ಬೀದರ: ಜಾಗತಿಕವಾಗಿ ತಲ್ಲಣ ಮೂಡಿಸುತ್ತಿರುವ ಕೋವಿಡ್-19 ವೈರಸ್‌ಗೆ ವರ್ಷಾಂತ್ಯಕ್ಕೆ ದೇಶದ ಪ್ರಥಮ ಲಸಿಕೆ ಲಭ್ಯತೆ ಕುರಿತು ಕೇಂದ್ರ ಸರ್ಕಾರ ಖಚಿತ ಪಡಿಸಿದ್ದು, ಮೊದಲ ಹಂತವಾಗಿ
ಕೋವಿಡ್ ವಾರಿಯರ್ಸ್‌ಗಳಿಗೆ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಅದರಂತೆ ಬೀದರ ಜಿಲ್ಲೆಯಿಂದ ಅಂದಾಜು 6000 ಸರ್ಕಾರಿ ಮತ್ತು ಖಾಸಗಿ ವಲಯದ ಆರೋಗ್ಯ ಸಿಬ್ಬಂದಿಗಳ ಮಾಹಿತಿ ರವಾನಿಸಲಾಗಿದೆ. ದೇಶದಲ್ಲಿ ಕೊಂಚ ತಗ್ಗಿದ್ದ ಹೆಮ್ಮಾರಿ ಕೋವಿಡ್ ಸೋಂಕು ಇದೀಗ ಸರಣಿ ಹಬ್ಬಗಳ ಋತು ಮುಗಿಯುತ್ತಿದ್ದಂತೆ ಎರಡನೇ ಅಲೆ ರೂಪದಲ್ಲಿ ಆರ್ಭಟಿಸುತ್ತಿರುವುದು ಆತಂಕ ಹೆಚ್ಚಿಸಿದೆ. ಈ ನಡುವೆ ವೈರಸ್ ಮುಕ್ತಿಗಾಗಿ ಭಾರತದಲ್ಲೇಲಸಿಕೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಪ್ರಥಮ ವ್ಯಾಕ್ಸಿನ್ 2020ರ ಅಂತ್ಯಕ್ಕೆ ಲಭ್ಯಬಾಗಲಿದೆ ಎಂದು ಇತ್ತೀಚೆಗೆ ಕೇಂದ್ರ ಆರೋಗ್ಯ ಸಚಿವ ಡಾ| ಹರ್ಷವರ್ಧನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಎರಡು ಸ್ವದೇಶಿ ಸೇರಿ ಮೂರು ಕೋವಿಡ್ ಲಸಿಕೆಗಳು ಅಭಿವೃದ್ಧಿಯಾಗುತ್ತಿದ್ದು, ವಿವಿಧ ಹಂತಗಳಲ್ಲಿ ಪ್ರಯೋಗಕ್ಕೆ ಒಳಪಟ್ಟಿವೆ. ಅದರಲ್ಲಿ ಸ್ಥಳೀಯವಾಗಿ ಅಭಿವೃದ್ಧಿ ಪಡಿಸಿರುವ ಎರಡು ಲಸಿಕೆಗಳು ಮೊದಲ ಹಂತದಲ್ಲಿ ಮಾನವನ ಮೇಲೆ ಪ್ರಯೋಗಕ್ಕೆ ಒಳಪಟ್ಟಿದ್ದರೆ, ಎರಡು ಸ್ವದೇಶಿ ಲಸಿಕೆಗಳಲ್ಲಿ ಒಂದನ್ನು ಭಾರತ್ ಬಯೋಟೆಕ್ ಕಂಪನಿಯು ಐಸಿಎಂಆರ್ ಸಹಯೋಗದಲ್ಲಿ ಅಭಿವೃದ್ಧಿ ಪಡಿಸುತ್ತಿದೆ. ಇನ್ನೊಂದನ್ನು ಝೆ„ಡಸ್ ಕ್ಯಾಡಿಲ್ಲಾ ಕಂಪನಿಯೊಂದಿಗೆ ತಯಾರಿಸುತ್ತಿದೆ. ಈ ಎರಡೂ ಲಸಿಕೆಗಳು 2ನೇ ಹಂತದ ಪ್ರಯೋಗ ಪೂರ್ಣಗೊಳಿಸಿವೆ ಎಂದು ಐಸಿಎಂಆರ್ ನಿರ್ದೇಶ ಡಾ| ಬಲರಾಮ್ ಭಾರ್ಗವ್ ಮಾಹಿತಿ ನೀಡಿದ್ದರು.
