ಶಿರಸಿ: ಬೇಡ್ತಿ ಮತ್ತು ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಭವಿಷ್ಯದಲ್ಲಿ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಿದ್ದು, ಅದರ ಅನುಷ್ಠಾನಕ್ಕೆ ಸರಕಾರದ ಮಟ್ಟದಲ್ಲೂ ಪ್ರಾಮಾಣಿಕ ಪ್ರಯತ್ನ ನಡೆಸುವದಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಕಟಿಸಿದರು.
ಅವರು ಶಾಲ್ಮಲಾ ನದಿ ತಟದ ಸಹಸ್ರಲಿಂಗದಲ್ಲಿ ರವಿವಾರ ಜಾಗತಿಕ ಪರಿಸರ ದಿನಾಚರಣೆ ನಿಮಿತ್ತ ನದಿ ಪೂಜೆ ಸಲ್ಲಿಸಿ, ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಹಮ್ಮಿಕೊಂಡ ಬೇಡ್ತಿ ವರದಾ ನದಿ ಜೋಡಣೆ ವಿರೋಧಿ ಅಭಿಯಾನ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು.
ಕೊಳ್ಳ ಸಂರಕ್ಷಣಾ ಸಮಿತಿ ಪದಾಧಿಕಾರಿಯಾಗಿ ನಾನೂ ಇದ್ದೇನೆ. ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನೇತೃತ್ವದ ಸಮಿತಿ ಯಾವ ತೀರ್ಮಾನ ಕೈಗೊಳ್ಳುವುದೋ ಅದಕ್ಕೆ ಬದ್ಧ ಇದ್ದೇನೆ. ಪರಿಸರ ಸಂರಕ್ಷಣಾ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ವೈಯಕ್ತಿಕ ನೆಲೆಯಲ್ಲಿ ಹೆಚ್ಚಿಸಿಕೊಳ್ಳಬೇಕು ಎಂದು ಪ್ರತಿಪಾದಿಸಿದರು.
ಪರಿಸರ ಸಂರಕ್ಷಣೆಗೆ ಭಾರತದ ನೇತೃತ್ವದಲ್ಲಿ ವಿಶ್ವದ ಕೆಲಸ ನಡೆಯುತ್ತಿದೆ. ಪರಿಸರ ನಾಶ, ಸಂರಕ್ಷಣೆ ಎರಡೂ ಕೆಲಸ ಆಗುತ್ತಿದೆ. ಪರಿಸರ ನಾಶದ ವೇಗ ಹೆಚ್ಚೋ, ಸಂರಕ್ಷಣೆಯ ವೇಗ ಹೆಚ್ಚೋ ನಾವೇ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಜನಜೀವನ ಅಗತ್ಯತೆ ಪೂರೈಸಿಕೊಳ್ಳುವ ಧಾವಂತದಲ್ಲಿ ಭವಿಷ್ಯದ ಪೀಳಿಗೆಯ ಜನಜಾಗೃತಿ ಇದ್ದರೂ ಕೈಗಾರಿಕೆಗಳು ಸೇರಿದಂತೆ ಹತ್ತಾರು ಕಾರಣಗಳಿಂದ ಪರಿಸರದ ಮೇಲಿನ ದಾಳಿಯೂ ಹೆಚ್ಚಾಗಿದೆ. ತ್ಯಾಜ್ಯ ನದಿ ಸೇರುವುದು ನೋಡಿದರೂ ಆತಂಕ ಆಗುತ್ತದೆ. ಪರಿಸರಕ್ಕೆ ಆಘಾತ ಕೂಡ ಆಗುತ್ತಿದೆ. ಪ್ಲಾಸ್ಟಿಕ್ ಕೂಡ ಸಮಸ್ಯೆ ಆಗಿದೆ. ಇರುವುದು ಒಂದೇ ಭೂಮಿ. ಇದರ ಸಂರಕ್ಷಣೆ ಆಗಬೇಕು. ನಮ್ಮ ಸಂಪತ್ತು ಬರಿದಾಗಿದೆ. ಬರಡಾಗುವುದು ಇದೆ ಎಂಬುದನ್ನು ನೆನಪಿಸಿಕೊಂಡರೂ ಆತಂಕ ಆಗುತ್ತದೆ. ಭೂ ತಾಪಮಾನ ಹೀಗೇ ಏರಿದರೆ ನಮ್ಮ ಹಾಗೂ ಭವಿಷ್ಯದ ಜೀವನದಲ್ಲಿ ಏನೆಲ್ಲ ನೋಡಬೇಕಾಗಿದೆಯೋ ಎಂಬ ನೋವೂ ಇದೆ ಎಂದರು.
