ಮಂಗಳೂರು: ಹೆಚ್ಚುವರಿ ಕಮಿಷನ್‌ಗಾಗಿ ಬೀಡಿ ಗುತ್ತಿಗೆದಾರರ ವಿವಿಧ ಸಂಘಟನೆಗಳಿಂದ ಆಡಳಿತ ವರ್ಗಕ್ಕೆ ಮನವಿ ಮಾಡಲಾಗಿದೆ. ಆದರೆ ಇನ್ನೂ ಬೇಡಿಕೆ ಈಡೇರಿಲ್ಲ. ಫೆ. 10ರೊಳಗೆ ಮನವಿಗೆ ಸ್ಪಂದಿಸದಿದ್ದರೆ ಮೂರು ಜಿಲ್ಲೆಗಳ ಗುತ್ತಿಗೆದಾರರು ಕೆಲಸ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಬೀಡಿ ಗುತ್ತಿಗೆದಾರರ ಒಕ್ಕೂಟದ ಕಾರ್ಯಾಧ್ಯಕ್ಷ ಮಹಮ್ಮದ್ ರಫಿ ಹೇಳಿದರು.
ಕರ್ನಾಟಕ ರಾಜ್ಯ ಬೀಡಿ ಕಂಟ್ರಾಕುr ದಾರರ ಸಂಘ, ದ.ಕ., ಉಡುಪಿ ಜಿಲ್ಲಾ ಬೀಡಿ ಕಂಟ್ರಾಕುrದಾರರ ಸಂಘ, ಸೌತ್ ಕೆನರಾ- ಉಡುಪಿ ಜಿಲ್ಲಾ ಬೀಡಿ ಕಂಟ್ರಾಕ್ಟರ್ ಯೂನಿಯನ್ ಎಚ್‌ಎಂಎಸ್, ಜಯ ಕರ್ನಾಟಕ ಬೀಡಿ ಗುತ್ತಿಗೆದಾರರ ಸಂಘ ಪುತ್ತೂರು ಮತ್ತು ಕಾಸರಗೋಡು ಜಿಲ್ಲಾ ಬೀಡಿ ಗುತ್ತಿಗೆದಾರರ ಸಂಘದಿಂದ ಜಂಟಿ ಯಾಗಿ ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಎಚ್ಚರಿಕೆ ನೀಡಿದರು.
ದಕ್ಷಿಣ ಕನ್ನಡ-ಉಡುಪಿ-ಮಂಜೇಶ್ವರ- ಕಾಸರಗೋಡು-ಕಾಞಂಗಾಡ್ ಭಾಗಗಳಲ್ಲಿ ಬೀಡಿ ಕೈಗಾರಿಕೆಯಲ್ಲಿ ಸುಮಾರು 5 ಸಾವಿರ ಮಂದಿ ಬೀಡಿ ಗುತ್ತಿಗೆದಾರರಾಗಿ ಸದಸ್ಯರಿದ್ದಾರೆ. ಜಿಲ್ಲೆಯಲ್ಲಿ ವಿವಿಧ ಮಾರ್ಕಿನ ಬೀಡಿ ಸಂಸ್ಥೆಯಿಂದ ಗುತ್ತಿಗೆದಾರರು ಎಲೆ-ತಂಬಾಕು ಇತರ ವಸ್ತುಗಳನ್ನು ಪಡೆದು ಅದನ್ನು ಬೀಡಿ ಕಾರ್ಮಿಕರಿಗೆ ವಿತರಿಸಿ, ಅದರಿಂದ ತಯಾರಾದ ಬೀಡಿಯನ್ನು ಕಾರ್ಮಿಕರಿಂದ ಪಡೆದು, ಆಯಾಯ ಕಂಪೆನಿಗೆ ತಲುಪಿಸುತ್ತಾರೆ. ಅವರ ದುಡಿಮೆಗೆ ಒಂದು ಸಾವಿರ ಬೀಡಿಗೆ ಸದ್ಯ 26.75 ರೂ. ಕಮಿಷನ್ ನೀಡಲಾಗುತ್ತಿದೆ. ಇದನ್ನು ಹೆಚ್ಚುವರಿ 10 ರೂ.ಗೆ ಏರಿಸಬೇಕು ಎಂಬ ಮನವಿ ಮಾಡುತ್ತಿದ್ದೇವೆ ಎಂದರು.
2022-23ನೇ ಅವಧಿಗೆ 10 ರೂ. ಹೆಚ್ಚುವರಿಯಾಗಿ ಕಮಿಷನ್ ನೀಡಲು ಬೀಡಿ ಗುತ್ತಿಗೆದಾರರು ಜ. 5ರಂದು ಮನವಿ ಮಾಡಿದ್ದರು. ಜ. 16ರೊಳಗೆ ಬೇಡಿಕೆ ಈಡೇರಿಸಲು ಮನವಿ ಮಾಡಲಾಗಿತ್ತು. ಜ. 30ರಂದು ಸಭೆ ಕರೆಯಲಾಗಿದ್ದರೂ ಆ ಜಂಟಿ ಸಭೆಯನ್ನು ವಿನಾ ಕಾರಣ ರದ್ದುಗೊಳಿಸಲಾಗಿದೆ ಎಂದರು.
ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಎಂ. ಸುರೇಶ್ಚಂದ್ರ ಶೆಟ್ಟಿ, ರವಿ ಉಡುಪಿ, ಹರೀಶ್ ಕೆ.ಎಸ್., ಕೃಷ್ಣಪ್ಪ ತೊಕ್ಕೊಟ್ಟು, ಗಂಗಾಧರ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿದ್ದರು.