ಬೀದರ: ಗ್ರಾಮೀಣ ಭಾಗದಲ್ಲಿ ಮಾತ್ರ ಸಾಹಿತ್ಯ, ಸಂಸ್ಕೃತಿ ಜಾನಪದ ಕಲೆ ಜೀವಂತವಾಗಿ ಉಳಿದಿದೆ. ಕಲೆ ಉಳಿಸಿ-ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಸದಸ್ಯ ವಿಜಯಕುಮಾರ ಸೋನಾರೆ ಹೇಳಿದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ರಂಗತರಂಗ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಆಶ್ರಯದಲ್ಲಿ ತಾಲೂಕಿನ ಅಲಿಯಂಬರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ವರಕವಿ ದ.ರಾ. ಬೇಂದ್ರೆ ಕುರಿತು ವಿಚಾರ ಸಂಕಿರಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯುವ ಜತೆಗೆ ಕಲೆ, ಸಂಸ್ಕೃತಿ ಮೈಗೂಡಿಸಿಕೊಂಡಲ್ಲಿ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ಹೇಳಿದರು.
ಟ್ರಸ್ಟ್ ಅಧ್ಯಕ್ಷ ಎಂ.ಪಿ. ಮುದಾಳೆ ಅಧ್ಯಕ್ಷತೆ ವಹಿಸಿದ್ದರು. ಚಂದ್ರಕಾಂತ ಹಳ್ಳಿಖೇಡಕರ್ ಅವರು ದ.ರಾ. ಬೇಂದ್ರೆ ಅವರ ಬದುಕು-ಬರಹದ ಮೇಲೆ ಬೆಳಕು ಚೆಲ್ಲಿದರು. ಈ ವೇಳೆ ಬಿಜೆಪಿ ಮುಖಂಡ ಲಕ್ಷ್ಮಣರಾವ್ ರಾಠೊಡ, ಪತ್ರಕರ್ತ ಸುನೀಲ ಭಾವಿಕಟ್ಟಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂಗಮೇಶ ಪಾಟೀಲ, ಪಿಕೆಪಿಎಸ್ ನಿರ್ದೇಶಕ ಸಿಧ್ದೋಬಾ ಲೌಟೆ, ತಾಪಂ ಮಾಜಿ ಸದಸ್ಯ ದೀಪಕ ಗಾದಗೆ, ಮುಖ್ಯಗುರುಗಳಾದ ಸಂಗೀತಾ, ಸಮಾಧಾನ, ಎಸ್‌ಡಿಎಂಸಿ ಅಧ್ಯಕ್ಷರಾದ ಬಸವರಾಜ ಭಾವಿದೊಡ್ಡಿ, ಪಂಢರಿ ಲದ್ದೆ, ಯುವ ಮುಖಂಡರಾದ ಅಶ್ವಿನ ಆಣದೂರೆ, ಮಹಾದೇವ ಬಿರಾದಾರ, ಸಂತೋಷ ಪಡಸಾಲೆ, ಸಂಜುಕುಮಾರ ಸಿರ್ಸೆ, ಡಾ| ಜಯಶ್ರೀ ಪ್ರಭ ಇದ್ದರು.
ನಂತರ ನಡೆದ ಸಾಂಸ್ಕೃತಿ ಕಾರ್ಯಕ್ರಮವನ್ನು ಅಲಿಯಂಬರ ಗ್ರಾಪಂ ಅಧ್ಯಕ್ಷೆ ಪುತಳಾಬಾಯಿ ಉದ್ಘಾಟಿಸಿದರು. ಡಾ| ಜಯಶ್ರೀ ಪ್ರಭ ಡಾನ್ಸ್ ಗ್ರುಪ್‌ನಿಂದ ಜಾನಪದ ನೃತ್ಯ, ಮಾತಾ ಮಾಣಿಕೇಶ್ವರಿ ಮಹಿಳಾ ತಂಡದಿಂದ ಕೋಲಾಟ, ಚಿಕಲಿ (ಜೆ) ಗ್ರಾಮದ ರಾಜಮ್ಮ ಹಾಗೂ ತಂಡದಿಂದ ಮಹಿಳಾ ನೃತ್ಯ, ಜಗದೇವಿ ಹಾಗೂ ತಂಡದಿಂದ ಹಲಗೆ ವಾದನ, ಕಾಶಿನಾಥ ಸಿರ್ಸೆ ಹಾಗೂ ತಂಡದಿಂದ ಗೊಂದಳಿ ನೃತ್ಯ, ಗೋವಿಂದರೆಡ್ಡಿ ಹಾಗೂ ತಂಡದಿಂದ ಭಜನೆ, ಔರಾದನ ಕಮಳಮ್ಮ ಹಾಗೂ ತಂಡದಿಂದ ಪೈತ್ರಿ ಕುಣಿತ ಜನಮನ ಸೆಳೆಯಿತು. ಚಿಕ್ಕಪೇಟದ ಗೌತಮಿ ಮಹಿಳಾ ಸಂಘದಿಂದ ಜಾನಪದ ಹಾಡುಗಳು, ಲಾಡಗೇರಿಯ ಲಕ್ಷ್ಮೀ ಹಾಗೂ ತಂಡದಿಂದ ಕುಟ್ಟುವ, ಬೀಸುವ ಪದ, ರಮಾಬಾಯಿ ಮಹಿಳಾ ಸಂಘದಿಂದ ಬುಲಾಯಿ ಪದ, ಚಂದ್ರಪ್ಪ ಹಾಗೂ ತಂಡದಿಂದ ಮೊಹರಂ ಕುಣಿತ, ರಮೇಶಬಾಬು ಅಮಲಾಪುರ ಹಾಗೂ ತಂಡದಿಂದ ಕನ್ನಡ ಗೀತೆಗಳು ಮತ್ತು ಮಲ್ಲಪ್ಪ ಹಾಗೂ
ತಂಡದಿಂದ ಭಾವಗೀತೆ ಹಾಡಿದರು.