Advertisement

ಬಸವ ಉತ್ಸವ ಮರೆತ ಸರ್ಕಾರ

07:46 PM Jan 11, 2020 | Naveen |

ಬೀದರ: ಮೈಸೂರು ದಸರಾ, ಹಂಪಿ ಮತ್ತು ಆನೆಗೊಂದಿ ಉತ್ಸವಗಳನ್ನು ಅದ್ಧೂರಿಯಾಗಿ ಆಚರಿಸುತ್ತಿರುವ ರಾಜ್ಯ ಸರ್ಕಾರ ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದಲ್ಲಿ “ಬಸವ ಉತ್ಸವ’ ಆಚರಣೆಯನ್ನು ಮರೆತಿದೆ.

Advertisement

ಬಸವ ಉತ್ಸವಕ್ಕಾಗಿ ಜಿಲ್ಲಾಡಳಿತದಿಂದ ಇದುವರೆಗೆ ಯಾವುದೇ ಸಿದ್ಧತೆ ನಡೆಯದಿರುವುದು ಬಸವಾನುಯಾಯಿಗಳಲ್ಲಿ ಅಸಮಾಧಾನ ಮೂಡಿಸಿದೆ. ಪ್ರಕೃತಿ ವಿಕೋಪ, ಚುನಾವಣೆ ಮತ್ತು ರಾಜಕೀಯ ಬೆಳವಣಿಗೆಗಳಿಂದ ಬಸವ ಉತ್ಸವ ಆಚರಣೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತಲೇ ಬಂದಿದೆ. ಆದರೆ, ಈ ವರ್ಷವೂ ಉತ್ಸವ ನಡೆಯುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮಳೆ-ಬೆಳೆ ಆಗಿದ್ದು, ಯಾವುದೇ ಸಮಸ್ಯೆಗಳು ಅಥವಾ ಚುನಾವಣೆಗಳು ಈಗಿಲ್ಲ. ಆದರೂ ಇದುವರೆಗೆ ಉತ್ಸವ ಆಚರಿಸುವ ಸಂಬಂಧ ಆಡಳಿತದಿಂದ ಯಾವುದೇ ಚಟುವಟಿಕೆಗಳು ಆರಂಭಗೊಳ್ಳದಿರುವುದರಿಂದ ಮತ್ತೂಮ್ಮೆ ಬಸವ ಉತ್ಸವ ನಡೆಯದಿರುವ ಸಾಧ್ಯತೆ ದಟ್ಟವಾಗಿದೆ.

ಸರ್ಕಾರಗಳ ನಿರ್ಲಕ್ಷ್ಯ: ಬಸವಾದಿ ಶರಣರ ವಚನ ಸಾಹಿತ್ಯದ ಮೇಲೆ ಬೆಳಕು ಚೆಲ್ಲುವುದರ ಜತೆಗೆ ನೆಲದ ಸಂಸ್ಕೃತಿ, ಗತ ವೈಭವವನ್ನು ನಾಡಿಗೆ ಪ್ರತಿಬಿಂಬಿಸಲು ಶರಣರ ಪುಣ್ಯಭೂಮಿ ಬಸವಕಲ್ಯಾಣದಲ್ಲಿ 2009ರಿಂದ ಐತಿಹಾಸಿಕ ಬಸವ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ, ವಿವಿಧ ಕಾರಣಗಳಿಂದ ಕೈಬಿಡುತ್ತಲೇ ಬರಲಾಗುತ್ತಿದೆ. 12 ವರ್ಷಗಳಲ್ಲಿ ಐದು ಬಾರಿ ಮಾತ್ರ ಉತ್ಸವ ನಡೆದಿದೆ. ಬಸವ ತತ್ವದ ಮೇಲೆ ಆಡಳಿತ ನಡೆಸುತ್ತೇವೆ ಎನ್ನುವ ಸರ್ಕಾರಗಳು ಮಾತ್ರ ಬಸವಣ್ಣನನ್ನೇ ಮರೆಯುತ್ತಿರುವುದು ಕಲ್ಯಾಣ ನಾಡಿನ ಬಸವ ಭಕ್ತರರಲ್ಲಿ ಆಕ್ರೋಶ ಹೆಚ್ಚಿಸಿದೆ. ಬಸವ ಉತ್ಸವವು ರಾಜ್ಯದ ಇತರ ಉತ್ಸವಗಳಂತೆ ಬರೀ ಜಾತ್ರೆ ಅಥವಾ ಸಂಭ್ರಮಕ್ಕಾಗಿ ಆಚರಣೆಯಲ್ಲ, ಶರಣ ಸಂಸ್ಕೃತಿಯ ಪ್ರತೀಕ. ಬಸವಾದಿ ಶರಣರು ಸಾರಿದ ಸಮಾನತೆ, ಭಾವೈಕ್ಯತೆಯ ತತ್ವ ಪ್ರಚಾರ, ಪ್ರಸಾರದ ಉದ್ದೇಶ ಹೊಂದಿದೆ.

