಾರ್ಮಿಕರ ಕೊಡುಗೆ ಇದೆ. ಆದ್ದರಿಂದ ನಮ್ಮ ಬದುಕನ್ನು ಉಳಿಸಿಕೊಳ್ಳಲು ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು. ಬೀಡಿ ಕೈಗಾರಿಕೆಯ ಪ್ರತೀ ಕುಟುಂಬಕ್ಕೂ ಸರಕಾರ ಬದಲಿ ಉದ್ಯೋಗ ನೀಡಬೇಕು. ಇಲ್ಲವೇ ಕಾರ್ಮಿಕರಿಗೆ ತಿಂಗಳಿಗೆ 6 ಸಾವಿರ ರೂ. ಪಿಂಚಣಿಯನ್ನಾದರೂ ನೀಡಬೇಕು. ಈ ನಿಟ್ಟಿನಲ್ಲಿ ನಮ್ಮ ಹೋರಾಟ ಸಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ರಾಬರ್ಟ್ ಡಿ’ಸೋಜಾ ಅವರು ಮಾತನಾಡಿ, ಬೀಡಿ ಕಾರ್ಮಿಕರು ನಿರಂತರ ಶೋಷಣೆಗೆ ಒಳಗಾಗುತ್ತಿದ್ದು, ಕೋಟಿಗೂ ಮಿಕ್ಕಿ ಬೀಡಿ ಕಾರ್ಮಿಕರ ಬದುಕಿನಲ್ಲಿ ಸರಕಾರ ಚೆಲ್ಲಾಟವಾಡುತ್ತಿವೆ ಎಂದು ಹೇಳಿದರು.
ಸಿಐಟಿಯು ಉಪಾಧ್ಯಕ್ಷ ಕೆ.ಪಿ. ಜಾನಿ ಕಲ್ಲುಗುಂಡಿ, ಜಿಲ್ಲಾ ಫೆಡರೇಶನ್ ಉಪ ಕಾರ್ಯದರ್ಶಿ ರಾಮಣ್ಣ ವಿಟ್ಲ ಅವರು ಮಾತನಾಡಿದರು. ಬೀಡಿ ಕಾರ್ಮಿಕರ ಸಂಘದ ಪ್ರ. ಕಾರ್ಯದರ್ಶಿ ಅನಸೂಯಾ, ಸುಳ್ಯ ತಾಲೂಕು ಬೀಡಿ ಕಾರ್ಮಿಕರ ಸಂಘದ ಉಪಾಧ್ಯಕ್ಷ ಸುಂದರ ಜಯನಗರ, ಹಮಾಲಿ ಕಾರ್ಮಿಕರ ಸಂಘದ ಉಪಾಧ್ಯಕ್ಷ ಸುಂದರ ಆಚಾರಿ, ರಿಕ್ಷಾ ಯೂನಿಯನ್ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್, ರಿಕ್ಷಾ ಯೂನಿಯನ್ ಅಧ್ಯಕ್ಷ ಪ್ರದೀಪ್ ಮೊದಲಾದವರು ಉಪಸ್ಥಿತರಿದ್ದರು.
ಸಂಘಟಿತರಾಗಬೇಕು
ಬೀಡಿ ಕಾರ್ಮಿಕರ ಜೀವನದ ಮೇಲೆ ಅಭದ್ರತೆಯ ಮೋಡ ಕವಿದಿದೆ. ಕಾರ್ಮಿಕರು ಸಂಘಟಿತರಾಗಿ ಚಳವಳಿಯಲ್ಲಿ ತೊಡಗಿಸಿಕೊಂಡು ಹೋರಾಟಗಳ ಮುಖಾಂತರ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ರಾಜ್ಯದಲ್ಲಿ 8 ಲಕ್ಷ ಬೀಡಿ ಕಾರ್ಮಿಕರಿದ್ದಾರೆ. ತಾಲೂಕಿನಲ್ಲಿ ಸುಮಾರು 5 ರಿಂದ 6 ಸಾವಿರ ಬೀಡಿ ಕಾರ್ಮಿಕರಿದ್ದಾರೆ. ಎಲ್ಲ ಕಾರ್ಮಿಕರು ಸಂಘಟನೆಯಲ್ಲಿ ಗುರುತಿಸಿಕೊಂಡು ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಸಂಘಟಿತರಾಗಿ ಹೋರಾಟ ನಡೆಸಬೇಕೆಂದು ಸಂಘದ ಅಧ್ಯಕ್ಷ ರಾಬರ್ಟ್ ಡಿ’ಸೋಜಾ ಅವರು ಹೇಳಿದರು.