Advertisement

ಬಿಇಡಿ ಪಠ್ಯಕ್ರಮ ನಿಯಂತ್ರಣ ಅಗತ್ಯ

02:52 PM Apr 18, 2017 | Team Udayavani |

ಆಳಂದ: ರಾಜ್ಯ ಸರ್ಕಾರವು ಬಿಇಡಿ ಪಠ್ಯಕ್ರಮವನ್ನು ನಿಯಮಗಳ ಅನುಸಾರ ನಿಯಂತ್ರಣದಲ್ಲಿಡಬೇಕು ಎಂದು ಕಲಬುರಗಿ ವಿವಿ ಶಿಕ್ಷಣ ವಿಭಾಗದ ನಿವೃತ್ತ ಪ್ರಾಧ್ಯಾಪಕ, ಕರ್ನಾಟಕ ರಾಜ್ಯದ ಎರಡು ವರ್ಷದ ಬಿಇಡಿ ಕಾರ್ಯಕ್ರಮ ಸಮಿತಿ ಅಧ್ಯಕ್ಷ ಡಾ| ಇ.ಆರ್‌. ಏಕಬೋಟೆ ಹೇಳಿದರು. 

Advertisement

ಸೋಮವಾರ ಪಟ್ಟಣದ ಜೀವನ ಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ತಡಕಲ್‌ನ ಪೂಜ್ಯ ಶ್ರೀ ರಾಜಶೇಖರ ಮಹಾಸ್ವಾಮೀಜಿ ಬಿಇಡಿ ಕಾಲೇಜು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದ 450 ಬಿಇಡಿ ಕಾಲೇಜುಗಳ ಪೈಕಿ ಅನೇಕ ಕಾಲೇಜಿಗಳಲ್ಲಿ ವಿದ್ಯಾರ್ಥಿಗಳು ದಾಖಲಾತಿ ಪಡೆಯುತ್ತಾರೆ.

ಪ್ರವೇಶ ಪಡೆದ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಿಲ್ಲ. ಹೀಗಾಗಿ ಗುಣಮಟ್ಟದ ಕೊರತೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಎಲ್ಲ ಮಹಾವಿದ್ಯಾಲಯಗಳು ಪಠ್ಯಕ್ರಮವನ್ನು ನಡೆಸುವಾಗ ನಿತ್ಯದ ಅಭ್ಯಾಸಕ್ರಮದ ಚಟುವಟಿಕೆಗಳನ್ನು ವಿಡಿಯೊ ರೂಪದಲ್ಲಿ ಇಡುವ ಮೂಲಕ ಕಳಪೆ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಿಇಡಿ ಕಾಲೇಜುಗಳ ಕಾರ್ಯವನ್ನು ನಿಯಂತ್ರಿಸಬಹುದಾಗಿದೆ ಎಂದರು. 

ರಾಜ್ಯದಲ್ಲಿ ಬಿಇಡಿಗೆ ಉತ್ತಮ ಪಠ್ಯಕ್ರಮ ಮನಗಂಡು ಬರೆಯಲು ಮುಂದಾಗಿ ಬೆಂಗಳೂರು ಭಾಗದಲ್ಲಿ ಅನುಭವಿಗಳನ್ನು ಅಹ್ವಾನಿಸಿದರೆ ಅದರಲ್ಲಿ ಮೂರ್‍ನಾಲ್ಕು ಮಂದಿಯಷ್ಟೇ ಗುಣಮಟ್ಟದ ಅನುಭವಿಗಳು ಸಿಕ್ಕಿದ್ದಾರೆ. ಇವರ ಮೂಲಕ ಹೊಸ ಪಠ್ಯಕ್ರಮ ರಚಿಸುವ ಮೂಲಕ ಭಾರತದಲ್ಲೇ ಅತ್ಯುತ್ತಮ ಪಠ್ಯಕ್ರಮವಾಗಿ ಜಾರಿಗೆ ತರಲಾಗುತ್ತಿದೆ.

ಇದಕ್ಕೆ ತಕ್ಕಂತೆ ಹೊಸ ಕಾಲೇಜು ಮತ್ತು ಒಳ್ಳೆಯ ಕಾಲೇಜುಗಳು ಬೇಕು ಎಂದರು. ಶಿಕ್ಷಕರ ಕೊರತೆ ಇಲ್ಲ. ಆದರೆ ಗುಣಮಟ್ಟದ ಶಿಕ್ಷಕರ ಕೊರತೆ ಕಾಡುತ್ತಿದೆ. ಹೊಟ್ಟೆಪಾಡಿಗಾಗಿ ಶಿಕ್ಷಕ ವೃತ್ತಿಗೆ ಬರುತ್ತಿರುವುದು ಸಮಾಜ ಘಾತುಕ ಕೆಲಸ ಮಾಡಿದಂತೆ ಎಂದು ಕಳವಳ ವ್ಯಕ್ತಪಡಿಸಿದರು. 

