Advertisement

ಸ್ವಸಹಾಯ ಗುಂಪು ವ್ಯವಹಾರ ಡಿಜಿಟಲೀಕರಣ

12:16 PM Feb 01, 2020 | Naveen |

ಬೀದರ: ಸ್ವ-ಸಹಾಯ ಗುಂಪುಗಳ ವ್ಯವಹಾರವನ್ನು ಮೊಬೈಲ್‌ ಬ್ಯಾಂಕಿಂಗ್‌ ವ್ಯವಸ್ಥೆಗೆ ಅಳವಡಿಸುವ ಇ-ಶಕ್ತಿ ಯೋಜನೆ ಬೀದರಿನಲ್ಲಿ ಅನುಷ್ಠಾನಗೊಳ್ಳುತ್ತಿದ್ದು, ಮೊದಲ ಹಂತದಲ್ಲಿ 13,500 ಗುಂಪುಗಳನ್ನು ಡಿಜಟಲೀಕರಣ ಗೊಳಿಸಲಾಗಿದೆ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿದರು.

Advertisement

ನಗರದ ನೌಬಾದ್‌ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಜಿಲ್ಲೆಯ ಸ್ವ-ಸಹಾಯ ಗುಂಪುಗಳ ಮೇಲ್ವಿಚಾರಕರು ಮತ್ತು ಬ್ಯಾಂಕ್‌ ಸಿಬ್ಬಂದಿಗಳಿಗಾಗಿ ಆಯೋಜಿಸಿದ್ದ ಮೂರು ದಿನದ ತರಬೇತಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಬಾರ್ಡ್‌ ವತಿಯಿಂದ ಪ್ರಾಯೋಗಿಕವಾಗಿ ಕೈಗೊಂಡಿರುವ ಇ-ಶಕ್ತಿ ಯೋಜನೆಯಲ್ಲಿ ಎಲ್ಲ ಸ್ವ-ಸಹಾಯ ಗುಂಪುಗಳನ್ನು ಮಾತ್ರವಲ್ಲ ಪ್ರತಿಯೊಬ್ಬ ಸದಸ್ಯರನ್ನು ವೈಯುಕ್ತಿಕ ವಿವರಗಳೊಂದಿಗೆ ದಾಖಲಿಸಿಕೊಳ್ಳಲಾಗುತ್ತಿದೆ ಎಂದರು.

ಗುಂಪುಗಳ ಉಳಿತಾಯ, ಸಾಲದ ವಹಿವಾಟು, ವಸೂಲಿ ವಿವರಗಳನ್ನು ನಿಯಮಿತವಾಗಿ ಇ-ಶಕ್ತಿ ಪೋರ್ಟಲ್‌ನಲ್ಲಿ ದಾಖಲಿಸಲಾಗುತ್ತಿದೆ. ಇದರಿಂದ ಪ್ರತಿಯೊಬ್ಬ ಸದಸ್ಯರು ತಮ್ಮ ಮೊಬೈಲ್‌ಗ‌ಳಲ್ಲಿ ಇದರ ಮಾಹಿತಿಗಳನ್ನು ಪಡೆಯಬಹುದಾಗಿದೆ. ಬ್ಯಾಂಕುಗಳು ಕೂಡ ಈ ಪೋರ್ಟಲ್‌ ಮೂಲಕವೇ ಸಾಲ ನೀಡಬಹುದಾಗಿದ್ದು ದ್ವಿಸದಸ್ಯತನ, ಒಬ್ಬರಿಗೇ ಎರಡೆರಡು ಸಾಲ ಒಂದೇ ಗುಂಪು ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಸಾಲ ಪಡೆಯುವುದು ಮೊದಲಾದ ಅಕ್ರಮಗಳನ್ನು ತಡೆಯ ಬಹುದಾಗಿದೆ ಎಂದು ತಿಳಿಸಿದರು.

ಇ-ಶಕ್ತಿ ಪೋರ್ಟಲ್‌ನಲ್ಲಿ ನೋಂದಾಯಿತ ಗುಂಪುಗಳು ಸಾಲದ ಅರ್ಜಿ ಸಲ್ಲಿಸಿ 90 ದಿನಗಳ ವರೆಗೆ ಬ್ಯಾಂಕ್‌ ಸಾಲ ನೀಡದಿದ್ದಲ್ಲಿ ಬೇರೆ ಬ್ಯಾಂಕ್‌ನವರು ನೇರವಾಗಿ ಅಂತಹ ಗುಂಪಿಗೆ ಸಾಲ ನೀಡ ಬಹುದಾದ ಸೌಲಭ್ಯವನ್ನು ಇದು ಹೊಂದಿರುವುದರಿಂದ ಬ್ಯಾಂಕ್‌ ಗಳು ಹೆಚ್ಚು ಜವಾಬ್ದಾರಿಯಿಂದ ಸಮಯದ ಮಿತಿಯೊಳಗೆ ಕರ್ತವ್ಯ ನಿಭಾಯಿಸಬೇಕಾಗುತ್ತದೆ ಎಂದು ಹೇಳಿದರು.

