ಬೀದರ: ಶಾಲಾ ಕೊಠಡಿಯಲ್ಲಿ ದೇಶದ ಭವಿಷ್ಯ ನಿರ್ಮಾಣವಾಗುವುದು. ಯಾವ ದೇಶದಲ್ಲಿ ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆಯಾಗುತ್ತದೆಯೋ ಆ ದೇಶವು ಆರ್ಥಿಕ, ಸಾಮಾಜಿಕ, ನೈತಿಕ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತಗೊಳ್ಳುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಶಶೀಲ್ ನಮೋಶಿ ತಿಳಿಸಿದರು.
ಔರಾದ ತಾಲೂಕಿನ ಧರಿ ಹನುಮಾನ ಹತ್ತಿರದ ಜ್ಞಾನ ಭಾರತಿ ಗುರುಕುಲ ಆವರಣದಲ್ಲಿ ನೈಟಿಂಗೇಲ್ ಪಬ್ಲಿಕ್ ಶಾಲೆಗಳ ಶಿಕ್ಷಕರಿಗಾಗಿ ಹಮ್ಮಿಕೊಂಡಿರುವ ಶಿಕ್ಷಕರ ಕಲಿಕಾ ಪ್ರೇರಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಜ್ಞಾನ ಕಾರಂಜಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಸವರಾಜ ಭರಶೆಟ್ಟಿ ಮಾತನಾಡಿ, ಜಿಲ್ಲೆಯ ಗ್ರಾಮೀಣ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಉದ್ದೇಶದಿಂದಾಗಿ ನಮ್ಮ ಸಂಸ್ಥೆಯ ನೈಟಿಂಗೇಲ್ ಪಬ್ಲಿಕ್ ಶಾಲೆ ನಡೆಸಲಾಗುತ್ತಿದೆ. ನಮ್ಮ ಸಂಸ್ಥೆ ಶಿಕ್ಷಕರು ಕಳೆದ 17 ವರ್ಷದಿಂದ ಗ್ರಾಮೀಣ ಕ್ಷೇತ್ರದಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವುದು ಸಂತಸ ತಂದಿದೆ. ಪತ್ರಿ ವರ್ಷ ಶಿಕ್ಷಕರನ್ನು ಪುನಃಶ್ಚೇತನಗೊಳಿಸಲು ನುರಿತ ಅನುಭವಿ ಸಂಪನ್ಮೂಲ ಶಿಕ್ಷಕರಿಂದ ತರಬೇತಿ ನೀಡಲಾಗುತ್ತಿದೆ. ತರಬೇತಿ ಪ್ರತಿಯೊಬ್ಬರ ಜೀವನದಲ್ಲಿ ಹೊಸ ಹುಮ್ಮಸ್ಸು ತರತ್ತದೆ ಎಂದರು.
ಸೈನಿಕ ಶಾಲೆಯ ಮಾಜಿ ಅಧ್ಯಕ್ಷ ಬಾಪುರಾವ್ ಪಾಟೀಲ ಮಾತನಾಡಿ, ಜೀವನದಲ್ಲಿ ಆಸ್ತಿ, ಅಂತಸ್ತು, ಐಶ್ವರ್ಯವೆಲ್ಲ ಶಿಕ್ಷಣದಿಂದ ಮಾತ್ರ ಸಾಧ್ಯ. ಶಿಕ್ಷಣದಿಂದ ಸಾಮಾನ್ಯ ವ್ಯಕ್ತಿಯೂ ಅಸಮಾನ್ಯವಾದ ಸಾಧನೇ ಮಾಡಲು ಸಾಧ್ಯವಿದೆ. ಶಿಕ್ಷಕರು ತಮ್ಮ ಶಾಲೆಗೆ ಬರುವ ಮಕ್ಕಳ ಪಾಲಿಗೆ ಹೊಸ ಬದುಕು ನೀಡುವ ಶಕ್ತಿ ಸಾಮರ್ಥ್ಯ ಹೊಂದಿದ್ದಾರೆ. ಯಾವುದೇ ಒಬ್ಬ ವ್ಯಕ್ತಿ ಜೀವನದ ಸಾಧನೆಗೆ ಸ್ಫೂರ್ತಿ, ಪ್ರೇರಣೆ ಶಿಕ್ಷಕರಿಂದಲೇ ಪ್ರಾರಂಭವಾಗುತ್ತದೆ. ಮಕ್ಕಳ ಮನಸ್ಸಲ್ಲಿ ಕನಸು ಬಿತ್ತುವ ಕನಸುಗಾರರೇ ಶಿಕ್ಷಕರು. ಎಂತಹದೇ ಸಮಯ ಸಂದರ್ಭದಲ್ಲಿಯೂ ಶಿಕ್ಷಕರು ನಿರುತ್ಸಾಹಿಗಳಾಗದೇ ಸದಾ ಉತ್ಸಾಹದ ಚಿಲುಮೆಯಾಗಿ ಮಕ್ಕಳಿಗೆ ಆದರ್ಶವಾಗಿರಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನಿವೃತ್ತ ಮುಖ್ಯಗುರು ಶಾಲಿವಾನ ಗಂದಗೆ, ಸರ್ಕಾರಿ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಉಪಾಧ್ಯಕ್ಷ ದೀಲಿಪರಾವ್ ಬಿರಾದರ, ಸಂಪನ್ಮೂಲ ಶಿಕ್ಷಕರಾದ ಗುರುನಾಥ ದೇಶಮುಖ, ಶಿವಲಿಂಗ ಹೆಡೆ, ಸಂಜುಕುಮಾರ ಮಾನೂರೆ ಮಲ್ಲಿಕಾರ್ಜುನ ಟಂಕಸಾಲೆ ಇದ್ದರು. ಶಿಕ್ಷಕರಾದ ಅಲ್ಕಾವತಿ ಸ್ವಾಗತಿಸಿದರು. ದೇವಿಂದ್ರಪ್ಪ ನಿರೂಪಿಸಿದರು, ರವೀಂದ್ರ ಚವ್ಹಾಣ ವಂದಿಸಿದರು.