ಬೀದರ: ಫೆ. 7ರಂದು ವಿಯಾನಯಾನ ಸೇವೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ಸಂಸದ ಭಗವಂತ ಖೂಬಾ, ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್ ಹಾಗೂ ವಿವಿಧ ಅಧಿಕಾರಿಗಳೊಂದಿಗೆ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ, ಟರ್ಮಿನಲ್ ಕಟ್ಟಡ ಕಾಮಗಾರಿ ಪರಿಶೀಲಿಸಿದರು.
ವಿಮಾನ ನಿಲ್ದಾಣದ ಬಳಿ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆಯಾಗಬೇಕು. ರಸ್ತೆಗಳ ಬದಿಯಲ್ಲಿ ಗಿಡಗಳನ್ನು ನೆಡುವ ಮೂಲಕ ಆವರಣ ಸುಂದರವಾಗಿ ಕಾಣುವಂತೆ ಮಾಡಬೇಕು. ವಿಮಾನಯಾನ ಸೇವೆ ಉತ್ತಮವಾಗಿ ಲಭ್ಯವಾಗುವಂತಾಗಲು ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದು ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸರ್ಕಾರದ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್ ಮಾತನಾಡಿ, ವಿಮಾನ ನಿಲ್ದಾಣ ನವೀಕರಣ ಕೆಲಸ ಭರದಿಂದ ನಡೆಯುತ್ತಿದೆ. ಹೈದ್ರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉಸ್ತುವಾರಿ ಹೊಂದಿರುವ ಜಿಎಚ್ ಐಎಎಲ್ ಬೀದರ ನಿಲ್ದಾಣದ ಕಾರ್ಯಾಚರಣೆ ಮಾಡಲಿದೆ. ಸಂಸ್ಥೆಗೆ ಬೀದರ ಟರ್ಮಿನಲ್‌ನಿಂದ ಹೆಚ್ಚಿನ ಲಾಭ ಇಲ್ಲದಿದ್ದರೂ ಕಾರ್ಯಾಚರಣೆಗೆ ಮುಂದಾಗಿರುವುದು ಅಭಿನಂದನಾರ್ಹ.
ನಿಲ್ದಾಣದಲ್ಲಿ ಹೈಸ್ಪೀಡ್ ಇಂಟರ್ ನೆಟ್ ಸಂಪರ್ಕ ಕಲ್ಪಿಸಬೇಕು. ರಕ್ಷಣೆ ವಿಷಯದಲ್ಲಿ ಯಾವುದೇ ರೀತಿಯ ಲೋಪಗಳು ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿ ಗಳಿಗೆ ತಿಳಿಸಿದರು. ಜಿಲ್ಲಾಧಿಕಾರಿ ಡಾ| ಎಚ್.ಆರ್. ಮಹಾದೇವ್ ಅವರು ವಿಮಾನ ನಿಲ್ದಾಣ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಟ್ರೂಜೆಟ್ ಸಿಇಒ ಮೂರ್ತಿ, ಜಿಪಂ ಸಿಇಒ ಜ್ಞಾನೇಂದ್ರಕುಮಾರ ಗಂಗವಾರ್, ಸಹಾಯಕ ಆಯುಕ್ತ ಅಕ್ಷಯ್ ಶ್ರೀಧರ್, ಲೋಕೋಪಯೋಗಿ ಇಲಾಖೆಯ ಇಇ ಪ್ರಶಾಂತ, ಪಿಆರ್, ನಗರಸಭೆ, ಕೆಎಸ್‌ಐಐಡಿಸಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.