Advertisement

ಮಾನವ ಕಳ್ಳ ಸಾಗಣೆ ನಿರ್ಮೂಲನೆಯಾಗಲಿ

01:38 PM Jan 24, 2020 | Naveen |

ಬೀದರ: ಸಮಾಜಕ್ಕೆ ಪಿಡುಗಾಗಿ ಪರಿಣಮಿಸಿರುವ ಮಾನವ ಕಳ್ಳ ಸಾಗಣೆ ಹಾಗೂ ಜೀತ ಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಲು ಸ್ವಯಂ ಸೇವಾ ಸಂಸ್ಥೆಗಳು ಸರ್ಕಾರದ ಜೊತೆ
ಕೈಜೋಡಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮನಗೂಳಿ ಪ್ರೇಮಾವತಿ ಕರೆ ನೀಡಿದರು.

Advertisement

ನಗರದ ಸೆಕ್ರೆಡ್‌ ಹಾರ್ಟ್‌ ಚರ್ಚ್‌ ಶಾಲೆ ಸಭಾಂಗಣದಲ್ಲಿ ಮುಕ್ತಿ ಕರ್ನಾಟಕ,
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಹಾಗೂ
ಜಿಲ್ಲಾ ಸ್ವಯಂ ಸೇವೆಗಳ ಒಕ್ಕೂಟದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾನವ ಕಳ್ಳ ಸಾಗಣೆ ಹಾಗೂ ಜೀತ ಪದ್ಧತಿ ನಿರ್ಮೂಲನೆ ಕುರಿತ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಾನವ ಕಳ್ಳ ಸಾಗಣೆ ಮತ್ತು ಜೀತ ಕಾರ್ಮಿಕ ಪದ್ಧತಿ ಗಂಭೀರ ಸ್ವರೂಪದ ಅಪರಾಧವಾಗಿದ್ದು, ಇದರಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಸಮಾಜಕ್ಕೆ
ದೊಡ್ಡ ಸವಾಲಾಗಿ ಪರಿಣಮಿಸಿರುವ ಈ ಪಿಡುಗನ್ನು ನಿರ್ಮೂಲನೆ ಮಾಡಲು ಸ್ವಯಂ ಸೇವಾ ಸಂಸ್ಥೆಗಳು ಸರ್ಕಾರದ ಜೊತೆ ಸೇರಿ ಶ್ರಮಿಸಬೇಕು. ಇಂಥ ಕೃತ್ಯಗಳಿಗೆ ಪ್ರೋತ್ಸಾವ ನೀಡುವ ತಪ್ಪಿತಸ್ಥರನ್ನು ಪತ್ತೆ ಮಾಡಿ ಶಿಕ್ಷೆಗೆ ಗುರಿಪಡಿಸಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಸಲಹೆ ನೀಡಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಗೋಪಾಲ ಬೈಕೋಡ ಮಾತನಾಡಿ, ಮಾನವ
ಕಳ್ಳ ಸಾಗಣೆ, ಜೀತ ಕಾರ್ಮಿಕ ಪದ್ಧತಿ ಕಲಂ 370ರ ಪ್ರಕಾರ ಅಪರಾಧವಾಗಿದೆ. ಈ
ಪದ್ಧತಿ ನಿರ್ಮೂಲನೆಗಾಗಿ ಸ್ವಯಂ ಸೇವಾ ಸಂಸ್ಥೆಗಳು ಕೆಲಸ ಮಾಡುತ್ತಿದ್ದರೆ ಪೊಲೀಸ್‌ ಇಲಾಖೆಯು ಎಲ್ಲ ರೀತಿಯಲ್ಲಿ ಸಹಾಯ, ರಕ್ಷಣೆ ನೀಡಲಿದೆ ಎಂದು ಭರವಸೆ ನೀಡಿದರು.