Advertisement

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಕರ ಮತ್ತು ಮಹಾವಿದ್ಯಾಲಯ ದೊರಕಿಸಿಕೊಡದೆ ಹೋದಲ್ಲಿ ಅನ್ಯಾಯ ಮಾಡಿದಂತೆ. ಕೆಟ್ಟ ಕಾಲೇಜುಗಳಲ್ಲಿ ಹಣಕೊಟ್ಟು ಬಿಇಡಿ ಮುಗಿಸುವರು ಹೆಚ್ಚುತ್ತಿದ್ದಾರೆ. ಸಮಾಜದಲ್ಲಿ ಒಳ್ಳೆಯ ಶಿಕ್ಷಕರು ಹೊರಬರದಿದ್ದರೆ ಒಳ್ಳೆಯ ವಿದ್ಯಾರ್ಥಿಗಳು ನಿರ್ಮಾಣವಾಗಲು ಸಾಧ್ಯವಿಲ್ಲ ಎಂದರು. 

ಸಮ್ಮುಖ ವಹಿಸಿದ್ದ ಮಾದನಹಿಪ್ಪರಗಾ ಶಿವಲಿಂಗೇಶ್ವರ ವಿರಕ್ತ ಮಠದ ಅಭಿನವ ಶಿವಲಿಂಗ ಮಹಾಸ್ವಾಮೀಜಿ ಮಾತನಾಡಿ, ಬಿಇಡಿ ಕಾಲೇಜು ಪ್ರಾರಂಭಿಸುವ ಮೂಲಕ ಸಮಾಜ ಬಯಸುವ ಉತ್ತಮ ಚಾರಿತ್ರವಂತ ಶಿಕ್ಷಕರನ್ನು ನೀಡಲು ಮುಂದಾಗಿರುವ ಗುತ್ತೇದಾರ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು. 

ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ, ಸಂಸ್ಥೆಯ ಅಧ್ಯಕ್ಷ ಸುಭಾಷ ಗುತ್ತೇದಾರ ಮಾತನಾಡಿ, ಹಣ ಗಳಿಸಲು ಶಾಲಾ, ಕಾಲೇಜು ತೆರೆಯದೆ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರ ಭವಿಷ್ಯ ರೂಪಿಸುವ ಸಲುವಾಗಿ ಸಂಸ್ಥೆಯ ಅಡಿಯಲ್ಲಿ ವಿವಿಧ ವೃತ್ತಿಪರ ಕೋರ್ಸ್‌ ಪ್ರಾರಂಭಿಸಲಾಗುತ್ತಿದೆ. 

ವಿದ್ಯಾರ್ಥಿಗಳು ಲಾಭ ಪಡೆಯಬೇಕು ಎಂದರು. ಸಾನ್ನಿಧ್ಯ ವಹಿಸಿದ್ದ ನಂದಗಾಂವ ಮಠದ ರಾಜಶೇಖರ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಗುರು, ಶಿಷ್ಯರ ಸಂಬಂಧ ಅಳಿಸಲು ಸಾಧ್ಯವಿಲ್ಲ. ಸುಭಾಷ ಗುತ್ತೇದಾರ ಅವರು, ತಮ್ಮ ಗುರುವಿನ ಹೆಸರಿನಲ್ಲಿ ಬಿಇಡಿ ಕಾಲೇಜುಪ್ರಾರಂಭಿಸಿ ಈ ಭಾಗದಲ್ಲಿ ಒಳ್ಳೆಯ ಶಿಕ್ಷಣ  ಕೊಡುವ ಉದ್ದೇಶವನ್ನು ಹೊಂದಿರುವುದು ಮೆಚ್ಚುವಂತದ್ದು ಎಂದರು. 

ಸಂಸ್ಥೆ ಕಾರ್ಯದರ್ಶಿ, ಜಿಪಂ ಸದಸ್ಯ ಹರ್ಷಾನಂದ ಗುತ್ತೇದಾರ, ಆಡಳಿತಾಧಿಕಾರಿ ರಾಘವೇಂದ್ರ ಚಿಂಚನಸೂರ, ಪ್ರಾಚಾರ್ಯ ಅಶೋಕ ರೆಡ್ಡಿ, ಸಾಹಿತಿ ಅಪ್ಪಸಾಬ ಗುಂಡೆ, ಪದವಿ ಮಹಾವಿದ್ಯಾಲಯ ಪ್ರಾಚಾರ್ಯ ಕೆ.ಎಸ್‌. ಸಾವಳಗಿ, ಪಿಯು ಕಾಲೇಜಿನ ಪ್ರಾಚಾರ್ಯ ಡಾ| ಅಪ್ಪಸಾಬ ಬಿರಾದಾರ, ಪ್ರೌಢಶಾಲೆ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಬುಕ್ಕೆ, ಮಲ್ಲಿನಾಥ ತುಕಾಣೆ, ಶಿಕ್ಷಕ ಶರಣಬಸಪ್ಪ ವಡಗಾಂವ ಹಾಗೂ ಸಿಬ್ಬಂದಿ ಇದ್ದರು. ಉಪನ್ಯಾಸಕ ಮೃತ್ಯುಂಜಯ ಪಾಟೀಲ ನಿರೂಪಿಸಿ, ವಂದಿಸಿದರು.   

Advertisement

Udayavani is now on Telegram. Click here to join our channel and stay updated with the latest news.

Next