ಬೀದರ: ರಾಜ್ಯದಲ್ಲಿ ಕ್ರೈಸ್ತ ಬಾಂಧವರು, ಪಾಸ್ಟರ್‌ಗಳ ಮೇಲೆ ಹಲ್ಲೆ ಮತ್ತು ಚರ್ಚ್‌ಗಳ ಮೇಲೆ ದಾಳಿ ಖಂಡಿಸಿ ನಗರದಲ್ಲಿ ಮಂಗಳವಾರ ಧರ್ಮಗುರುಗಳು, ಪಾಸ್ಟರ್‌ಗಳ ನೇತೃತ್ವದಲ್ಲಿ ಕ್ರೈಸ್ತ ಸಮುದಾಯದವರು ಪ್ರತಿಭಟನೆ ನಡೆಸಿದರು.
ಮೆಥೋಡಿಸ್ಟ್ ಚರ್ಚ್‌ನ ಜಿಲ್ಲಾ ಮೇಲ್ವಿಚಾರಕ ಜೈಪಾಲ್, ಮನೋಷಾಂತ್ ಮತ್ತು ಜೇಮ್ಸ್ ಜಯಕುಮಾರ ನೇತೃತ್ವದಲ್ಲಿ ನಗರದ ಅಂಬೇಡ್ಕರ್ ವೃತ್ತದಿಂದ ಪ್ರಮುಖ ರಸ್ತೆಗಳ ಮೂಲಕ ಜಿಲ್ಲಾಧಿಕಾರಿ ಕಚೇರಿ ವರೆಗೆ ರ್ಯಾಲಿ ನಡೆಸಿದರು. ಬಳಿಕ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು. ಕ್ರೈಸ್ತರಿಗೆ ಸೂಕ್ತ ರಕ್ಷಣೆ ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಈ ವೇಳೆ ಆಗ್ರಹಿಸಿದರು.
ಬಗದಲ ಮತ್ತು ಮರ್ಜಾಪೂರ ಗ್ರಾಮಗಳಲ್ಲಿ ಶಿಲುಬೆಯನ್ನು ಕಿತ್ತೆಸೆದು ಕ್ರೈಸ್ತರ ಭಾವನೆಗಳಿಗೆ ಧಕ್ಕೆ ತರುವಂತಹ ಕೃತ್ಯ ಎಸಗಲಾಗಿದ್ದು, ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾದರೂ ಈವರೆಗೆ ಆರೋಪಿಗಳನ್ನು ಬಂಧಿ ಸಿಲ್ಲ. ಗದಗನ ಮನೆಯಲ್ಲಿ ಪ್ರಾರ್ಥನಾ ಕೂಟ ನಡೆಸುತ್ತಿರುವ ವೇಳೆ ಕಿಡಿಗೇಡಿಗಳು ಮನೆಗೆ ನುಗ್ಗಿ ಪಾಸ್ಟರ್, ಭಕ್ತಾದಿಗಳ ಮೇಲೆ ಹಲ್ಲೆ ನಡೆಸಲಾಗಿದೆ. ಬೆಂಗಳೂರಿನ ಕೆಂಗೇರಿ ಸೇಂಟ್ ಫ್ರಾನ್ಸಿಸ್ ಚರ್ಚ್ ಮೇಲೆ ದಾಳಿ ಮಾಡಲಾಗಿದೆ. ರಾಜ್ಯದಲ್ಲಿ ಕ್ರೈಸ್ತರ ಮೇಲೆ ನಿಯಮಿತವಾಗಿ ಹಲ್ಲೆ ನಡೆಯುತ್ತಿದ್ದರು ಸರ್ಕಾರ ಘಟನೆಗಳನ್ನು ತಡೆಯಲು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಪಾಲಬೆಟ್ಟದ ಮೇಲೆ ಯೇಸು ಮೂರ್ತಿ ಸ್ಥಾಪನೆಗಾಗಿ ಸರ್ಕಾರ ಕ್ರಮ ವಹಿಸಬೇಕು. ಬಗದಲ, ಮರ್ಜಾಪೂರದಲ್ಲಿ ಶಿಲುಬೆಗೆ ಹಾನಿ ಮಾಡಿದವರ ವಿರುದ್ಧ ಕ್ರಮ ಜರುಗಿಸಬೇಕು ಮತ್ತು ಶಿಲುಬೆಗಳನ್ನು ಪುನಃ ಸರ್ಕಾರವೇ ಸ್ಥಾಪಿಸಬೇಕು. ನೌಬಾದ್ ಸಾಯಿ ನಗರದಲ್ಲಿ ಚರ್ಚ್ ನಡೆಸಲು ಅಡ್ಡಿಪಡಿಸುತಿರುವ ವ್ಯಕ್ತಿಗಳ ವಿರುದ್ಧ ಕ್ರಮ ಜರುಗಿಸಬೇಕು. ಗುಮ್ಮಾ ಗ್ರಾಮದಲ್ಲಿ ಅತಿಕ್ರಮಣ ಆಗಿರುವ ಕ್ರೈಸ್ತರ ಶಿಲುಬೆ ಜಾಗವನ್ನು ತೆರವುಗೊಳಿಸಬೇಕು. ಕಬೀರವಾಡಾ ಗ್ರಾಮದಲ್ಲಿ ಹಂಚಿಕೆ ಆಗಿರುವ ಸ್ಮಶಾನ ಭೂಮಿಗೆ ತಡೆಯೊಡ್ಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಫಾ| ವಿಲ್ಸನ್, ಫಾ| ವಿಜಯರಾಜ್, ಫಾ| ಕ್ಲೇರಿ, ಫಾ| ಸಾವನ್ ಪೌಲ್, ಫಾ| ಅಬ್ರಾಮ್ ಅಮೃತ, ಫಾ| ಥಾಮ್ಸನ್, ಫಾ| ಸೀಜು, ಫಾ| ನೋವಾ, ಫಾ| ಮನೋಜ್ ಪ್ರಮುಖರಾದ ದಾಸ ಚಿದ್ರಿ, ಅಬ್ರಾಹಂ ಮೇತ್ರೆ, ಸಂಜಯ ಜಾಗೀರದಾರ್ ಮತ್ತು ಸಬಸ್ಟಿನ್ ಚಿದ್ರಿ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.