Advertisement
ಮಳೆಕೊಯ್ಲು ಬಗ್ಗೆ ಮಾಹಿತಿ ನೀಡಲೆಂದು ಇತ್ತೀಚೆಗಷ್ಟೇ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಕಾರ್ಯಾಗಾರ ನಡೆಸಲಾಗಿತ್ತು. ಈಗ ಉದಯವಾಣಿಯ ಅಭಿಯಾನಕ್ಕೆ ಸ್ಪಂದಿಸಿ ಪದವಿನಂಗಡಿಯ ಪ್ರಶಾಂತ್ ಪೈ ಹಾಗೂ ಉರ್ವ ನಿವಾಸಿ ವಿನಾಯಕ್ ಅವರು ಇದೀಗ ತಮ್ಮ ಮನೆಗಳಲ್ಲಿ ಮಳೆಕೊಯ್ಲು ಪದ್ಧತಿಯನ್ನು ಅಳವಡಿಸಿ ಉಳಿದವರಿಗೆ ಪ್ರೇರಣೆಯಾಗಿದ್ದಾರೆ.
‘ಮನೆ ಆವರಣದಲ್ಲೇ ಬಾವಿ ಇದ್ದರೂ ಅದನ್ನು ನಿರ್ಲಕ್ಷಿಸಿ ಪಾಲಿಕೆ ನೀರನ್ನೇ ಆಶ್ರಯಿಸಿದ್ದೆವು. ಆದರೆ ಈ ಬಾರಿ ಎಪ್ರಿಲ್-ಮೇ ತಿಂಗಳಲ್ಲಿ ಪಾಲಿಕೆ ನೀರು ರೇಷನಿಂಗ್ ಮಾಡಿದಾಗ ನೀರಿನ ಮಹತ್ವ ನಮಗೆ ಅರಿವಾಗಿತ್ತು. ಬೋರ್‌ವೆಲ್ ಕೊರೆಯಲು ಆಲೋಚಿಸಿದ್ದೆವು. ಆದರೆ, ಉದಯವಾಣಿ ಆಯೋಜಿಸಿದ್ದ ಮಳೆಕೊಯ್ಲು ಕಾರ್ಯಕ್ರಮಕ್ಕೆ ಬಂದಾಗ ಶ್ರೀ ಪಡ್ರೆ ಅವರು ಬೋರ್‌ವೆಲ್ಗಿಂತ ಬಾವಿಯೇ ಉತ್ತಮ ಎಂದು ಸೂಚಿಸಿದರು. ಅಲ್ಲೇ ಇದ್ದ ನಿರ್ಮಿತಿ ಕೇಂದ್ರದ ಮಳೆಕೊಯ್ಲು ಉಪಕರಣಗಳ ಪ್ರಾತ್ಯಕ್ಷಿಕೆ ನೋಡಿ ಅಲ್ಲಿನ ಸಿಬಂದಿಯನ್ನು ಅದೇದಿನ ಮನೆಗೆ ಕರೆಸಿ ಉಪಕರಣಗಳನ್ನು ಖರೀದಿಸಿ ಅಳವಡಿಸಿದೆವು’ ಎನ್ನುತ್ತಾರೆ ಪದವಿನಂಗಡಿಯ ಪ್ರಶಾಂತ್ ಪೈ. ‘ನಮ್ಮ ಮನೆ ಹತ್ತು ಸೆಂಟ್ಸ್ ಜಾಗದಲ್ಲಿದೆ. ಮನೆಯ ಸುತ್ತ-ಮುತ್ತ ಜಾಗವಿದೆ.
Related Articles
Advertisement
‘ನಾನು ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಬರೆದುಕೊಂಡಿದ್ದೆ. ಆ ಬಗ್ಗೆ ವಿಚಾರಿಸಿ ನನಗೂ ಈಗ ಮಳೆಕೊಯ್ಲಿನ ಬಗ್ಗೆ ಹಲವು ಕರೆಗಳು ಬರುತ್ತಿವೆ. ಅವರಿಗೆಲ್ಲಾ ಮಾಹಿತಿ ನೀಡುತ್ತಿದ್ದೇನೆ’ ಎಂದರು.