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಕವಿತಾ ಹುಷಾರೆ ಮಾತನಾಡಿ, ಮಾನವ ಕಳ್ಳ ಸಾಗಣೆ
ಮತ್ತು ಜೀತ ಕಾರ್ಮಿಕ ಪದ್ಧತಿ ಗಡಿ ಜಿಲ್ಲೆಗಳಲ್ಲಿ ಇನ್ನೂ ಜೀವಂತವಾಗಿರುವುದು ವಿಷಾದಕರ
ಸಂಗತಿ. ಈ ಪದ್ಧತಿಯಲ್ಲಿ ಹೆಚ್ಚಾಗಿ ಮಕ್ಕಳೂ ಬಲಿಪಶು ಆಗುತ್ತಿರುವುದು ಕಳವಳಕಾರಿ ವಿಷಯ ಎಂದು ಹೇಳಿದರು.

Advertisement

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶ್ರೀಕಾಂತ
ಕುಲಕರ್ಣಿ ಮಾತನಾಡಿ, ಮಾನವ ಕಳ್ಳ ಸಾಗಣೆ ಹಾಗೂ ಜೀತ ಪದ್ಧತಿಯಿಂದ ಬಿಡುಗಡೆ ಪಡೆದ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಇಲಾಖೆಯಿಂದ ದೊರಕುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು. ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಎಸ್‌. ಮಾತನಾಡಿ, ಜೀತ
ಪದ್ಧತಿಯಲ್ಲಿ ಸಿಲುಕಿರುವ ಸಂತ್ರಸ್ಥರನ್ನು ಪತ್ತೆ ಹತ್ತುವಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಇಲಾಖೆಯ ಜೊತೆ ಸಹಕರಿಸಬೇಕು ಎಂದು ವಿನಂತಿಸಿದರು.

ಒಕ್ಕೂಟದ ಅಧ್ಯಕ್ಷ ಪುನೀತ ಸಾಳೆ ಅಧ್ಯಕ್ಷತೆ ವಹಿಸಿದ್ದರು. ಮುಕ್ತಿ ಕರ್ನಾಟಕ ಸದಸ್ಯರಾದ
ರಾಜೇಂದ್ರನ್‌, ಆರ್‌. ಪ್ರಭಾಕರ, ಬ್ರಿಂದಾ ಕ್ಯಾಥ್ಯಾಯಿನಿ ಚಾಮರಾಜ, ಒಕ್ಕೂಟದ ಗೌರವಾಧ್ಯಕ್ಷ ಎಂ.ಡಿ. ಶಫಿಯೋದ್ದಿನ್‌ ವೇದಿಕೆಯಲ್ಲಿದ್ದರು. ಎಂ.ಎಸ್‌. ಶಿರೋಮಣಿ
ಸ್ವಾಗತಿಸಿ ಎಂ.ಡಿ. ಶಫಿಯೋದ್ದಿನ್‌ ವಂದಿಸಿದರು. ಈ ಸಂದರ್ಭದಲ್ಲಿ ಮುಕ್ತಿ ಕರ್ನಾಟಕದ
ಕೈಪಿಡಿ ಬಿಡುಗಡೆ, ಮುಕ್ತಿ ಒಕ್ಕೂಟಕ್ಕೆ ಚಾಲನೆ ನಿಡಲಾಯಿತು. ನಂತರ ಸಂಪನ್ಮೂಲ ವ್ಯಕ್ತಿಗಳಿಂದ ಮಾನವ ಕಳ್ಳ ಸಾಗಣೆ ಹಾಗೂ ಜೀತ ಕಾರ್ಮಿಕ ಪದ್ಧತಿ ವಿಷಯಗಳ
ಬಗ್ಗೆ ಉಪನ್ಯಾಸ, ಗುಂಪು ಚರ್ಚೆಗಳು ನಡೆದವು. ಮುಂದಿನ ದಿನಗಳಲ್ಲಿ ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟವು ಮುಕ್ತಿ ಕರ್ನಾಟಕದೊಂದಿಗೆ ಕೈ ಜೋಡಿಸಿ ಜಿಲ್ಲೆಯಲ್ಲಿ ಮಾನವ ಕಳ್ಳ ಸಾಗಣೆ, ಜೀತ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಕೆಲಸ ಮಾಡುವುದಾಗಿ ತೀರ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next