ಕರಪತ್ರ ಬಿಡುಗಡೆಗೊಳಿಸಿದ ಹಿರಿಯ ಲೇಖಕ ನಾಗೇಶ ಹೆಗಡೆ, ಪವಿತ್ರ ಜೋಡಿ ನದಿಗಳು ಅಘನಾಶಿನಿ, ಬೇಡ್ತಿ ಇದೆ. ಇದು ನಮ್ಮ ನಾಡಿನ ಏಕೈಕ ಪರಿಶುದ್ಧ ನದಿಗಳು. ಈಗಲಾದರೂ ಮಾನವನ ಹಕ್ಕು ಸರಕಾರ ಕೊಡಬೇಕು. ಅದರಿಂದ ಕಾನೂನಾತ್ಮಕವಾಗಿ ಪರಿಸರ ಕೆಲಸ ಮಾಡಬೇಕು ಎಂದ ಅವರು, ನದಿ ನೀರಿಗೆ ಹರಿವ, ಮರಗಿಡಗಳು ಬೆಳೆಯಲು, ಪ್ರಾಣಿಗಳಿಗೆ ಸ್ವತ್ಛಂದ ಓಡಾಡುವ ಸ್ವಾತಂತ್ರ್ಯ ಬೇಕಿದೆ. ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಪರಿಸರ ಸಂರಕ್ಷಣಾ ಆಂದೋಲನ ಮಾಡಿದ್ದು ಶಿರಸಿಯಲ್ಲೇ ಎಂದರು.
ಧಾರವಾಡ ಒಕ್ಕೂಟದ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಸದಾಶಿವಳ್ಳಿ ಪಂಚಾಯ್ತಿ ಅಧ್ಯಕ್ಷ ನಾಗರಾಜ್ ಹೆಗಡೆ, ಸೋಂದಾ ಪಂಚಾಯ್ತಿ ಅಧ್ಯಕ್ಷೆ ಮಮತಾ ಜೈನ್, ಭೈರುಂಬೆ ಪಂಚಾಯ್ತ ಅಧ್ಯಕ್ಷ ರಾಘು ನಾಯ್ಕ, ಎಪಿಎಂಸಿ ಅಧ್ಯಕ್ಷೆ ಸವಿತಾ ಹುಳಗೋಳ, ಭೈರುಂಬೆ ಸೊಸೈಟಿ ಉಪಾಧ್ಯಕ್ಷ ಆರ್.ಎಸ್. ಹೆಗಡೆ ನಿಡಗೋಡ, ಮಠದ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ನಳ್ಳಿ ಇತರರು ಇದ್ದರು. ಸುರೇಶ ಹಕ್ಕಿಮನೆ ನಿರ್ವಹಿಸಿದರು. ಅನಂತ ಭಟ್ಟ ಹುಳಗೋಳ ವಂದಿಸಿದರು.
ಮಾನವ ಪ್ರಕೃತಿ ಪೂರಕವಾಗಿ ರೂಪಿಸುವ ಕಾರ್ಯ ಆಗಬೇಕು. ನಾಳಿನ ಜನಾಂಗಕ್ಕೆ ಇರುವುದೊಂದು ಭೂಮಿ ಉಳಿಸಿಕೊಡಬೇಕು. –
ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್
ನೆನಪಿಡುವ ಪೂರ್ವಜರಾಗೋಣ. ಮುಂದಿನ ಮಕ್ಕಳಿಗೆ ಈ ಭೂಮಿ ಕೊಡಬೇಕಿದೆ. ಅದಕ್ಕಾಗಿ ನಾವೂ ನೆನಪಿಡುವ ಪೂರ್ವಜರಾಗೋಣ. –
ನಾಗೇಶ ಹೆಗಡೆ, ಹಿರಿಯ ಬರಹಗಾರ
ಸಂವಿಧಾನದ ಆಶಯದ ಚಿಂತನೆಯಂತೆ ಪರಿಸರ ಸಂರಕ್ಷಣಾ ಜಾಗೃತಿಗೂ ಶಾಸನ ಸಭೆಯಲ್ಲಿ ಚಿಂತನಾ ಸಮಾವೇಶ ಮಾಡಬೇಕಿದೆ.
-ಅನಂತ ಅಶೀಸರ, ಜೀವವೈವಿಧ್ಯ ಮಂಡಳಿ
ನಿಕಟಪೂರ್ವ ಅಧ್ಯಕ್ಷ ಬೇಡ್ತಿ ಕಣಿವೆ ಸಂರಕ್ಷಣಾ ಅಭಿಯಾನದ ಆರಂಭ. ಬೇಡ್ತಿ ನದಿ ನೀರನ್ನು ತಿರುಗಿಸುವ ಯೋಜನೆ ಮತ್ತೆ ಬಂದಿದ್ದು ಜೂ.14ಕ್ಕೆ ಮಂಚಿಕೇರಿ ಬೃಹತ್ ಸಮಾವೇಶ ನಡೆಯಲಿದೆ. –
ವಿ.ಎನ್. ಹೆಗಡೆ ಬೊಮ್ನಳ್ಳಿ, ಮಠದ ಅಧ್ಯಕ್ಷ