ಉದಯವಾಣಿ ಕಾರ್ಯಾಗಾರವೇ ನಮಗೆ ಪ್ರೇರಣೆ
‘ವರ್ಷಗಳ ಹಿಂದೆ ನೀರಿನ ಸಮಸ್ಯೆ ಎದುರಾದಾಗ ಮಳೆ ನೀರನ್ನು ಸದ್ಭಳಕೆ ಮಾಡಿಕೊಳ್ಳುವ ಬಗ್ಗೆ ಚಿಂತಿಸಿ ಮಳೆಕೊಯ್ಲು ವ್ಯವಸ್ಥೆ ಅಳವಡಿಸಿದೆವು. ಮನೆಯ ಟೆರೇಸ್‌ನ ಒಂದು ಬದಿಗೆ ಪೈಪ್ ಅಳವಡಿಸಿ ಬಾವಿಗೆ ಸಂಪರ್ಕ ಕೊಟ್ಟಿದ್ದೆವು. ಆದರೆ, ಮಳೆಕೊಯ್ಲಿನ ಮಹತ್ವದ ಬಗ್ಗೆ ಅಷ್ಟೊಂದು ತಿಳಿದಿರಲಿಲ್ಲ. ಆದರೆ, ಪತ್ರಿಕೆಯ ಕಾರ್ಯಾಗಾರದಲ್ಲಿ ಭಾಗವಹಿಸಿದ ಬಳಿಕ ಮಳೆಕೊಯ್ಲಿನ ಅಗತ್ಯ ಮನವರಿಕೆಯಾಯಿತು. ಹಾಗಾಗಿ, ಮರುದಿನವೇ ನಮ್ಮ ಟೆರೇಸ್‌ನ ಇನ್ನೊಂದು ಬದಿಗೂ ಪೈಪ್ ಅಳವಡಿಸಿ ಮಳೆಕೊಯ್ಲು ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಿದ್ದೇವೆ’ ಎನ್ನುತ್ತಾರೆ ಉರ್ವಾದ ವಿನಾಯಕ್. ‘ಮಳೆಕೊಯ್ಲಿಗೆ ನಾವು ಯಾವುದೇ ಪ್ಲಂಬರ್ ಅನ್ನು ಸಂಪರ್ಕಿಸಿಲ್ಲ. ನಾನು ಹಾಗೂ ಮನೆಮಂದಿ ಸೇರಿ ಪೈಪ್ ತಂದು ಬಾವಿಗೆ ಸಂಪರ್ಕ ಕಲ್ಪಿಸಿದ್ದೇವೆ. ಮನೆಯ ಆಸು-ಪಾಸು ಮರಗಿಡಗಳಿಲ್ಲ. ಹಾಗಾಗಿ ಟೇರೆಸ್ ಶುಚಿಯಾಗಿದೆ. ಆ ಕಾರಣಕ್ಕೆ ಫಿಲ್ಟರ್ ಅಳವಡಿಸಿಲ್ಲ. ಹೀಗಾಗಿ, ನೀರು ಟೆರೇಸ್‌ನಿಂದ ನೇರವಾಗಿ ಫಿಲ್ಟರ್ ವ್ಯವಸ್ಥೆಯಿಲ್ಲದೆ ಬಾವಿಗೆ ಹೋಗುತ್ತಿದೆ. ಹೀಗಾಗಿ, ನಮಗೆ ಕೇವಲ 750 ರೂ. ವೆಚ್ಚ ತಗಲಿದೆ. ಕಳೆದ ಬಾರಿ ಸುಮಾರು 1000 ರೂ. ಖರ್ಚಾಗಿತ್ತು. ಮಳೆ ನೀರಿನ ಮಹತ್ವ ಅರಿತು ಅದನ್ನು ಸಂರಕ್ಷಿಸುವ ಮನೋಭಾವ ಎಲ್ಲರಲ್ಲೂ ಬೆಳೆಯಬೇಕು. ಆಗ ನೀರಿನ ಸಮಸ್ಯೆಗೆ ಪರಿಹಾರ ಹೇಳಬಹುದು’ ಎನ್ನುತ್ತಾರೆ ಅವರು.
ಮನೆಮನೆಗೆ ಮಳೆಕೊಯ್ಲು ಉದಯವಾಣಿ ಸುದಿನ ಅಭಿಯಾನದಿಂದ ಪ್ರೇರಿತಗೊಂಡು ಈಗಾಗಲೇ ನಗರದ ಹಲವಾರು ಮಂದಿ ಮಳೆಕೊಯ್ಲು ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ. ಇವರ ಈ ಸಾಧನೆಯ ಹಿಂದೆ ಇರುವ ಸಾಧ್ಯತೆಗಳ ಕುರಿತು ಬೆಳಕುಚೆಲ್ಲುವ ಪ್ರಯತ್ನ.
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿದ್ದಾರೆ. ಜತೆಗೆ ತಮ್ಮ ಖುಷಿಯನ್ನು ಉಳಿದವರೊಂದಿಗೂ ಹಂಚಿಕೊಳ್ಳುತ್ತಿದ್ದಾರೆ. ಹೀಗಿರುವಾಗ, ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆಗಳಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೊ ಸಮೇತ ನಮಗೆ ವಿವರವನ್ನು ವಾಟ್ಸಪ್ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. ವಾಟ್ಸಪ್ ನಂಬರ್: 9900567000