ಪ್ರತಿ ವರ್ಷ ಕಡ್ಡಾಯವಾಗಿ ಉತ್ಸವ ಆಚರಣೆ ಮಾಡಬೇಕಿತ್ತು. ಆದರೂ ಬಸವ ಉತ್ಸವವನ್ನು ಒಮ್ಮೆ ಭೀಕರ ಬರ, ಮತ್ತೂಂದು ವರ್ಷ ಅತಿವೃಷ್ಟಿಯಿಂದ ರದ್ದುಗೊಳಿಸಿದರೆ, ಮತ್ತೂಮ್ಮೆ ಚುನಾವಣೆ, ರಾಜಕೀಯ ನಾಯಕರ ಡೊಂಬರಾಟಕ್ಕೆ ಬಲಿಯಾಗುತ್ತ ಬಂದಿದೆ.

ಮೈಸೂರು ದಸರಾ, ಹಂಪಿ, ಆನೆಗೊಂದಿ, ಕಿತ್ತೂರು ಹಾಗೂ ಕರಾವಳಿ ಉತ್ಸವದಂತೆ ಬಸವ ಉತ್ಸವವು ಅಷ್ಟೇ ಪ್ರಾಮುಖ್ಯತೆ ಪಡೆದಿದೆ. ಅತಿವೃಷ್ಟಿ-ಅನಾವೃಷ್ಟಿ ಏನೇ ಇದ್ದರೂ ಈ
ಉತ್ಸವಗಳನ್ನು ಮುಂದುವರಿಸಿಕೊಂಡು ಬರುತ್ತಿರುವ ಸರ್ಕಾರ ಬಸವ ಉತ್ಸವದ ವಿಷಯದಲ್ಲಿ ಮಾತ್ರ ನಿರ್ಲಕ್ಷ್ಯ ತೋರಿಸುತ್ತಿರುವುದು ವಿಪರ್ಯಾಸ.

Advertisement

ಬಸವ ನಿಷ್ಠರ ಕೆಂಗಣ್ಣು: ಈ ಹಿಂದೆ 2014 ಮತ್ತು 2015ರ ಬಳಿಕ 2018ರಲ್ಲಿ ಕೊನೆಯ ಉತ್ಸವ ನಡೆಸಲಾಗಿತ್ತು. ಬಸವ ಉತ್ಸವವನ್ನು ಪ್ರತಿ ವರ್ಷ ಆಚರಿಸಿಕೊಂಡು ಬರಲಾಗುವುದು ಎಂದು ಪ್ರತಿ ಸರ್ಕಾರಗಳು ನೀಡುವ ಭರವಸೆಗಳು ಹುಸಿಯಾಗುತ್ತಿವೆ.
ಬಸವ ಉತ್ಸವಕ್ಕೆ ರಾಜ್ಯ ಸರ್ಕಾರದಿಂದ 30 ಲಕ್ಷ ರೂ. ಪ್ರತಿ ವರ್ಷ ಬಿಡುಗಡೆ ಮಾಡಲಾಗುತ್ತದೆ. ಈ ಹಣವನ್ನು ಮಾರ್ಚ್‌ ಅಂತ್ಯದೊಳಗೆ ಖರ್ಚು ಮಾಡುವುದು ಅನಿವಾರ್ಯ. ಈಗ ಒಂದೂವರೆ ತಿಂಗಳು ಕಾಲಾವಕಾಶ ಉಳಿದಿದ್ದರೂ ಈ ಬಗ್ಗೆ ಆಡಳಿತದಿಂದ ಸಿದ್ಧತೆಯೇ ಆರಂಭಗೊಂಡಿಲ್ಲ. ಜಿಲ್ಲಾಡಳಿತ ಸಿದ್ಧತೆಗಳನ್ನು ನಡೆಸದಿರುವುದರಿಂದ ಈ ವರ್ಷವೂ ಉತ್ಸವ ಆಚರಣೆ ರದ್ದುಗೊಳ್ಳುವುದು ಸ್ಪಷ್ಟವಾಗುತ್ತಿದೆ. ಇದು ನಿಜವೇ ಆದಲ್ಲಿ ಸರ್ಕಾರ ಬಸವ ನಿಷ್ಠರ ಕೆಂಗಣ್ಣಿಗೆ ಗುರಿಯಾಗುವುದಂತೂ ಸತ್ಯ.

ಬಸವ ಉತ್ಸವ ಆಚರಣೆ ಕುರಿತಂತೆ ಇನ್ನೂ ನಿರ್ಣಯ
ಆಗಬೇಕಿದೆ. ಹಾಗಾಗಿ ಈವರೆಗೆ ಯಾವುದೇ ಸಿದ್ಧತೆ ಆರಂಭ ಮಾಡಿಲ್ಲ. ಈ ಹಿಂದಿನಂತೆ ಫೆಬ್ರವರಿ ತಿಂಗಳಲ್ಲಿ ಉತ್ಸವವನ್ನು ಅರ್ಥಪೂರ್ಣ ಮತ್ತು ಅದ್ಧೂರಿಯಾಗಿ ಆಚರಿಸಲಾಗುವುದು. ಈ ಸಂಬಂಧ ಉಸ್ತುವಾರಿ ಸಚಿವರು, ಶಾಸಕರ ಜತೆಗೆ ಚರ್ಚಿಸಿ ದಿನಾಂಕದ ಕುರಿತು ತೀರ್ಮಾನ ಕೈಗೊಳ್ಳಲಾಗುವುದು.
ಡಾ| ಎಚ್‌.ಆರ್‌ ಮಹಾದೇವ
ಜಿಲ್ಲಾಧಿಕಾರಿ

ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next