ಬೆಂಗಳೂರು: ಬೌದ್ಧ ಧರ್ಮದ ಅನುಯಾಯಿಗಳು ಅಧ್ಯಯನಶೀಲ ರಾಗಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ನಾಗಸೇನಾ ವಿಹಾರದಲ್ಲಿ ಬುದ್ದಿಸ್ಟ್ ಸೊಸೈಟಿ ಆಪ್ ಇಂಡಿಯಾ, ಕರ್ನಾಟಕ ಬೌದ್ಧ ಸಮಾಜ, ಸಮತಾ ಸೈನಿಕ ದಳ ಮುಂತಾದ ಸಂಘಟನೆಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಧಮ್ಮ ದೀಕ್ಷಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಅಂಬೇಡ್ಕರ್ 22 ವರ್ಷ ಅಧ್ಯಯನ ನಡೆಸಿ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದರು. ಅದೇ ರೀತಿ ಬೌದ್ಧ ಧರ್ಮವನ್ನು ಸ್ವೀಕರಿಸುವರು ಬುದ್ಧನ ಆಚಾರ ವಿಚಾರಗಳ ಬಗ್ಗೆ ಸಮಗ್ರವಾಗಿ ಅರಿತುಕೊಂಡು ಬೌದ್ಧ ಧರ್ಮ ಸ್ವೀಕರಿಸಬೇಕು ಎಂದು ಅವರು ಹೇಳಿದರು.
ಬೌದ್ಧ ಧಮ್ಮ ಶೋಷಿತ ಸಮುದಾಯಗಳಿಗೆ ವಿಮೋಚನಾ ಮಾರ್ಗವಾಗಿದೆ. ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ಬೌದ್ಧರಾದದರು. ಅಂದಿನಿಂದಲೂ ಶೋಷಿತರು ಹೆಚ್ಚಿನ ಸಂಖ್ಯೆಯಲ್ಲಿ ಬೌದ್ಧ ಧರ್ಮವನ್ನು ಅನುಸ ರಿಸುತ್ತಿದ್ದಾರೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
ನಾಗಸೇನಾ ಬುದ್ಧ ವಿಹಾರದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ಹೆಚ್ಚು ಮಂದಿ ಬೌದ್ಧ ಧರ್ಮ ಸ್ವೀಕರಿಸುತ್ತಿದ್ದಾರೆ. ಆದ್ದರಿಂದ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿನ ಮೀಸಲಾತಿ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಬೌದ್ಧ ಧರ್ಮಿಯರಿಗೂ ವಿಸ್ತರಿಸಬೇಕು, ಬುದ್ಧ ಪೌರ್ಣಮಿಯ ದಿನಕ್ಕೆ ರಜೆ ಘೋಷಣೆ ಮಾಡಬೇಕು, ಬೌದ್ಧ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಮತ್ತು ಅಲ್ಪಸಂಖ್ಯಾಕರ ಪ್ರಾಧಿಕಾರಕ್ಕೆ ಬೌದ್ಧರನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಆಗ್ರಹಿಸಿದರು.
ಧಮ್ಮ ದೀಕ್ಷೆ ಪಡೆದ ಎಲ್ಲರಿಗೂ ನಾಗಪುರದ ಅಶೋಕ ಬೌದ್ಧ ವಿಹಾರದ ವಿನಯರಖೀತ ಮಹಾಥೆರೋ ಅವರು ಅಂಬೇಡ್ಕರ್ ಅನುಸರಿಸಿದ್ದ 21 ಅಂಶಗಳನ್ನು ಬೋಧಿಸಿದರು.
ಬೀದರ್‌ನ ಅಣಬೂರು ಬುದ್ಧ ವಿಹಾರದ ದಮ್ಮಾನಂದ ಮಹಾಥೆರೋ, ಚಾಮರಾಜನಗರ ನಳಂದ ವಿಶ್ವವಿದ್ಯಾಲಯದ ಬೋಧಿದತ್ತ ಥೆರೋ, ಬಿಕ್ಕುಣಿ ಬುದ್ಧಮ್ಮ, ಕರ್ನಾಟಕ ಬೌದ್ಧ ಸಮಾಜದ ಅಧ್ಯಕ್ಷ ಹ.ರಾ. ಮಹೇಶ್, ಬಿಎಸ್‌ಐ ಕರ್ನಾಟಕದ ಅಧ್ಯಕ್ಷ ಸಾಕೆ ಶಾಮು, ನಿವೃತ್ತ ಐಎಎಸ್ ಅಧಿಕಾರಿ ಎಚ್.ಸಿದ್ದಯ್ಯ, ಬಾಬುರಾವ್ ಮುಡುಬಿ, ಐಎಎಸ್ ಅಧಿಕಾರಿ ಸುಭಾಷ್ ಭರಣಿ, ಚಿತ್ರನಟ ಚೇತನ್ ಉಪಸ್ಥಿತರಿದ್ದರು.