Advertisement
ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯನ್ನಾಧರಿಸಿ 2021ನೇ ಮುಂಗಾರು ಹಂಗಾಮಿನ ಸೆಪ್ಟೆಂಬರ್ ಮಾಹೆಯಲ್ಲಿ ಅತಿವೃಷ್ಟಿ ಮತ್ತು ಮಾಂಜ್ರಾ ನದಿ ಹರಿವಿನಿಂದ ಜಿಲ್ಲೆಯ ಔರಾದ, ಬೀದರ ಬಸವಕಲ್ಯಾಣ, ಕಮಲನಗರ ಮತ್ತು ಹುಲಸೂರು ತಾಲೂಕುಗಳನ್ನು ಅತಿವೃಷ್ಟಿ/ಪ್ರವಾಹ ಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದೆ.
Related Articles
Advertisement
ಕೃಷಿ-ಕಂದಾಯ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ಅ. 18ರಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿಗಳಿಗೆ ನಷ್ಟದ ಬಗ್ಗೆ ನೆರವು ಕೋರಿ ಪ್ರಸ್ತಾವನೆ ಸಲ್ಲಿಸಿದ್ದರು. ಜಿಲ್ಲಾದ್ಯಂತ ಈ ಹಿಂದೆ ಸುರಿದ ಮಳೆಗೆ ಸಮೃದ್ಧವಾಗಿ ಬೆಳೆದಿದ್ದ, ಉದ್ದು ಮತ್ತು ಹೆಸರು ಬೆಳೆ ಹಾನಿಗೀಡಾಗಿತ್ತು. ನಂತರ ರಾಜ್ಯದಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿ ಬೆಳೆಯುವ ಸೋಯಾಬಿನ್ ನೀರು ಪಾಲಾಗಿದೆ. ಕಟಾವು ಮಾಡಿ ಕೂಡಿಟ್ಟಿದ್ದ ಬೆಳೆ ಕೊಳೆತು ಹೋಗುತ್ತಿದ್ದರೆ, ಇನ್ನೂ ಕೆಲವೆಡೆ ಭೂಮಿಯಲ್ಲಿನ ತೇವಾಂಶದಿಂದಾಗಿ ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಸಾಲ-ಸೂಲ ಮಾಡಿ ಭೂಮಿಗೆ ಸಾವಿರಾರು ರೂ. ಖರ್ಚು ಮಾಡಿದ ರೈತರು ಕಣ್ಣೀರಲ್ಲಿ ಕೈತಳೆಯುವಂತಾಗಿದೆ.
ಮುಂದಿನ ಬದುಕು ಹೇಗೆ? ಎಂಬ ಚಿಂತೆಯಲ್ಲಿದ್ದರು. ಆದರೆ, ಕೊನೆಗೂ ಸರ್ಕಾರ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಅತಿವೃಷ್ಟಿ/ ಪ್ರವಾಹ ಪೀಡಿತ ತಾಲೂಕುಗಳು ಎಂದು ಘೋಷಿಸಿದೆ. ತ್ವರಿತ ಪರಿಹಾರ ಸಿಗಲಿ ಕಳೆದ ಮುಂಗಾರು ಹಂಗಾಮಿನಲ್ಲೂ ಜಿಲ್ಲೆಯಲ್ಲಿ ರೈತರ ಬದುಕು ದುಸ್ತರಗೊಂಡಿತ್ತು.
ಪ್ರಸಕ್ತ ವರ್ಷದ ಮುಂಗಾರಿನಲ್ಲಿ ಮಾರಣಾಂತಿಕ ಕೋವಿಡ್ ಸಂಕಷ್ಟದ ನಡುವೆಯೂ ಬಿತ್ತನೆ ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದ ಅನ್ನದಾತರಿಗೆ ಮಳೆ ಅಬ್ಬರ ಮತ್ತೆ ಸಂತ್ರಸ್ತರನ್ನಾಗಿಸಿದೆ. ಬೆಳೆ ಹಾನಿ ಸಮೀಕ್ಷೆ ವರದಿ ಸಲ್ಲಿಸಿಕೆ ಬಳಿಕ ಈಗ ಸರ್ಕಾರ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಅತಿವೃಷ್ಟಿ/ ಪ್ರವಾಹ ಪೀಡಿತ ತಾಲೂಕುಗಳೆಂದು ಘೋಷಿಸಿದೆ. ಮಾರ್ಗಸೂಚಿಯಂತೆ ತ್ವರಿತವಾಗಿ ಪರಿಹಾರ ಒದಗಿಸಿ ಕೃಷಿಕರಿಗೆ ನೆರವಾಗಬೇಕಿದೆ.
-ಶಶಿಕಾಂತ ಬಂಬುಳಗೆ