ಕಲಬುರಗಿ: ನಗರಗಳಲ್ಲಿ ಕುಡಿಯುವ ನೀರು, ವಿದ್ಯುತ್, ಒಳಚರಂಡಿ ಹಾಗೂ ಸ್ವಚ್ಛತೆ ವ್ಯವಸ್ಥೆ ಚೆನ್ನಾಗಿದ್ದು, ನಾಗರಿಕರೆಲ್ಲ ಸ್ವಚ್ಛತೆಗೆ ಮಹತ್ವ ನೀಡಿ ಮಹಾನಗರವನ್ನು ಸ್ಮಾರ್ಟ್ ಸಿಟಿಯನ್ನಾಗಿಸಿ ಎಂದು ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಪಾಲಿಕೆ, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಯೋಗದಲ್ಲಿ ನಗರದ ಕಾಕಡೆ ವೃತ್ತದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಪುರಸ್ಕೃತ ಅಮೃತ ಯೋಜನೆ ಹೆಚ್ಚಿನ ಅನುದಾನದಲ್ಲಿನ ನೀರು ಸರಬರಾಜು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ನಗರಕ್ಕೆ ಮಂಜುರಾದ ಅಮೃತ ಯೋಜನೆ ಉಳಿತಾಯದಲ್ಲಿ ಕುಡಿಯುವ ನೀರು ಸರಬರಾಜಿಗೆ ಹೆಚ್ಚಿನ ಮಹತ್ವ ನೀಡುವ ಮೂಲಕ ಸಲಾಂಟೇಕಡಿಯಿಂದ ಹಳೆ ನೀರು ಶುದ್ಧೀಕರಣ ಘಟಕದ ವರೆಗೆ ಬೆಣ್ಣೆತೋರಾದಿಂದ ನೀರು ಪೂರೈಸುವ ಕುಡಿಯುವ ನೀರು ಕೊಳವೆ ಮಾರ್ಗ ಬದಲಿಸುವ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಸಹಕಾರ ನೀಡಿದ ಶಾಸಕಿ ಖನೀಜ್ ಫಾತಿಮಾ ಅವರಿಗೆ ಅಭಿನಂದನೆ. ಈ ಕಾಮಗಾರಿ ಅಧಿಕಾರಿಗಳು, ನಗರ ಪಾಲಿಕೆ ಸದಸ್ಯರ ನೆರವಿನೊಂದಿಗೆ ಪ್ರಾರಂಭಗೊಂಡಿದೆ ಎಂದರು.
ಶಾಸಕಿ ಖನೀಜ್ ಫಾತೀಮಾ ಮಾತನಾಡಿ, ಬೆಣ್ಣೆತೋರಾದಿಂದ ನಗರಕ್ಕೆ ಸರಬರಾಜಾಗುವ ಕೊಳವೆ ಮಾರ್ಗದಲ್ಲಿ ಸೋರಿಕೆ ಇರುವುದರಿಂದ ನಗರಕ್ಕೆ ಸಮರ್ಪಕ ನೀರು ಸರಬರಾಜಾಗುತ್ತಿರಲಿಲ್ಲ. ಈ ಕುರಿತು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳಲು ಸೋರಿಕೆ ಇರುವ ಕೊಳವೆಗಳನ್ನು ಬದಲಿಸಲಾಗುತ್ತಿದೆ. ನಗರಕ್ಕೆ ನೀರಿನ ತೊಂದರೆ ಆಗದಂತೆ ಭೀಮಾಗೆ ಕಾಳನೂರು ಬ್ಯಾರೇಜಿನಿಂದ, ಬೆಣ್ಣೆತೋರಾಕ್ಕೆ ಗಂಡೋರಿನಾಲಾದಿಂದ ನೀರು ಬಿಡಲಾಗುತ್ತಿದೆ ಎಂದರು.
ಶಾಸಕ ಡಾ| ಬಿ.ಜಿ. ಪಾಟೀಲ, ಮೇಯರ್ ಮಲ್ಲಮ್ಮ ವಳಕೇರಿ, ಮುಖಂಡರಾದ ಭಾಗಣ್ಣಗೌಡ ಸಂಕನೂರ, ಮಾರುತಿರಾವ್ ಡಿ. ಮಾಲೆ, ತಿಪ್ಪಣ್ಣ ಕಮಕನೂರು, ಉಪ ಮೇಯರ್ ಅಲಿಯಾ ಸಿರಿನ್, ಶರಣಕುಮಾರ ಮೋದಿ, ರಾಜು ಕಪನೂರ, ಸಲಿಂ ಬೇಗ, ಶರಣಮ್ಮ ಯಲ್ಲಪ್ಪ ನಾಯಿಕೋಡಿ, ಪುತಲಿ ಬೇಗಂ, ರಮೇಶ ಕಮಕನೂರ, ಜಿ.ಪಂ. ಸಿಇಒ ಡಾ| ರಾಜಾ ಪಿ., ಪಾಲಿಕೆ ಆಯುಕ್ತೆ ಫೌಜಿಯಾ ತರನ್ನುಮ್, ಶಿವನಗೌಡ ಪಾಟೀಲ ಪಾಲ್ಗೊಂಡಿದ್ದರು.
ದೂರ ಉಳಿದ ವಾರ್ಡ್ ಸದಸ್ಯರು: ವಾರ್ಡ್ ನಂ.1 ಹಾಗೂ ನಂ.7ರ ಸದಸ್ಯರಾದ ಶಿವಾನಂದ ಪಾಟೀಲ ಅಷ್ಟಗಿ, ವಿಠ್ಠಲ ಜಾಧವ್ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿ ಕಾರ್ಯಕ್ರಮದಿಂದ ದೂರ ಉಳಿದರು.
ಅಮೃತ ಯೋಜನೆಯ ಉಳಿತಾಯದಲ್ಲಿನ ಸುಮಾರು 12.36 ಕೋಟಿ ರೂ.ಗಳಲ್ಲಿ 9.7 ಕಿ.ಮೀ. ಉದ್ದದ ಪೈಪುಗಳನ್ನು ಬದಲಿಸಲಾಗುತ್ತಿದೆ. ಬೆಣ್ಣೆತೋರಾದಿಂದ ಈ ಮಾರ್ಗವಾಗಿ ದಿನಾಲು ಸುಮಾರು 20.ಎಂ.ಎಲ್.ಡಿ. ನೀರು ಪೂರೈಕೆ ಆಗಬೇಕಿತ್ತು. ಆದರೆ ಸೋರಿಕೆಯಿಂದ ಕೇವಲ ಆರೇಳು ಎಂ.ಎಲ್.ಡಿ. ನೀರು ಮಾತ್ರ ದೊರೆಯುತ್ತಿತ್ತು. ಇದರಿಂದ ನಗರದ 21 ವಾರ್ಡುಗಳಲ್ಲಿ ಕುಡಿಯುವ ನೀರಿನ ತೊಂದರೆ ಇತ್ತು. ಕಾಮಗಾರಿಯು ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ನಂತರದಲ್ಲಿ ನಗರದ ಎಲ್ಲ ವಾರ್ಡುಗಳಿಗೆ 2 ದಿನಕ್ಕೊಂದು ಬಾರಿ ನೀರು ಸರಬರಾಜು ಮಾಡಲಾಗುವುದು.
• ಆರ್. ವೆಂಕಟೇಶಕುಮಾರ,ಜಿಲ್ಲಾಧಿಕಾರಿ