ಬೀದರ: ಡಾ| ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ಗುರುವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಗಡಿ ಜಿಲ್ಲೆ ಬೀದರನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ ಬಂದ್ ಕೇವಲ ಪ್ರತಿಭಟನೆಗೆ ಮಾತ್ರ ಸೀಮಿತವಾಯಿತು.
ಬೀದರ ಸೇರಿದಂತೆ ಜಿಲ್ಲೆಯಲ್ಲಿ ಜನ ಜೀವನ ಎಂದಿನಂತಿತ್ತು. ಸಾರಿಗೆ ಬಸ್ ಸಂಚಾರ ಯಥಾವತ್ತಾಗಿತ್ತು. ಶಾಲಾ-ಕಾಲೇಜುಗಳು, ಅಂಗಡಿ ಮುಗ್ಗಟ್ಟು ಸಾಮಾನ್ಯವಾಗಿತ್ತು. ವಿವಿಧ ಕನ್ನಡಪರ ಸಂಘಟನೆಗಳಿದ ಪ್ರತಿಭಟನಾ ರ್ಯಾಲಿ ನಡೆಯಿತು.
ನಗರದ ಡಾ| ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ್ದ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ, ವರದಿ ಜಾರಿಗೆ ತರಬೇಕೆಂದು ಆಗ್ರಹಿಸಿದರು. ನಂತರ ಅಲ್ಲಿಂದ ಜಿಲ್ಲಾ ಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿದರು. ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತದ ಅಧಿಕಾರಿಗೆ ಸಲ್ಲಿಸಿದರು.
ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಗಳಾಗಿದ್ದ ರಚಿಸಿದ್ದ ಡಾ| ಸರೋಜನಿ ಮಹಷಿ ನೇತೃತ್ವದ ಸಮಿತಿ ಪ್ರಮುಖವಾಗಿ 14 ಅಂಶಗಳನ್ನು ಪ್ರಸ್ತಾಪಿಸಿ ಮಣ್ಣಿನ ಮಗ ಎಂಬುವ ಅಂಶ ಪ್ರಸ್ತಾಪಿಸಿ ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ನೀಟಿನಲ್ಲಿ ರಾಜ್ಯ ಸರ್ಕಾರ ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಬೇಕೆಂದು ಒತ್ತಾಯಿಸಿದ್ದರು.
ಕಳೆದ 34 ವರ್ಷ ಕಳೆದರೂ ಸಹ ಸರ್ಕಾರ ಆ ವರದಿ ಜಾರಿಗೊಳಿಸಲು ತಾರತಮ್ಯ ಮಾಡುತ್ತಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ವಿವಿಧ ಸಂಘಟನೆಗಳ ಪ್ರಮುಖರಾದ ಸುಬ್ಬಣ್ಣಾ ಕರಕನಳ್ಳಿ, ಸಾಯಿ ಶೀಮಧೆ, ಅವಿನಾಶ ರಾಯ್, ಪೀಟರ್ ಚಿಟಗುಪ್ಪ, ಶಿವಕುಮಾರ ನೀಲಿಕಟ್ಟಿ, ಪ್ರೇಮಕುಮಾರ ಕಾಂಬಳೆ, ಸತೀಶ ಕುತ್ತಾಬಾದ್, ಅನೀಲಕುಮಾರ ಗಂಜಕರ್, ರಾಜಕುಮಾರ ಸ್ವಾರಳ್ಳಿಕರ್, ವಿನೋದ ಗುಪ್ತಾ, ರಾಜು ಕೋಳಾರ್, ಪ್ರಭಾಕರ್ ಭೋಸ್ಲೆ, ರಾಹುಲ ನೌಬಾದ್ ಇತರರು ಇದ್ದರು.