ಬೀದರ: ಜಿಲ್ಲಾದ್ಯಂತ ಮಾ. 4ರಿಂದ 23ರ ವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿದ್ದು, ಯಾವುದೇ ರೀತಿಯ ಲೋಪಗಳಿಗೆ ಆಸ್ಪದ ನೀಡದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಧಿಕಾರಿ ಡಾ|ಎಚ್. ಆರ್.ಮಹಾದೇವ್ ಅವರು ಅಧಿಕಾರಿಗಳಿಗೆನಿರ್ದೇಶನ ನೀಡಿದರು.
ನಗರದಲ್ಲಿ ಮಂಗಳವಾರ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲ ಸಿಬ್ಬಂದಿಗೆ ತಪ್ಪದೇ ಗುರುತಿನ ಚೀಟಿಗಳನ್ನು ನೀಡಬೇಕು ಹಾಗೂ ಕರ್ತವ್ಯದಲ್ಲಿರುವವರು ಕಡ್ಡಾಯವಾಗಿ ಐಡಿ ಕಾರ್ಡ್‌ಗಳನ್ನು ಧರಿಸುವಂತೆ ನೋಡಿಕೊಳ್ಳಬೇಕು ಎಂದು ಡಿಡಿಪಿಐಗೆ ಸೂಚಿಸಿದರು.
ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಮುಂಚಿತವಾಗಿ ಬೆಂಚುಗಳ ಜೋಡಣೆ, ಕುಡಿಯುವ ನೀರಿನ ವ್ಯವಸ್ಥೆ, ಸಿಸಿ ಟಿವಿ, ಗೋಡೆ ಗಡಿಯಾರಗಳನ್ನು ಅಳವಡಿಸುವುದು ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಂಡಿರಬೇಕು. ಅಭ್ಯರ್ಥಿಗಳಿಗೆ ಇರುವ ಮಾರ್ಗಸೂಚಿಗಳು ಸ್ಪಷ್ಟವಾಗಿ ಕಾಣಿಸುವಂತೆ ಪರೀಕ್ಷಾ ಕೇಂದ್ರದ ಆವರಣದಲ್ಲಿ ಪ್ರದರ್ಶಿಸುವ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ಮೊಬೈಲ್ ಫೋನ್ ನಿಷೇಧ: ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಫೋನ್‌ಗಳನ್ನು ತರುವುದು ಮತ್ತು ಬಳಕೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಕ್ಕೆ ನಿಯೋಜಿಸಿರುವ ವಿಶೇಷ ಜಾಗೃತ ದಳದವರು ಎಲ್ಲ ಅಧಿಕಾರಿಗಳು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಬಳಿ ಮೊಬೈಲ್ ಫೋನ್‌ಗಳನ್ನು ಪರಿಶೀಲಿಸಬೇಕು. ಯಾರಾದರೂ ಮೊಬೈಲ್ ತಂದಲ್ಲಿ ಕೂಡಲೇ ವಶಪಡಿಸಿಕೊಂಡು ಮುಖ್ಯ ಅಧೀಕ್ಷಕರ ವಶಕ್ಕೆ ನೀಡಬೇಕು. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ತುರ್ತು ಅಗತ್ಯ ಸಂದರ್ಭದಲ್ಲಿ ಮಾತ್ರ ಕ್ಯಾಮರಾ ಇಲ್ಲದ ಬೇಸಿಕ್ ಸೆಟ್ ಮೊಬೈಲ್ ಫೋನ್ ಬಳಸಲು ಅವಕಾಶವಿದೆ ಎಂದರು.
ಮುನ್ನೆಚ್ಚರಿಕೆ ವಹಿಸಿ: ಪರೀಕ್ಷೆಯ ಆತುರದಲ್ಲಿ ಕೆಲವು ವಿದ್ಯಾರ್ಥಿಗಳು ಸರಿಯಾಗಿ ಆಹಾರ ಸೇವಿಸದೇ ಇರುವುದರಿಂದ ಪ್ರಜ್ಞೆ ತಪ್ಪಿ ಬೀಳುವ ಸಾಧ್ಯತೆಗಳು ಇರುತ್ತವೆ. ಹಾಗಾಗಿ ಪರೀಕ್ಷಾ
ಕೇಂದ್ರದ ಮೇಲ್ವಿಚಾರಕರು ಹತ್ತಿರದ ಸರ್ಕಾರಿ ಆಸ್ಪತ್ರೆಯ ವೈದ್ಯರು, ಆ್ಯಂಬುಲೆನ್ಸ್ ಸಂಖ್ಯೆಗಳನ್ನು ಇಟ್ಟುಕೊಂಡಿರಬೇಕು ಎಂದು ಸಲಹೆ ನೀಡಿದರು. ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುವ ಅಭ್ಯರ್ಥಿ, ನಿಯೋಜಿತ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಹೊರತುಪಡಿಸಿ ಯಾರೊಬ್ಬರೂ ಇರುವಂತಿಲ್ಲ. ಕೆಲವೆಡೆ ಪರೀಕ್ಷಾರ್ಥಿಗಳ ಪೋಷಕರು ಪರೀಕ್ಷಾ ಕೋಣೆಗೆ ಪ್ರವೇಶಿಸಲು ಪ್ರಯತ್ನಿಸುತ್ತಾರೆ. ಇಂತಹ ಘಟನೆಗಳಿಗೆ ಆಸ್ಪದ ನೀಡದೇ ಪರೀಕ್ಷೆಗಳು ಶಾಂತಿಯುತವಾಗಿ ನಡೆಯಲು ಅವಕಾಶ ಮಾಡಿಕೊಡಬೇಕು ಎಂದು ಕೋರಿದರು.
ಸಭೆಯಲ್ಲಿ ಜಿಪಂ ಸಿಇಒ ಜ್ಞಾನೇಂದ್ರಕುಮಾರ ಗಂಗವಾರ್, ಎಸ್‌ಪಿ ನಾಗೇಶ ಡಿ.ಎಲ್., ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಸಹಾಯಕ ಆಯುಕ್ತ ಅಕ್ಷಯ್ ಶ್ರೀಧರ್, ತಹಶೀಲ್ದಾರರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು.