Advertisement

ಭಾಗವತಿಕೆ ಮಾಡಬೇಕೆಂದುಕೊಂಡವ ದೇಶ ಭಕ್ತಿಯ ವಕ್ತಾರನಾದ

11:03 AM Feb 23, 2018 | Team Udayavani |

ಸಾಂಸ್ಕೃತಿಕ ವಕ್ತಾರನಾಗಬೇಕಿದ್ದವನು ದೇಶ ಸೇವೆಗೆ ಹೊರಟ. ಸರಸ್ವತಿ ದೇವಿಯನ್ನು ಒಲಿಸಿಕೊಳ್ಳಲು ಹೊರಟವನಿಗೆ ಒಲಿದವಳು ಶಕ್ತಿ ದೇವಿ. ಸಣ್ಣದೊಂದು ಗ್ರಾಮದಿಂದ ಹೊರಟ ದೇಶ ಸೇವೆಯ ಪಯಣ ಲೆಬನಾನ್‌ ದೇಶವನ್ನು ಮುಟ್ಟಿಸಿದ್ದು ಸುಳ್ಳಲ್ಲ.

Advertisement

ಕಡಬ: ದೇಶಸೇವೆಯ ತುಡಿತ ಎಲ್ಲಿಂದ ಎಲ್ಲಿಗೆ ಕೊಂಡೊಯ್ಯಬಹುದು ಎಂಬುದಕ್ಕೆ ಸೇನಾನಿ ಕಡಬದ ಬಾಲಕೃಷ್ಣ ರೈ ಅವರೇ ಸಾಕ್ಷಿ. ಈ ಹಾದಿ ಸುಗಮವಾಗಿ ರದಿದ್ದರೂ ಛಲದಿಂದ ಮುನ್ನಡೆದುದ್ದಕ್ಕೆ ದೂರದ ಲೆಬನಾನ್‌ನಲ್ಲೂ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತು.

ಬಾಲಕೃಷ್ಣ ರೈ ವಾಸ್ತವವಾಗಿ ಯಕ್ಷಗಾನ ಭಾಗವತಿಕೆ ಮಾಡಿಕೊಂಡು ಮೇಳದೊಂದಿಗೆ ತಿರುಗಾಡುತ್ತಿರಬೇಕಿತ್ತು. ಯಾಕೆಂದರೆ ಅವರಿಗೆ ಯಕ್ಷಗಾನವೆಂದರೆ ಎಲ್ಲಿಲ್ಲದ ಆಸಕ್ತಿ. ಆ ತೀವ್ರತೆ ಎಷ್ಟಿತ್ತೆಂದರೆ ವಿದ್ಯಾರ್ಥಿಯಾಗಿದ್ದಾಗ ಯಕ್ಷಗಾನ ಭಾಗವತರಾದ ಕಡಬ ರಾಮಚಂದ್ರ ರೈ ಹಾಗೂ ತಮ್ಮ ಶಿಕ್ಷಕ ಬೆಥನಿ ಶಾಲೆಯ ಬಾಲಕೃಷ್ಣ ರೈ ಅವರ ಪ್ರಭಾವಕ್ಕೆ ಒಳಗಾಗಿದ್ದರು. ಅವರ ಹಾಡುಗಾರಿಕೆಗೆ ಮನ ಸೋತು ತಾನೂ ಭಾಗವತನಾಗಬೇಕೆಂದು ಧರ್ಮಸ್ಥಳಕ್ಕೆ ತರಬೇತಿ ಪಡೆಯಲು ಹೋಗಿದ್ದರು.


ಪತ್ನಿ ಮತ್ತು ಮಕ್ಕಳೊಂದಿಗೆ ಬಾಲಕೃಷ್ಣ ರೈ.

 ಆದರೆ, ತರಬೇತಿಗೆ ಸಂಬಂಧಿಸಿದ ಸಂದರ್ಶನದಲ್ಲಿ ಯಶಸ್ಸು ಕಾಣಲಿಲ್ಲ. ಕಡೆಗೆ ತಮ್ಮ ಸಂಬಂಧಿಯೊಬ್ಬರ ಪ್ರೇರಣೆಯಿಂದ ಸೇನೆಯ ಹಾದಿ ಹಿಡಿದರು. ಇಂದು ದೇಶಸೇವೆಯಲ್ಲೂ ಸೈ, ಬದುಕಿನಲ್ಲೂ ಜೈ. ಮೂವತ್ತೆರಡು ವರ್ಷಗಳಿಂದ ಸೇನೆಯ ವಿವಿಧ ಕಾರ್ಯಾಚರಣೆಗಳಲ್ಲಿ ಪಾಲ್ಗೊಳ್ಳುತ್ತಾ ತಮ್ಮ ಬದುಕಿನ ಸಾರ್ಥಕತೆ ಕಾಣುತ್ತಿರುವ ಬಾಲಕೃಷ್ಣ ರೈ ಬಂಟ್ರ ಗ್ರಾಮದ ಕಾಯಂದೂರು ನಿವಾಸಿ ದೇರಣ್ಣ ರೈ ಮತ್ತು ದೇವಕಿ ರೈ ದಂಪತಿಯ ಪುತ್ರ.


ದೇರಣ್ಣ ರೈ (ತಂದೆ) ಮತ್ತು ದೇವಕಿ ರೈ (ತಾಯಿ)

ಸಂಬಂಧಿಯ ಪ್ರೇರಣೆ
ಮನೆಯ ಆರ್ಥಿಕ ಸ್ಥಿತಿ ಬಹಳ ಚೆನ್ನಾಗಿರಲಿಲ್ಲ. ಹಾಗೆಂದು ಬದುಕನ್ನು ಬಿಡಲು ಸಾಧ್ಯವಿರಲಿಲ್ಲ. ಹತ್ತನೇ ತರಗತಿ ಮುಗಿಸಿ ಹಾಸ್ಟೆಲ್‌ ನಲ್ಲಿ ಅಡುಗೆಯಾಳು, ಅಂಗಡಿಯಲ್ಲಿ ಸೇಲ್ಸ್‌ಮನ್‌ ಆಗಿ ದುಡಿದರು. ಆ ಸಂದರ್ಭದಲ್ಲಿ ಇವರ ಸಂಬಂಧಿ ಮರ್ದಾಳದ ಕೃಷ್ಣ ಶೆಟ್ಟಿ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಆಗಿದ್ದರು. ಅವರ ತರಬೇತಿ ಮತ್ತು ಮಾರ್ಗದರ್ಶನದಲ್ಲಿ ಬಾಲಕೃಷ್ಣ 1985 ರಲ್ಲಿ ಸೇನೆಗೆ ಅರ್ಜಿ ಸಲ್ಲಿಸಿದರು. ಪ್ರಥಮ ಸಂದರ್ಶನದಲ್ಲಿ ದೇಹದ ತೂಕ ಹೆಚ್ಚಿದ್ದರಿದ ಆಯ್ಕೆಯಾಗಲಿಲ್ಲ. ಬಳಿಕ 1 ವರ್ಷ ಕಠಿನ ಪರಿಶ್ರಮಪಟ್ಟು ದೇಹ ತೂಕ ಇಳಿಸಿದರು. 1986ರಲ್ಲಿ ಸೇನೆಯಲ್ಲಿ ಅವಕಾಶ ಸಿಕ್ಕಿತು.

Advertisement

ಜಮ್ಮು, ಲಕ್ನೋ ಮುಂತಾದೆಡೆ ಸೇವೆ ಸಲ್ಲಿಸು ತ್ತಿರುವಾಗಲೇ ತನ್ನ ಪದವಿ ಶಿಕ್ಷಣ ಹಾಗೂ ಡಿಪ್ಲೊಮಾ ಶಿಕ್ಷಣ ಪೂರೈಸಿ, ಪದೋನ್ನತಿ ಪಡೆದು ಪ್ರಸ್ತುತ ದಿಲ್ಲಿಯ ಸೇನಾ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. 1998ರಲ್ಲಿ ಪದವೀಧರೆ ಚೇತನಾ ಅವರನ್ನು ವಿವಾಹವಾದರು. ಇವರಿಗೆ ಇಬ್ಬರು ಮಕ್ಕಳು. ಪತ್ನಿ ಚೇತನಾ ಗೃಹಿಣಿಯಾಗಿದ್ದರೆ, ಪುತ್ರಿ ಪ್ರತೀಕ್ಷಾ ಬೆಂಗಳೂರಿನಲ್ಲಿ ಪ್ರಥಮ ವರ್ಷದ ಪದವಿ ಓದುತ್ತಿದ್ದಾಳೆ. ಪುತ್ರ ಪ್ರದ್ಯುಮ್ನ ಲಕ್ನೋದ ಆರ್ಮಿ ಪಬ್ಲಿಕ್‌ ಸ್ಕೂಲ್‌ ನಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಸುದೀರ್ಘ‌ ಅವಧಿಯಿಂದ ಸೇನೆಯಲ್ಲಿ ಸೇವೆ ಸಲ್ಲಿಸಲು ತನ್ನ ಕುಟುಂಬದ ಪ್ರೋತ್ಸಾಹ ಅನನ್ಯ ಎನ್ನುತ್ತಾರೆ ಬಾಲಕೃಷ್ಣ ರೈ.

ರೋಮಾಂಚಕ ಅನುಭವಗಳು..
1993ರಲ್ಲಿ ಶ್ರೀನಗರದ ಬಾರಾಮುಲ್ಲಾ ಪ್ರದೇಶದಲ್ಲಿ ನಡೆದ ಉಗ್ರಗಾಮಿಗಳ ಜತೆಗಿನ ಕಾದಾಟದ ನೆನಪು ಇಂದಿಗೂ ರೋಮಾಂಚನಗೊಳಿಸುತ್ತದೆ. ನಮ್ಮ ತಂಡದಲ್ಲಿ 8 ಮಂದಿ ಇದ್ದೆವು. ಸಾಗುತ್ತಿದ್ದ ನಮ್ಮ ವಾಹನವನ್ನು ಹಠಾತ್ತನೆ ನಾಲ್ಕೂ ದಿಕ್ಕುಗಳಿಂದ ಉಗ್ರಗಾಮಿಗಳು ಸುತ್ತುವರಿದರು. ಏನಾಗುತ್ತಿದೆ ಎಂದೇ ತಿಳಿಯಲಿಲ್ಲ. ಏಕಾಏಕಿ ಉಗ್ರರು ನಮ್ಮ ಮೇಲೆ ಯದ್ವಾತದ್ವಾ ಗುಂಡು ಹಾರಿಸಲಾರಂಭಿಸಿದರು. ನಾವು ಧೈರ್ಯಗೆಡಲಿಲ್ಲ. ಅರೆ ಕ್ಷಣದಲ್ಲಿ ನಾವೂ ಪ್ರತಿ ಉತ್ತರ ಕೊಟ್ಟೆವು. ನಿರಂತರ ಪ್ರತಿದಾಳಿ ನಡೆಸಿದ ಮೇಲೆ ಉಗ್ರರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದೆವು. ಆದರೆ ನಮ್ಮ ತಂಡದ ಇಬ್ಬರು ಯೋಧರು ಹುತಾತ್ಮರಾದರು. ಇಂಥ ಸಂದರ್ಭಗಳು ಅನೇಕ ಎನ್ನುತ್ತಾರೆ ಬಾಲಕೃಷ್ಣ ರೈ ಅವರು.

ಸಮುದ್ರಮಟ್ಟದಿಂದ 18 ಸಾವಿರ ಅಡಿ ಎತ್ತರದ ಕಾರ್ಗಿಲ್‌ನಲ್ಲಿ -30 ಡಿಗ್ರಿ ಸೆಲ್ಸಿಯಸ್‌ ಚಳಿಯಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ವಿದೇಶ ಸೇವೆಯ ಅವಧಿಯಲ್ಲಿನ ಲೆಬನಾನ್‌ ದೇಶದಲ್ಲಿನ ಸೇವೆಯಂತೂ ಮರೆಯಲಾಗದ್ದು ಎನ್ನುತ್ತಾರೆ ಬಾಲಕೃಷ್ಣ ರೈ.

