ಬೀದರ: ಯುವಕರು ಹೊಸ ಉದ್ಯಮ ಆರಂಭಿಸಲು ಒಲವು ತೋರಬೇಕು ಎಂದು ಶಾಸಕ ರಾಜಶೇಖರ ಪಾಟೀಲ ಸಲಹೆ ನೀಡಿದರು. ಹುಮನಾಬಾದ ಕೆಐಎಡಿಬಿ ಕೈಗಾರಿಕಾ ಪ್ರದೇಶದ ಬಸವಪ್ರಸಾದ ಪ್ರೋಟಿನ್ಸ್ ಬೇಳೆ ಕಾರ್ಖಾನೆಯಲ್ಲಿ ಬುಹ್ಲರ್ ಸಾರ್ಟೆಕ್ಸ್ ಯಂತ್ರ ಹಾಗೂ ಬೇಳೆ ಶುದ್ಧೀಕರಣ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಕೈಗಾರಿಕೆಗಳ ಸ್ಥಾಪನೆಯಿಂದ ನಿರುದ್ಯೋಗಿಗಳಿಗೆ ಉದ್ಯೋಗ ದೊರಕುತ್ತದೆ. ಮೂಲ ಸೌಕರ್ಯಗಳ ವೃದ್ಧಿಯಾಗುತ್ತದೆ. ಈ ಭಾಗದ ಆರ್ಥಿಕ ಅಭಿವೃದ್ಧಿ ಕೂಡ ಆಗುತ್ತದೆ ಎಂದು ತಿಳಿಸಿದರು.
ಗ್ರಾಹಕರ ಅಭಿರುಚಿಗೆ ಅನುಗುಣವಾದ ಉತ್ಪನ್ನಗಳನ್ನು ತಯಾರಿಸಿ ಪೂರೈಕೆ ಮಾಡುವ ಉದ್ಯಮಗಳು ಯಶಸ್ವಿಯಾಗುತ್ತವೆ. ಬಸವರಾಜ ಧನ್ನೂರ ಗ್ರಾಹಕರ ವಿಶ್ವಾಸ ಗಳಿಸಿ ಉದ್ಯಮ ಕ್ಷೇತ್ರದಲ್ಲಿ ಯಶಸ್ವಿಯಾಗಿದ್ದಾರೆ. ಉದ್ಯಮದ ಜತೆಗೆ ಸಮಾಜೋಧಾರ್ಮಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದಾರೆ ಎಂದು ಪ್ರಶಂಶಿಸಿದರು.
ಸಂಸದ ಭಗವಂತ ಖೂಬಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಉದ್ಯಮಗಳು ಹೆಚ್ಚು ಹೆಚ್ಚಾಗಿ ಬೆಳೆಯಬೇಕು. ಬೇಳೆ ಕಾರ್ಖಾನೆಗಳು ರೈತರ ಉತ್ಪನ್ನಗಳಿಗೆ ಯೋಗ್ಯ ಬೆಲೆ ಕೊಡುವ ಜತೆಗೆ ಗ್ರಾಹಕರಿಗೆ ಗುಣಮಟ್ಟದ ಬೇಳೆಯನ್ನೂ ಒದಗಿಸುತ್ತಿವೆ ಎಂದು ಹೇಳಿದರು.
