Advertisement

ಮಿಮ್ಸ್‌ನ ಹೆರಿಗೆ ವಾರ್ಡ್‌ನಲ್ಲಿ ಹಾಸಿಗೆ ಹೆಚ್ಚಳ

03:47 PM Oct 26, 2021 | Team Udayavani |

ಮಂಡ್ಯ: ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಾದ ರಾಮನಗರ, ತುಮಕೂರು ಹಾಗೂ ಮೈಸೂರು ಜಿಲ್ಲೆಗಳಿಂದ ರೋಗಿಗಳು ಹಾಗೂ ಗರ್ಭಿಣಿಯರು ಅಗತ್ಯಕ್ಕಿಂತಹೆಚ್ಚಾಗಿ ಬರುತ್ತಿರುವುದರಿಂದ ಹಾಸಿಗೆಗಳ ಕೊರತೆ ಉಂಟಾಗಿದೆ ಎಂದು ಮಿಮ್ಸ್‌ ನಿರ್ದೇಶಕ ಡಾ. ಎಂ.ಆರ್‌.ಹರೀಶ್‌ ತಿಳಿಸಿದರು.

Advertisement

2006ರಿಂದ ಮಿಮ್ಸ್‌ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡುತ್ತಾ ಬಂದಿದೆ. ಹೆರಿಗೆವಾರ್ಡ್‌ಗೆ ಅಗತ್ಯಕ್ಕಿಂತ ಹೆಚ್ಚಾಗಿ ಗರ್ಭಿಣಿಯರುಬರುತ್ತಿರುವುದರಿಂದ ತೊಂದರೆಯಾಗುತ್ತಿದೆ. ಆದ್ದರಿಂದ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗದಲ್ಲಿ ನಿಯಮಾನುಸಾರವಾಗಿ 90 ಹಾಸಿಗೆಗಳನ್ನುಅಳವಡಿಸಲು ಅವಕಾಶವಿದ್ದು, ಇದನ್ನು 198ಕ್ಕೆ ಹೆಚ್ಚಳಮಾಡಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಾರ್ವಜನಿಕರು ಅರ್ಥ ಮಾಡಿಕೊಳ್ಳಲಿ: ಸಾಮಾನ್ಯ ಹೆರಿಗೆಯಾದಲ್ಲಿ 24 ರಿಂದ 48 ಗಂಟೆಯೊಳಗೆ ಬಿಡುಗಡೆ ಮಾಡಬಹುದು. ಶಸ್ತ್ರ ಚಿಕಿತ್ಸೆಯಾದಲ್ಲಿ ಕನಿಷ್ಠ 7ದಿನಗಳ ಕಾಲ ಆಸ್ಪತ್ರೆಯಲ್ಲಿ ಇಟ್ಟುಕೊಳ್ಳಬೇಕಾಗಿರುತ್ತದೆ. ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆಮಾಡಿ ಹಾಸಿಗೆ ಖಾಲಿಯಾದ ತಕ್ಷಣವೇ ಇತರೆ ರೋಗಿಗಳನ್ನು ಅಲ್ಲಿಗೆ ಸ್ಥಳಾಂತರ ಮಾಡಲಾಗುತ್ತದೆ. ಪರಿಸ್ಥಿತಿ ಹೀಗಿರುವಾಗ ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಹೊಸೂರು ಬಳಿ 100 ಹಾಸಿಗೆಗಳ ಆಸ್ಪತ್ರೆ: ರಾಷ್ಟ್ರೀಯ ಆರೋಗ್ಯ ಮಿಷನ್‌ನಿಂದ ಮಂಡ್ಯ ಜಿಲ್ಲೆಗೆ ಹೊಸದಾಗಿ 100 ಹಾಸಿಗೆಗಳ ಆಸ್ಪತ್ರೆ ಮಂಜೂರಾಗಿದೆ. ಅದಕ್ಕಾಗಿ ಸ್ಥಳಾವಕಾಶ ಹುಡುಕಾಟದಲ್ಲಿದ್ದು, ಸದ್ಯ ಜಿಲ್ಲಾಡ‌ಳಿತ ತಾಲೂಕಿನ ಬಿ.ಹೊಸೂರು ಕಾಲೋನಿಯಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳಾವಕಾಶ ಕಲ್ಪಿಸಿಕೊಟ್ಟಿದ್ದು, ತಯಾರಿ ನಡೆದಿದೆ. ಹೊಸ ಆಸ್ಪತ್ರೆ ನಿರ್ಮಾಣವಾಗುವವರೆಗೂ ಮಿಮ್ಸ್‌ನಲ್ಲಿ ಒತ್ತಡ ಹೆಚ್ಚಿರುತ್ತದೆ. ಅದನ್ನು ಸಾಧ್ಯವಾದಷ್ಟು ನಾವು ನಿಭಾಯಿಸುತ್ತಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಸಲಹೆ: ಮಂಡ್ಯ ಜಿಲ್ಲೆಯ ಆರು ತಾಲೂಕು ಕೇಂದ್ರಗಳಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಮಾನ್ಯ ಹೆರಿಗೆಗೆ ಹೆಚ್ಚಿನ ಮುತುವರ್ಜಿವಹಿಸಬೇಕಾಗಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣಾಧಿ ಕಾರಿಗಳೊಂದಿಗೆ ಚರ್ಚಿಸಿತುರ್ತು ಆರೋಗ್ಯ ಸೇವೆ ಇರುವವರಿಗೆ ಮಾತ್ರ ಮಿಮ್ಸ್‌ ಆಸ್ಪತ್ರೆಗೆ ಕಳುಹಿಸುವುದು. ಉಳಿದಂತೆಸಾಮಾನ್ಯ ಹೆರಿಗೆಯನ್ನು ತಾಲೂಕು ಆಸ್ಪತ್ರೆಗಳಲ್ಲೇ ನಿರ್ವಹಿಸುವಂತೆ ಮನವರಿಕೆ ಮಾಡಿಕೊಡಲುನಿರ್ಧರಿಸಲಾಗಿದೆ ಎಂದರು.