ವಿಶ್ವ ಸಂಸ್ಥೆ  ಪದಕ
ಬಾಲಕೃಷ್ಣ ರೈ ಅವರಿಗೆ 2000ನೇ ಇಸವಿಯಲ್ಲಿ United Nation’s Medal for distinguished service in UNIFIL, Lebanon, 2002ನೇ ಇಸವಿಯಲ್ಲಿ Vice chief of Army Staff Commendation, 2007 ನೇ  ಇಸವಿಯಲ್ಲಿ Chief of the Army Staff Commendation ಮುಂತಾದ ಗೌರವ ಪುರಸ್ಕಾರಗಳು ಲಭಿಸಿವೆ.

ಯುವಕರು ಸೇನೆಗೆ ಸೇರಲು ಮನಸ್ಸು ಮಾಡಬೇಕು..
ದೇಶಕ್ಕಾಗಿ ಸೇವೆ ಮಾಡುವ ತುಡಿತ ಪ್ರತಿಯೊಬ್ಬ ಯುವಕರಲ್ಲಿರಬೇಕು. ಹೊಟ್ಟೆ ಹೊರೆಯಲು ಸಾಕಷ್ಟು ಉದ್ಯೋಗಗಳಿವೆ. ಸೇನೆಯಲ್ಲಿ ಕೆಲಸ ಮಾಡುವುದು ಕೇವಲ ಉದ್ಯೋಗವಲ್ಲ. ಅದೊಂದು ದೇಶ ಸೇವೆಯ ಅವಕಾಶ. ಹಿಂದಿನ ಕಾಲಕ್ಕೆ ಹೋಲಿಸಿದರೆ ಇಂದು ಸೇನೆಯಲ್ಲಿರುವವರಿಗೆ ಉತ್ತಮ ವೇತನ ಮತ್ತು ಒಳ್ಳೆಯ ಸವಲತ್ತುಗಳಿವೆ. ಆದರೆ ನಮ್ಮ ಜಿಲ್ಲೆಯಿಂದ ಸೇನೆಗೆ ಸೇರಲು ಮನಸ್ಸು ಮಾಡುವವರು ತುಂಬಾ ಕಡಿಮೆ. ಈ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ಸೇನೆಗೆ ಸೇರುವ ಬಗ್ಗೆ ಯುವಜನರಿಗೆ ತಿಳಿ ಹೇಳುವ, ಪ್ರೇರಣೆ ನೀಡುವ ಕಾರ್ಯಕ್ರಮ ನಡೆಯಬೇಕು.
– ಬಾಲಕೃಷ್ಣ ರೈ,
ಸುಬೇದಾರ್‌ ಮೇಜರ್‌

ಅಣ್ಣನ ದೇಶಸೇವೆ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ಆತ ಸೇನೆಗೆ ಸೇರುವ ವೇಳೆಯಲ್ಲಿ ಇಂದಿನಂತೆ ಸಂವಹನ ವ್ಯವಸ್ಥೆಗಳು ಇರಲಿಲ್ಲ. ಯುದ್ಧ ಭೀತಿಯ ವಿಚಾರಗಳು ಬಂದಾಗ ಮನೆಯಲ್ಲಿ ಹೆತ್ತವರು ಸಹಿತ ನಮಗೆಲ್ಲರಿಗೂ ಆತಂಕವಾಗುತ್ತಿತ್ತು. ಆದರೆ ಆತ ಎಂದಿಗೂ ಸೈನ್ಯದಲ್ಲಿನ ಕಷ್ಟಗಳ ಕುರಿತು ನಮ್ಮಲ್ಲಿ ಹೇಳಿಕೊಂಡದ್ದಿಲ್ಲ. ಸೈನಿಕನ ಮನೆಯವರು ಎನ್ನುವ ಗೌರವ ಆತನಿಂದಾಗಿ ನಮಗೆ ಸಿಕ್ಕಿದೆ.
-ವಿಶ್ವನಾಥ ರೈ, ಸಹೋದರ

ನಾಗರಾಜ್‌ ಎನ್‌.ಕೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next