ನಬಾರ್ಡ್‌ ನೇತೃತ್ವದಲ್ಲಿ ದೇಶದ ಕೆಲ ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳುತ್ತಿರುವ ಈ ಯೋಜನೆಯಲ್ಲಿ ಬೀದರ ಒಳಗೊಂಡಿರುವುದು ಹೆಮ್ಮೆಯ ವಿಷಯ. ಇದರಿಂದ ಬ್ಯಾಂಕ್‌ ಮತ್ತು ಜನರ ಮಧ್ಯ ವಿಶ್ವಾಸಾರ್ಹತೆ, ಗುಂಪುಗಳಲ್ಲಿ ಪಾರದರ್ಶಕತೆ ಹೆಚ್ಚಾಗಲಿದೆ. ಬೀದರ ಡಿಸಿಸಿ ಬ್ಯಾಂಕ್‌ ಈ ಯೋಜನೆಯಲ್ಲಿ ಸ್ವ-ಸಹಾಯ ಗುಂಪಿನ ಮೇಲ್ವಿಚಾರಕರಿಗೆ ಮೊಬೈಲ್‌ ಹ್ಯಾಂಡ್‌ ಸೆಟ್‌ ಗಳನ್ನು ನೀಡಿದ್ದು ಅದನ್ನು ಬಳಸುವ ವಿಧಾನದಲ್ಲಿ ತರಬೇತಿಯನ್ನೂ
ನೀಡುತ್ತಿದೆ. ಇ-ಶಕ್ತಿ ಆ್ಯಪ್‌ ಮೂಲಕ ಗುಂಪಿನ ಸದಸ್ಯರು ಮನೆಯಲ್ಲೇ ಕುಳಿತು ತಮ್ಮ ಮೊಬೈಲ್‌ಗ‌ಳಲ್ಲೇ ವ್ಯವಹಾರದ ವಿವರಗಳನ್ನು ತಿಳಿದುಕೊಳ್ಳಬೇಕು ಎಂದರು.

Advertisement

ಸ್ವ-ಸಹಾಯ ಗುಂಪುಗಳ ರಚನೆ ಮತ್ತು ಬ್ಯಾಂಕ್‌ ಜೋಡಣೆ ಕಾರ್ಯಕ್ರಮ ದೇಶದಲ್ಲೇ ಮಾದರಿಯಾಗಿದ್ದು, ಈಗ ಗುಂಪುಗಳ ಡಿಜಟಲೀಕರಣದಲ್ಲೂ ಮಾದರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬ್ಯಾಂಕಿನ ಸಿಇಒ ಮಹಾಜನ ಮಲ್ಲಿಕಾರ್ಜುನ ಮಾತನಾಡಿ,
ಸ್ವ-ಸಹಾಯ ಗುಂಪುಗಳ ಅಗತ್ಯಕ್ಕೆ ತಕ್ಕುದಾಗಿ ಡಿಸಿಸಿ ಬ್ಯಾಂಕ್‌ ಸಾಲ ನೀಡುತ್ತಿದ್ದು ಬಡ್ಡಿ ದರವೂ ಕಮ್ಮಿಯಿಂದ ಬಡ ಸದಸ್ಯರು ಅನಗತ್ಯವಾಗಿ ಹೆಚ್ಚು ಬಡ್ಡಿದರದ ಸಾಲಗಳನ್ನು ಖಾಸಗಿ ಸಂಸ್ಥೆಗಳಿಂದ ಪಡೆದುಕೊಂಡು ತೊಂದರೆಗೆ ಸಿಲುಕಿಕೊಳ್ಳಬಾರದು. ಡಿಸಿಸಿ ಬ್ಯಾಂಕಿನಿಂದ ಸರ್ಕಾರದ ಬಡ್ಡಿ ರಿಯಾಯತಿ ಯೋಜನೆಯ ಶೂನ್ಯ ಬಡ್ಡಿದರದ ಸಾಲ ಪಡೆಯುವಂತೆ ಗುಂಪಿನ ಸದಸ್ಯರಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಚನ್ನಬಸಯ್ನಾ ಸ್ವಾಮಿ ಮತ್ತು ವಿಠಲ ರೆಡ್ಡಿ ಯಡಮಲ್ಲೆ, ಉಪ ಪ್ರಧಾನ ವ್ಯವಸ್ಥಪಕ ಅನಿಲ ಪಾಟೀಲ, ಎನ್‌ಎಸ್‌ಎಸ್‌ಕೆ ನಿರ್ದೇಶಕ ಝರೆಪ್ಪಾ ಮಮದಾಪೂರೆ ವೇದಿಕೆಯಲ್ಲಿದರು. ಅನಿಲಕುಮಾರ ಪರಶೆಣೆ, ತನ್ವಿರ ರಜಾ ಮತ್ತು ನಾಗಶಟ್ಟಿ ಘೋಡಂಪಳ್ಳಿ ಹಾಜರಿದ್ದರು. ಸಹಾರ್ದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ಉಪನ್ಯಾಸಕ ಎಸ್‌.ಜಿ. ಪಾಟೀಲ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next