5994 ಸಿಬ್ಬಂದಿ ದತ್ತಾಂಶ ಸಂಗ್ರಹ: ಆಶಾದಾಯಕ ಬೆಳವಣಿಗೆ ಹಿನ್ನೆಲೆ ಭವಿಷ್ಯದಲ್ಲಿ ಲಭ್ಯವಾಗಲಿರುವ ಕೋವಿಡ್-19 ಲಸಿಕೆಯನ್ನು ಕೇಂದ್ರದ ನಿರ್ದೇಶನದಂತೆ ರಾಜ್ಯ ಸರ್ಕಾರ ಮೊದಲಹಂತವಾಗಿ ನೀಡಬೇಕಾದ ಕೋವಿಡ್ ವಾರಿಯರ್ಸ್‌ಗಳ ಮಾಹಿತಿ ಮತ್ತು ಯೋಜನೆ ರೂಪಿಸುತ್ತಿದೆ. ವೈದ್ಯರು, ದಾದಿಯರು, ಅರೆ ವೈದ್ಯರು, ಸಹಾಯಕ ಸಿಬ್ಬಂದಿ ಮತ್ತುಆರೋಗ್ಯ ಕಾರ್ಯಕರ್ತರು ಲಸಿಕೆಯ ಮೊದಲ ಫಲಾನುಭವಿ ಗಳಾಗಿರಲಿದ್ದಾರೆ. ಬೀದರ ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸಿಬ್ಬಂದಿಗಳ ದತ್ತಾಂಶ ಸಿದ್ಧಪಡಿಸಿ ಸರ್ಕಾರದ “ಕೋವಿನ್’ ವೆಬ್‌ಗ ಅಪ್‌ಲೋಡ್ ಮಾಡುವ ಪ್ರಕ್ರಿಯೆ ಶುರುವಾಗಿದೆ. ಈವರೆಗೆ ಜಿಲ್ಲೆಯಲ್ಲಿ 5994 ಸಿಬ್ಬಂದಿಗಳ ಮಾಹಿತಿ ಪಡೆಯಲಾಗಿದೆ. ಇದರಲ್ಲಿ ಬೀದರ ತಾಲೂಕಿನ 1690, ಹುಮನಾಬಾದ 1383, ಭಾಲ್ಕಿ 1181, ಔರಾದ 888 ಮತ್ತು ಬಸವಕಲ್ಯಾಣ ತಾಲೂಕಿನ 852 ಸಿಬ್ಬಂದಿ ಸೇರಿದ್ದಾರೆ. 900ಕ್ಕೂ ಹೆಚ್ಚು ಬ್ರಿಮ್ಸ್ ಆಸ್ಪತ್ರೆ, ಕಾಲೇಜು, ತರಬೇತಿ ಕೇಂದ್ರ ಮತ್ತು ಸರ್ಕಾರಿ ನರ್ಸಿಂಗ್ ಕಾಲೇಜು ಸಿಬ್ಬಂದಿ ಒಳಗೊಂಡಿದ್ದಾರೆ.
35 ಐಎಲ್‌ಆರ್‌ಗಳ ಬೇಡಿಕೆ: ಜಿಲ್ಲೆಯಲ್ಲಿ ಒಟ್ಟು 606 ವೈದ್ಯರು, 889 ಶುಶ್ರೂಷಾಧಿಕಾರಿಗಳು, 2054 ಗ್ರಾಮಮಟ್ಟದ ಆರೋಗ್ಯ ಕಾರ್ಯಕರ್ತರು (ಎಎನ್‌ಎಂ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು), 468 ಪ್ಯಾರಾ ಮೆಡಿಕಲ್ ಸಿಬ್ಬಂದಿ, 164 ಕಚೇರಿ ಸಿಬ್ಬಂದಿ ಹಾಗೂ 1813 ಇತರೆ ಆರೋಗ್ಯ ನೌಕರರು ಪಟ್ಟಿ ಸಿದ್ಧಪಡಿಸಿ ಆರೋಗ್ಯ ಇಲಾಖೆಗೆ ಕಳುಹಿಸಲಾಗಿದ್ದು, ವೆಬ್‌ಗೂ ವಿವರಗಳನ್ನು ನಮೂದಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಅಷ್ಟೇ ಅಲ್ಲ ಲಭ್ಯವಾಗುವ ಸೂಕ್ಷ್ಮಲಸಿಕೆಗಳನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಸಂಗ್ರಹಿಸಿಡಬೇಕಾದ ಹಿನ್ನೆಲೆಯಲ್ಲಿ ಬೀದರ ಜಿಲ್ಲೆಗೆ ಒಟ್ಟು 35ಐಸ್ ಲ್ಯಾಂಡ್ ರೆಫ್ರಿಜರೇಟರ್ (ಐಎಲ್‌ಆರ್)ಗಳ ಕುರಿತು ಜಿಲ್ಲಾ ಆರೋಗ್ಯ ಇಲಾಖೆ ಕೇಂದ್ರ ಕಚೇರಿಗೆ ಬೇಡಿಕೆ ಸಲ್ಲಿಸಿದೆ.
ಕೇಂದ್ರ ಸರ್ಕಾರದ ನಿರ್ದೇಶನದಂತೆ ಬೀದರ ಜಿಲ್ಲೆಯಲ್ಲಿ ಸರ್ಕಾರಿ ಮತ್ತುಖಾಸಗಿ ವಲಯದ 5994 ಅರೋಗ್ಯ ಸಿಬ್ಬಂದಿಗಳ ಮಾಹಿತಿ ಸಂಗ್ರಹಿಸಲಾಗಿದ್ದು, ಕೋವಿಡ್ ವೆಬ್‌ಗ ದಾಖಲಿಸಲಾಗುತ್ತಿದೆ. ಸಿಬ್ಬಂದಿಗಳ ಸಂಖ್ಯೆ ಸಂಗ್ರಹ ಇನ್ನೂ ಮುಂದುವರಿದಿದೆ. ಜಿಲ್ಲೆಗೆ ಒಟ್ಟು 35 ಐಸ್ ಲ್ಯಾಂಡ್ ರೆಫ್ರಿಜರೇಟರ್ ಬೇಡಿಕೆಗಳ ಪಟ್ಟಿಯನ್ನು ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ.
-ಡಾ| ವಿ.ಜಿ ರೆಡ್ಡಿ, ಡಿಎಚ್‌ಒ, ಬೀದರ
-ಶಶಿಕಾಂತ ಬಂಬುಳಗೆ