ಬಸವಪ್ರಸಾದ ಪ್ರೋಟಿನ್ಸ್ ಮಾಲೀಕ ಬಸವರಾಜ ಧನ್ನೂರ ಮಾತನಾಡಿ, ತಮ್ಮ ಎರಡು ಬೇಳೆ ಕಾರ್ಖಾನೆಗಳಲ್ಲಿ ಈಗಾಗಲೇ ಇಂಗ್ಲೆಡ್ ನಿರ್ಮಿತ ಅತ್ಯಾಧುನಿಕ ಬುಹ್ಲರ್ ಸಾರ್ಟೆಕ್ಸ್ ಯಂತ್ರಗಳು ಇವೆ. ಗ್ರಾಹಕರಿಗೆ ಇನ್ನಷ್ಟು ಉತ್ಕೃಷ್ಟ ಗುಣಮಟ್ಟದ ತೊಗರಿ ಬೇಳೆ ಪೂರೈಸಲು ಬಸವಪ್ರಸಾದ ಪ್ರೋಟಿನ್ಸ್ ಬೇಳೆ ಕಾರ್ಖಾನೆಯಲ್ಲೂ ಈ ಯಂತ್ರವನ್ನು ಅಳವಡಿಸಲಾಗಿದೆ. ತಮ್ಮ ಕಾರ್ಖಾನೆಗಳ ಉತ್ಕೃಷ್ಟ ಗುಣಮಟ್ಟದ ತೊಗರಿ ಬೇಳೆ ಈಗ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಗುಜರಾತ್ ಸೇರಿ ದೇಶದ ಏಳು ರಾಜ್ಯಗಳಿಗೆ ರಫ್ತಾಗುತ್ತಿದೆ ಎಂದು ಹೇಳಿದರು.
ತಮ್ಮ ಮೂರು ಬೇಳೆ ಕಾರ್ಖಾನೆಗಳು ಕಲಬುರ್ಗಿ ವಿಭಾಗದಲ್ಲೇ ಅತಿಹೆಚ್ಚು ತೊಗರಿ ಬೇಳೆ ಉತ್ಪಾದಿಸುವ ಕಾರ್ಖಾನೆಗಳಲ್ಲಿ ಸೇರಿವೆ. ರೈತರು, ಗ್ರಾಹಕರ ಹಿತ ಕಾಪಾಡುವ ಜತೆಗೆ ಈ ಕಾರ್ಖಾನೆಗಳಲ್ಲಿ ನೂರಾರು ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಿದ ತೃಪ್ತಿ ತಮಗಿದೆ ಎಂದು ಹೇಳಿದರು.
ಬಸವ ಕಾಯಕ, ದಾಸೋಹ ಫೌಂಡೇಶನ್ ಪ್ರಕಟಿಸಿದ ಲಿಂ. ಮಾತೆ ಮಹಾದೇವಿ ಅವರ ಸಂಪಾದಿತ “ದೇವೋಪಾಸನೆ’ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷ ಡಾ| ಸೋಮನಾಥ ಯಾಳವಾರ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಕೂಡಲಸಂಗಮ ಬಸವ ಧರ್ಮ ಪೀಠಾಧ್ಯಕ್ಷೆ ಜಗದ್ಗುರು ಡಾ| ಮಾತೆ ಗಂಗಾದೇವಿ, ಸಿದ್ಧಾರೂಢ ಮಠದ ಶಿವಕುಮಾರ ಸ್ವಾಮೀಜಿ, ಭಾಲ್ಕಿಯ ಶ್ರೀ ಗುರುಬಸವ ಪಟ್ಟದ್ದೇವರು, ಬಸವಕಲ್ಯಾಣದ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಂಎಲ್‌ಸಿ ಚಂದ್ರಶೇಖರ ಪಾಟೀಲ ಷಟ್‌ಸ್ಥಲ ಧ್ವಜಾರೋಹಣ ಮಾಡಿದರು.
ರಾಜ್ಯ ರಸ್ತೆ ಸಾರಿಗೆ ನಿಗಮದ ಮಾಜಿ ಉಪಾಧ್ಯಕ್ಷ ಬಸವರಾಜ ಬುಳ್ಳಾ, ಎನ್‌ಎಸ್ ಎಸ್‌ಕೆ ಉಪಾಧ್ಯಕ್ಷ ಕಾಶಪ್ಪ ಧನ್ನೂರ, ತಾಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಕಂಟೆಪ್ಪ ದಾನಪ್ಪ, ಬೀದರ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ್, ಬಸವ ದಳದ ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ದಾಲ್‌ಮಿಲ್ ಅಸೋಸಿಯೇಶನ್ ಅಧ್ಯಕ್ಷ ಅಶೋಕ ರೇಜಂತಲ್ ಇದ್ದರು. ಸುರೇಶ ಸ್ವಾಮಿ ನಿರೂಪಿಸಿದರು. ಸೂ ರ್ತಿ ಧನ್ನೂರ ವಂದಿಸಿದರು.