Advertisement

ಈ ಯೋಜನೆ ಸಮರ್ಪಕವಾಗಿ ಕಾರ್ಯಗತವಾದಲ್ಲಿಮಿಮ್ಸ್‌ನ ಹೆರಿಗೆ ವಾರ್ಡ್‌ನಲ್ಲಿ ಒತ್ತಡವೂ ಕಡಿಮೆಯಾಗಲಿದೆ. ಶಸ್ತ್ರಚಿಕಿತ್ಸೆ ಸೇರಿದಂತೆ ತುರ್ತು ಸೇವೆಗಳನ್ನು ನಿರಾತಂಕವಾಗಿ ನೀಡಬಹುದಾಗಿದೆ ಎಂದು ತಿಳಿಸಿದರು.

ರಜೆ ದಿನಗಳಲ್ಲಿ ಹೆಚ್ಚಿದ ಒತ್ತಡ: ಸಾಮಾನ್ಯವಾಗಿ ರಜಾ ದಿನಗಳಲ್ಲಿ ಮಿಮ್ಸ್‌ನಲ್ಲಿ ಹೆಚ್ಚಿನ ಒತ್ತಡ ಇರುತ್ತದೆ. ಖಾಸಗಿ ಆಸ್ಪತ್ರೆಗಳು ರಜೆ ಇರುವ ಕಾರಣ 24 ಗಂಟೆಗಳ ಕಾಲ ಮಿಮ್ಸ್‌ನಲ್ಲಿ ಆರೋಗ್ಯ ಸೇವೆ ದೊರೆಯುವುದರಿಂದ ರೋಗಿಗಳು ಹೆಚ್ಚಾಗಿ ಮಿಮ್ಸ್‌ ಕಡೆಗೆ ಹರಿದುಬರುತ್ತಾರೆ. ಇದೂ ಸಹ ಒಂದು ಕಾರಣವಾಗಿದೆ ಎಂದು ಹೇಳಿದರು.

30 ಹೆಚ್ಚುವರಿ ಹಾಸಿಗೆ ಅಳವಡಿಕೆ: ಸದ್ಯ ಮಿಮ್ಸ್‌ನ ಹೆರಿಗೆ ವಿಭಾಗದಲ್ಲಿ 198 ಹಾಸಿಗೆಗಳನ್ನು ಅಳವಡಿಸಲಾಗಿದ್ದು, ಇನ್ನೂ 30 ಹಾಸಿಗೆಗಳನ್ನು ಹೆಚ್ಚುವರಿಯಾಗಿ ಅಳವಡಿಸಲು ಚಿಂತನೆ ನಡೆಸಲಾಗಿದೆ ಎಂದರು.

ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಡಾ. ಎಚ್‌.ಸಿ. ಸವಿತಾ ಗೋಷ್ಠಿಯಲ್ಲಿದ್ದರು.

ಹೊಸ ಸಿಟಿ ಸ್ಕ್ಯಾನ್‌ ಯಂತ್ರಕ್ಕೆ ಪ್ರಸ್ತಾವನೆ :

ರೆಡಿಯಾಲಜಿ ವಿಭಾಗದಲ್ಲಿ ಒಂದು ಸಿ.ಟಿ.ಸ್ಕ್ಯಾನಿಂಗ್‌ ಯಂತ್ರ ಕಾರ್ಯನಿರ್ವಹಿಸುತ್ತಿದೆ. ಕೆಲವು ಸಂದರ್ಭಗಳಲ್ಲಿ ತಾಂತ್ರಿಕ ಕಾರಣದಿಂದಾಗಿ ದುರಸ್ತಿಯಾದಾಗ ಬಿಡಿ ಭಾಗಗಳನ್ನು ತಂದು ಅಳವಡಿಸುವುದು ತಡವಾಗುತ್ತಿದೆ. ಆದ ಕಾರಣ ಮತ್ತೂಂದು ಸಿ.ಟಿ. ಸ್ಕ್ಯಾನಿಂಗ್‌ ಯಂತ್ರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ಅಳವಡಿಸಬೇಕಾಗಿರುವುದರಿಂದ ಸರ್ಕಾರದೊಂದಿಗೆ ವ್ಯವಹರಿಸಿ ತರಿಸಿಕೊಳ್ಳಲಾಗುವುದು ಎಂದು ಮಿಮ್ಸ್‌ ನಿರ್ದೇಶಕ ಡಾ.ಎಂ.ಆರ್‌.ಹರೀಶ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next