ವಿಜಯಪುರ: ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿ, ಬಿಎಸ್ ವೈ ವಿರೋಧಿ ಬಣದಲ್ಲಿ ಪ್ರಮುಖರಾಗಿ ಕಾಣಿಸಿಕೊಂಡಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಮತ್ತೆ ಹೊಸ ಬಾಂಬ್ ಸಿಡಿಸಿದ್ದಾರೆ. ತನಗೆ ಸಿಎಂ ಪಟ್ಟ ತಪ್ಪಲು ಯಡಿಯೂರಪ್ಪ ಅವರೇ ಕಾರಣ ಎಂದಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ನನಗೆ ಮುಖ್ಯಮಂತ್ರಿ ಪಟ್ಟಕ್ಕೇರುವ ಅವಕಾಶವಿತ್ತು. ಆದರೆ ನನಗೆ ಸಿಎಂ ಸ್ಥಾನ ನೀಡಿದರೆ ಮೂರೇ ತಿಂಗಳಲ್ಲಿ ಸರ್ಕಾರವನ್ನು ಬೀಳಿಸುತ್ತೇನೆ ಎಂದು ಯಡಿಯೂರಪ್ಪ ಕೇಂದ್ರದ ನಾಯಕರಿಗೆ ಬೆದರಿಕೆ ಹಾಕಿದ್ದರು. ಹೀಗಾಗಿ ನನಗೆ ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿ ಹೋಯಿತು ಎಂದು ಹೇಳಿದರು.
ಇದನ್ನೂ ಓದಿ:ಬೊಮ್ಮಲಾಪುರಕ್ಕೆ ಬಿಎಸ್ ಯಡಿಯೂರಪ್ಪ ಭೇಟಿ: ರವಿ ಕುಟುಂಬಕ್ಕೆ 5 ಲಕ್ಷ ರೂ. ನೆರವು
ಒಂದು ವೇಳೆ ನಾನು ಮುಖ್ಯಮಂತ್ರಿಯಾದರೆ ಆದರೆ ಇವರೆಲ್ಲಾ ಜೈಲಿಗೆ ಹೋಗುತ್ತಾರೆಂಬ ಭಯವಿದೆ. ಮಾಜಿ ಸಿಎಂ ಯಡಿಯೂರಪ್ಪ 10 ಸಾವಿರ ಕೋಟಿ ಭ್ರಷ್ಟಾಚಾರವನ್ನು ಮಾಡಿದ್ದಾರೆ ಎಂದು ಯತ್ನಾಳ್ ಆರೋಪಿಸಿದರು.
ಯಡಿಯೂರಪ್ಪ ತಾವು ಶಿಕಾರಿಪುರದ ಸಿಎಂ ಎಂಬಂತೆ ವರ್ತಿಸಿದರು. ತಮ್ಮ ಭಾಗಕ್ಕೇ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಕೊಂಡಿದ್ದಾರೆ. ಈಗ ಜಿಲ್ಲೆಗಳ ಪ್ರವಾಸಕ್ಕೆ ಬರುತ್ತೇನೆಂದು ಹೇಳುತ್ತಿದ್ದಾರೆ. ಯಡಿಯೂರಪ್ಪ ವಿಜಯಪುರ ಜಿಲ್ಲೆಗೆ ಬರಲಿ ನಾನೇ ಈ ಕುರಿತು ಪ್ರಶ್ನೆ ಮಾಡುತ್ತೇನೆ. ನನ್ನ ಬಗ್ಗೆ ಯಡಿಯೂರಪ್ಪ ಅವರಿಗೆ ಭಯ ಇದೆ ಎಂದು ಹೇಳಿದರು.
ಈಗ ಸಚಿವ ಸ್ಥಾನಕ್ಕಾಗಿ ನಾನು ಲಾಬಿ ನಡೆಸುವುದಿಲ್ಲ. ಮಂತ್ರಿಗಿರಿಗಾಗಿ ದೆಗಲಿಗೆ ಹೋಗಿ ಲಾಬಿ ಮಾಡುವಷ್ಟು ಕೆಳಮಟ್ಟದ ರಾಜಕಾರಣಿ ನಾನಲ್ಲ. ಹಿಂದೆ ಕೇಂದ್ರ ಸಚಿವನಾದಾಗಲೂ ನಾನು ಲಾಬಿ ನಡೆಸಿರಲಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಇದನ್ನೂ ಓದಿ:ದೆಹಲಿಗೆ ತೆರಳಿದ ಸಿಎಂ ಬೊಮ್ಮಾಯಿ: ಇವತ್ತೇ ಫೈನಲ್ ಆಗುತ್ತಾ ಸಚಿವ ಸಂಪುಟ?