ಬೀದರ: ವಿದ್ಯುತ್ಛಕ್ತಿ ಒದಗಿಸುವಲ್ಲಿ ಬೇಡಿಕೆ ಹಾಗೂ ಪೂರೈಕೆ ನಡುವಿನ ಅಂತರ ಕಡಿಮೆ ಮಾಡಲು ಸೌರಶಕ್ತಿ ಒಂದು ಸಾಧನ. ಸೌರಶಕ್ತಿಯು ಮುಂದಿನ ಭವಿಷ್ಯವಾಗಲಿದೆ ಎಂದು ಕೇಂದ್ರೀಯ ವಿವಿ ಉಪ ಕುಲಪತಿ ಪ್ರೊ| ಜಿ.ಆರ್. ನಾಯಕ್ ಹೇಳಿದರು.
ನಗರದ ಕರ್ನಾಟಕ ಪದವಿ ಕಾಲೇಜಿನಲ್ಲಿ ಯುಜಿಸಿ ಮಾನ್ಯತೆ ಪಡೆದ ಎರಡು ವೃತ್ತಿಪರ ಪದವಿ ಕೋರ್ಸ್‌ಗಳಾದ ಆಹಾರ ಸಂರಕ್ಷಣಾ ತಂತ್ರಜ್ಞಾನ ಹಾಗೂ ನವೀಕರಿಸುವ ಇಂಧನ ಪ್ರಯೋಗಾಲಯದ ಹಾಗೂ ಸೌರಶಕ್ತಿ ಘಟಕದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿ, ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಆಹಾರ ಸಂಸ್ಕರಣೆ ಅದರ ಉಪ ಉತ್ಪನ್ನ ಸಿದ್ಧಪಡಿಸುವ ಉದ್ದಿಮೆ ಆರಂಭಿಸಿದರೆ ಅದರಿಂದ ಸ್ಥಳೀಯ ನಿರುದ್ಯೋಗ ಸಮಸ್ಯೆಗೂ ಪರಿಹಾರ ಲಭಿಸಲಿದೆ ಎಂದರು.
ಕರ್ನಾಟಕ ಕಾಲೇಜು ಸಂಶೋಧನೆಗೆ ಹಾಗೂ ಹೊಸತನಕ್ಕೆ ಕಲ್ಯಾಣ ಕರ್ನಾಟಕದಲ್ಲಿ ಪ್ರಥಮ ಕಾಲೇಜಾಗಿದ್ದು, ಸಮಾಜದ ಹಿತದೃಷ್ಟಿಯಿಂದ ಹಾಗೂ ವಿದ್ಯಾರ್ಥಿಗಳ ಏಳ್ಗೆಗೆ ಹೊಸ ಕೋರ್ಸುಗಳನ್ನು ಪ್ರಾರಂಭಿಸಿ ಈ ಭಾಗದ ಜನರಿಗೆ ಉಪಯೋಗವಾಗುವ ರೀತಿಯಲ್ಲಿ ಶ್ರಮಿಸುತ್ತಿದೆ ಎಂದರು.
ವಿದ್ಯಾರ್ಥಿಗಳು ಇಂದಿನ ದಿನಮಾನಗಳಿಗೆ ತಕ್ಕಂತೆ ಕೌಶಲ್ಯ ಆಧಾರಿತ ಕೋರ್ಸುಗಳಿಗೆ ಮಾನ್ಯತೆ ನೀಡಿ ಜ್ಞಾನ ಪಡೆದು ಸ್ವಯಂ ಉದ್ಯೋಗಸ್ಥರಾಗಿ ಹಾಗೂ ಹಲವರಿಗೆ ಉದ್ಯೋಗ ನೀಡುವ ಕೈಗಾರಿಕೆ ಕಾರ್ಖಾನೆ ತೆಗೆಯಬಹುದು. ಅಮೆರಿಕ, ಜರ್ಮನಿ, ಫ್ರಾನ್ಸ್, ಚೈನಾ ರಾಷ್ಟ್ರಗಳಲ್ಲಿ ಕೌಶಲ್ಯ ಆಧಾರಿತ ಕೋರ್ಸುಗಳಿಗೆ ಶೇ.40ರಷ್ಟು ವಿದ್ಯಾರ್ಥಿಗಳು ಸೇರುತ್ತಾರೆ. ಆದರೆ, ಭಾರತದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಸೇರುತ್ತಿದ್ದಾರೆ. ಆಹಾರ ಸಂರಕ್ಷಣಾ ತಂತ್ರಜ್ಞಾನ ಹಾಗೂ ನವೀಕರಿಸುವ ಇಂಧನ ಪದವಿ ಮುಗಿದ ನಂತರ ಉದ್ಯೋಗಕ್ಕಾಗಿ ತನ್ನನ್ನು ತಾನು ಗುರುತಿಸುವುದಕ್ಕಾಗಿ ಬಹಳಷ್ಟು ಅವಕಾಶಗಳಿವೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಇಂತಹ ಕೋರ್ಸುಗಳಿಗೆ ಹೆಚ್ಚಿನ ಮಾನ್ಯತೆ ನೀಡಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸಬೇಕೆಂದು ಹೇಳಿದರು.
