Advertisement

ಸುಸ್ಥಿರ ಆಡಳಿತಕ್ಕೆ ಶರಣರ ತತ್ವ ಪಾಲಿಸಿ

01:27 PM Feb 02, 2020 | Naveen |

ಬೀದರ: ಆಡಳಿತ ವ್ಯವಸ್ಥೆ ಸರಿ ದಾರಿಯಲ್ಲಿರಲು ಮಹನೀಯರ ಜಯಂತಿಗಳನ್ನು ಆಚರಿಸುವುದು ಅಷ್ಟೇ ಅಲ್ಲ. ಅವರ ತತ್ವಾದರ್ಶಗಳನ್ನು ಪಾಲಿಸಬೇಕಿದೆ ಎಂದು ಬಸವಕಲ್ಯಾಣ ಬಸವ ಮಹಾಮನೆ ಸಂಸ್ಥಾನದ ಶ್ರೀ ಸಿದ್ಧರಾಮ ಬೆಲ್ದಾಳ ಶರಣರು ಹೇಳಿದರು.

Advertisement

ನಗರದ ಡಾ| ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿ ಶರಣರು ದೇಶದ ನಾನಾ ಪ್ರದೇಶಗಳು, ಭಾಷೆ, ಜನಾಂಗ ಹೀಗೆ ಸಾಮಾನ್ಯ ಪ್ರಜೆಯಿಂದ ಆಳ್ವಿಕೆ ನಡೆಸುವ ಅರಸನ ವರೆಗೆ ಎಲ್ಲರನ್ನು ಒಂದೆಡೆಗೆ ಸೇರಿಸಿ ಸಮಾನತೆಯಿಂದ ಜೀವಿಸುವ ಸಂಪ್ರದಾಯವನ್ನು ಹುಟ್ಟು ಹಾಕಿದವರು. ಪ್ರಸ್ತುತ ದಿನಗಳಲ್ಲಿ ಧರ್ಮ, ಜಾತಿ ಮತ್ತು ಭಾಷೆಯ ಹೆಸರಿನಲ್ಲಿ ಸಮಾಜದಲ್ಲಿ ಒಡಕು ಮೂಡುತ್ತಿರುವುದು ಕಾಣುತ್ತಿದೆ. ಇದನ್ನು ಸರಿಪಡಿಸಿ, ಸಮೃದ್ಧ ಮತ್ತು ಸುಭದ್ರ ದೇಶ ಕಟ್ಟಲು ಶರಣರು ತೋರಿಸಿದ ಮಾರ್ಗವನ್ನು ಅನುಸರಿಸಬೇಕಿದೆ ಎಂದು ತಿಳಿಸಿದರು.

ಮಡಿವಾಳ ಮಾಚಿದೇವರದು ಶರಣ ಪರಂಪರೆಯಲ್ಲಿ ವಿಶಿಷ್ಟ ವ್ಯಕ್ತಿತ್ವ. ವಚನ ಸಾಹಿತ್ಯ ರಕ್ಷಣೆಯಲ್ಲಿ ಇವರ ಪಾತ್ರ ಅಮೋಘವಾದದ್ದು. ಇವರು ಸಮತಾವಾದಿಯಾಗಿದ್ದು, ಅನ್ಯಾಯವನ್ನು ಸಹಿಸದೇ ದಿಟ್ಟತನದಿಂದ ಎದುರಿಸುತ್ತಿದ್ದರು. ಅದಕ್ಕಾಗಿಯೇ ಇವರನ್ನು ವೀರ ಗಣಾಚಾರಿ ಎಂದು ಕರೆಯಲಾಗುತ್ತದೆ. “ನನ್ನ ತನು, ಮನ, ಕಾಯ ಶುದ್ಧಿಗೊಳಿಸಿ ಯೋಗ್ಯ ಮಾಡಿದಾತ ಮಡಿವಾಳ’ ಎಂದು ಬಸವಣ್ಣನವರು ಮಡಿವಾಳ ಮಾಚಿದೇವರನ್ನು ಕೊಂಡಾಡಿದ್ದಾರೆ ಎಂದು ಹೇಳಿದರು.

ಶಾಸಕ ರಹೀಮ್‌ ಖಾನ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 12ನೇ ಶತಮಾನದಲ್ಲಿ ಶರಣರು ಎಲ್ಲರಿಗೂ ಮಾನವೀಯತೆಯ ಪಾಠ ಕಲಿಸಿದವರು. ಅವರ ಚಿಂತನೆಗಳನ್ನು ಸಾಕಾರಗೊಳಿಸಲು ಎಲ್ಲರೂ ಪ್ರಯತ್ನಿಸಬೇಕು ಎಂದು ತಿಳಿಸಿದರು. ಸಹಾಯಕ ಆಯುಕ್ತ ಅಕ್ಷಯ್‌ ಶ್ರೀಧರ್‌, ಅಪರ ಜಿಲ್ಲಾ ಧಿಕಾರಿ ರುದ್ರೇಶ್‌ ಗಾಳಿ, ಜಿಪಂ ಉಪ ಕಾರ್ಯದರ್ಶಿ ಸೂರ್ಯಕಾಂತ ಎಸ್‌., ಅಕ್ಕಮಹಾದೇವಿ ಮಹಿಳಾ ಕಾಲೇಜು ಪ್ರಾಚಾರ್ಯ ಶಿವಶರಣಪ್ಪ ಹುಗ್ಗಿ ಪಾಟೀಲ, ಸಮಾಜದ ಮುಖಂಡರಾದ ಬಾಬುರಾವ್‌ ಮಡಿವಾಳ, ದಿಗಂಬರ ಮಡಿವಾಳ, ಧನರಾಜ ಮಡಿವಾಳ, ಸುಭಾಷ ಮಡಿವಾಳ, ಶಿವಕುಮಾರ ಮಡಿವಾಳ ಹಾಗೂ ಇತರರು ಉಪಸ್ಥಿತರಿದ್ದರು.

Advertisement

ಇದೇ ವೇಳೆ “ಮಡಿವಾಳ ಮಾಚಿದೇವರ ಜೀವನ ಚರಿತ್ರೆ’ ಕಿರುಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಹಿರಿಯ ಸಾಹಿತಿ ಎಂ.ಜಿ.ಗಂಗನಪಳ್ಳಿ ಅವರು ಮಡಿವಾಳ ಮಾಚಿದೇವರ ಕುರಿತಾದ ಕವನ ವಾಚಿಸಿದರು. ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಸ್ವಾಗತಿಸಿದರು. ಪ್ರಾಂಶುಪಾಲ ಚನ್ನಬಸವ ಹೇಡೆ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next