ಬೀದರ: ಸಂತ ಸೇವಾಲಾಲ್ ಅವರು ಮಹಾನ್ ಪವಾಡ ಪುರುಷರಾಗಿದ್ದರು. ಅವರು ತೋರಿದ ಮಾರ್ಗ ಎಲ್ಲರೂ ಅನುಸರಿಸಬೇಕು ಎಂದು ಜಿಪಂ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಶನಿವಾರ ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ನಡೆದ ಸಂತ ಸೇವಾಲಾಲ್ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಬಾಲ್ಯದಲ್ಲಿ ಜಾನುವಾರು ಮೇಯಿಸುತ್ತಿದ್ದ ಸೇವಾಲಾಲರು ತನಗಾಗಿ ತಂದಿದ್ದ ಆಹಾರವನ್ನು ಇತರರಿಗೆ ಹಂಚುತ್ತಿದ್ದ ಪರೋಪಕ ಕಾರಿಯಾಗಿದ್ದರು. ಬಾಲ್ಯದಿಂದಲೇ ಸಾಕಷ್ಟ ವಿಸ್ಮಯ ಮಾಡಿ ಪವಾಡ ಪುರುಷರೆನಿಸಿದ್ದರು ಎಂದರು.
ಬಂಜಾರಾ ಸಮಾಜ ಇನ್ನಷ್ಟು ಪ್ರಗತಿ ಸಾಧಿಸಬೇಕಿದೆ. ಈ ದಿಸೆಯಲ್ಲಿ ಎಷ್ಟೇ ಕಷ್ಟ ಬಂದರೂ ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗಿಸದೇ ಸರ್ಕಾರದ ವಿವಿಧ ಸೌಲಭ್ಯ-ಸವಲತ್ತು ಪಡೆದು ಉನ್ನತ ಸ್ಥಾನಕ್ಕೇರಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಮಾತನಾಡಿ, ಸಂತ ಸೇವಾಲಾಲ್ ಜಯಂತಿ ಕೇವಲ ನೆಪಕ್ಕೆ ಮಾತ್ರ ಆಚರಿಸದೇ ಅವರ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಶಾಸಕ ರಹೀಮ್ ಖಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂತ ಸೇವಾಲಾಲ್ ಮಹಾರಾಜರು ಸಣ್ಣ ಸಮುದಾಯದಲ್ಲಿ ಜನಿಸಿ, ಸಮಾಜಕ್ಕೆ ಉನ್ನತ ಸಂದೇಶ ನೀಡಿದವರು. ಅಂತಹ ಮಹನೀಯರನ್ನು ಕೇವಲ ಒಂದು ಸಮಾಜಕ್ಕೆ ಮಾತ್ರ
ಸೀಮಿತವಾಗಿಸಬಾರದು ಎಂದರು.
ಉಪನ್ಯಾಸಕ ಸುಭಾಷ ರಾಠೊಡ್ ಉಪನ್ಯಾಸ ನೀಡಿ, ಸಂತ ಸೇವಾಲಾಲ್ ಅವರ ಜೀವನ ಮತ್ತು ತತ್ವಗಳ ಮೇಲೆ ಬೆಳಕು ಚೆಲ್ಲಿದರು. ತಾಪಂ ಅಧ್ಯಕ್ಷ ವಿಜಯಕುಮಾರ ಬರೂರ್, ಜಿಪಂ ಸದಸ್ಯ ತಾರಾಬಾಯಿ ರಾಠೊಡ್, ತಾಪಂ ಸದಸ್ಯ ಪ್ರಕಾಶ ಜಾಧವ್, ಅಪರ ಜಿಲ್ಲಾ ಧಿಕಾರಿ ರುದ್ರೇಶ ಗಾಳಿ, ಮುಖಂಡರಾದ ಬಸವರಾಜ ಪವಾರ, ಗೋವರ್ಧನ್ ರಾಠೊಡ್, ಪಂಡಿತರಾವ್ ಚಿದ್ರಿ, ಅಮೃತರಾವ್ ಚಿಮಕೋಡೆ, ಮಾಣಿಕರಾವ್ ಪವಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಸ್ವಾಗತಿಸಿದರು. ಪ್ರಾಂಶುಪಾಲ ಚನ್ನಬಸವ ಹೇಡೆ ನಿರೂಪಿಸಿದರು.