ಗುಲ್ಬರ್ಗಾ ವಿವಿ ಪ್ರಭಾರಿ ಉಪ ಕುಲಪತಿ ಪ್ರೊ| ದೇವಿದಾಸ ಮಾಲೆ ಮಾತನಾಡಿ, ಕೇಂದ್ರ-ರಾಜ್ಯ ಸರ್ಕಾರಗಳು ಯುಜಿಸಿ ಮಾನ್ಯತೆ ಪಡೆದ ಪದವಿ ಕೋರ್ಸುಗಳನ್ನು ಪ್ರಾರಂಭಿಸುವ ಉದ್ದೇಶ ವಿದ್ಯಾರ್ಥಿಗಳಲ್ಲಿ ಹೊಸತನ ಆಲೋಚಿಸುವ ಮತ್ತು ಕ್ರಿಯಾತ್ಮಕವಾಗಿ ಸಂಶೋಧನೆ ಮಾಡುವ ಹಾಗೂ ಸ್ವಯಂ ಉದ್ಯೋಗಿಗಳಾಗಿ ಜೀವನ ನಡೆಸಲು ಅವಶ್ಯಕವಾಗಿದೆ. ಸ್ವಯಂ ಕೈಗಾರಿಕೆ ಕಾರ್ಖಾನೆ ಸ್ಥಾಪಿಸಬೇಕೆಂದು ಸಲಹೆ ನೀಡಿದರು.
ಕರಾಶಿ ಸಂಸ್ಥೆ ಅಧ್ಯಕ್ಷ ಡಾ| ಬಸವರಾಜ ಪಾಟೀಲ ಅಷ್ಟೂರ ಮಾತನಾಡಿ, ಕ-ಕ ಭಾಗದಲ್ಲೇ ಆಹಾರ ಸಂರಕ್ಷಣಾ ತಂತ್ರಜ್ಞಾನ ಹಾಗೂ ನವೀಕರಿಸುವ ಇಂಧನ ಪ್ರಯೋಗಾಲಯ ಪ್ರಾರಂಭಿಸಿರುವ ಮೊದಲ ಕಾಲೇಜು. ಇಂತಹ ಕೋರ್ಸುಗಳನ್ನು ಅಭ್ಯಾಸಿಸಲು ಮುಂಬಯಿ, ಪುಣೆಯಲ್ಲಿ ಹೋಗಿ ಅಭ್ಯಸಿಸಿ ಪೋಷಕರಿಗೆ ಆರ್ಥಿಕ ತೊಂದರೆ ಯಾಗುತ್ತಿತ್ತು. ಈ ಭಾಗದ ವಿದ್ಯಾರ್ಥಿಗಳಲ್ಲಿ ಕೌಶ್ಯಲ-ಜ್ಞಾನದ ಕೊರತೆಯಿಲ್ಲ. ಅವಕಾಶ ಮಾತ್ರ ಬೇಕು. ಇಂಜಿನಿಯರಿಂಗ್, ವೈದ್ಯಕೀಯ ಕೋರ್ಸುಗಳಿಗೆ ಅಷ್ಟೇ ಸಮವಾದ ಈ ಕೋರ್ಸ್‌ನ ಲಾಭ ಪಡೆದುಕೊಳ್ಳಬೇಕು ಎಂದರು.
ವಿವಿಯ ಪ್ರೊ| ವಿಜಯಕುಮಾರ ಕೆ. ಮಾತನಾಡಿದರು. ರಾಜಮೋಹನ ಪರದೇಶಿ, ಪ್ರೊ| ಕೆ.ಸಿ. ಮೊಹಿತಿ, ಡಾ| ಶಶಿಕಾಂತ ಗುಂಜಲ್, ಚಂದ್ರಶೇಖರ ನಿಟ್ಟೂರೆ, ಡಾ| ಬಸವರಾಜ ಯಾಡವಾಡ, ಡಿ.ಬಿ. ಕಂಬಾರ, ಸಂಗಮೇಶ ಪೂಜಾರಿ, ಗಂಗಾಧರ ನಾಯಕ, ಸಿದ್ರಾಮ ಪಾರಾ, ಡಾ| ಚನ್ನಬಸಪ್ಪ ಹಾಲಹಳ್ಳಿ, ಡಾ| ಮಲ್ಲಿಕಾರ್ಜುನ ಹಂಗರಗಿ, ಅಭಯಕುಮಾರ ಪಾಟೀಲ ಇದ್ದರು.
ಕಾಲೇಜು ಪ್ರಾಚಾರ್ಯ ಡಾ| ಕಲ್ಪನಾ ವಿ.ದೇಶಪಾಂಡೆ ಸ್ವಾಗತಿಸಿದರು. ಪ್ರೊ| ಶಾಮಕಾಂತ ಕುಲಕರ್ಣಿ ನಿರೂಪಿಸಿದರು. ಪ್ರೊ| ಡಿ.ಜಿ. ಜೋಶಿ ವಂದಿಸಿದರು.