ಮಂಡ್ಯ : ಸರ್ಕಾರದ ಸೂಚನೆ ಮೇರೆಗೆ 24/7 ಮಾದರಿಯಲ್ಲಿ ಎಲ್ಲಾ ಅಧಿಕಾರಿಗಳು ಗಣಿಗಾರಿಕೆ ವಿರುದ್ಧ ಕೆಲಸ ಮಾಡಬೇಕು. ಅಕ್ರಮ ಗಣಿಗಾರಿಕೆ ಸಂಬಂದ ಯಾವುದೇ ಮುಲಾಜಿಗೆ ಒಳಗಾಗದೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗುವಂತೆ ಅಧಿಕಾರಿಗಳಿಗೆ ಎಸಿ ಶಿವಾನಂದಮೂರ್ತಿ ಸೂಚನೆ ನೀಡಿದರು.
ಜಿಲ್ಲೆ ಪಾಂಡವಪುರ ಜನನಪಟ್ಟಣದ ಅಂಬೇಡ್ಕರ್ ಭವನದಲ್ಲಿ ಟಾಸ್ಕ್ ಪೋರ್ಸ್ ಸಭೆಯಲ್ಲಿ ಅಧಿಕಾರಿಗಳಿಗೆ ಕಟ್ಟಾಜ್ಞೆ ಹೊರಡಿಸಿದ ಎಸಿ ಶಿವಾನಂದಮೂರ್ತಿ.
ಸರ್ಕಾರ ಅನುಮತಿ ನೀಡುವವರೆಗೂ ಯಾವುದೇ ಗಣಿಗಾರಿಕೆಗೆ ಅವಕಾಶ ಇಲ್ಲ. ಪೋಲೀಸ್ ಸಿಬ್ಬಂದಿ ಗಸ್ತಿನೊಂದಿಗೆ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಎಷ್ಟೇ ಪ್ರಭಾವಿಶಾಲಿಗಳಿರಲಿ ಗಣಿ ಸಂಬಂಧ ಕಾರ್ಯಾಚರಣೆ ವೇಳೆ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸುವ ಮಂದಿ ವಿರುದ್ಧ ಕೇಸು ದಾಖಲಿಸಿ. ಚೆಕ್ ಪೋಸ್ಟ್ ನಲ್ಲಿ ಎಲ್ಲ ವಾಹನಗಳನ್ನು ತಪಾಸಣೆ ಮಾಡಿ ಅಗತ್ಯ ದಾಖಲಾತಿ ಪರಿಶೀಲಿಸಬೇಕು. ಯಾರದೇ ದಯೆ, ದಾಕ್ಷಿಣ್ಯಕ್ಕೆ ಒಳಗಾಗದೆ ಅಧಿಕಾರಿಗಳು ಕಟ್ಟುನಿಟ್ಟಿನ ಕೆಲಸ ಮಾಡುವಂತೆ ತಾಕೀತು ಮಾಡಿದರು.
ಇದನ್ನೂ ಓದಿ :ಎಲ್ಲರಿಗೂ ಸಚಿವರಾಗಲು ಸಾಧ್ಯವಿಲ್ಲ, ಸಮತೋಲಿತ ಸಂಪುಟ ರಚನೆ ಮಾಡುತ್ತೇವೆ: ಬೊಮ್ಮಾಯಿ
ಅಧಿಕಾರಿಗಳು ಗಣಿಗಾರಿಕೆ ವಿಚಾರದಲ್ಲಿ ಕಚ್ಚಾ ವಸ್ತುಗಳನ್ನು ಎಲ್ಲಿಂದ ತರುತ್ತಿದ್ದಾರೆಂಬ ಬಗ್ಗೆ ತಪಾಸಣೆ ಮಾಡಬೇಕು. ತಹಸೀಲ್ದಾರ್ ಗಮನಕ್ಕೆ ತಕ್ಷಣ ತರಬೇಕು. ಯಾವ ಸಬೂಬು ಕೇಳಲಾಗದು, ತಪ್ಪಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕರ್ತವ್ಯ ಲೋಪವೆಸಗಿದರೆ ತಹಸೀಲ್ದಾರ್ ಮೇಲೂ ಕ್ರಮ ಕೈಗೊಳ್ಳಬೇಕಾದೀತು ಎಂದು ಎಚ್ಚರಿಸಿದ ಎಸಿ.
ಸಭೆಯಲ್ಲಿ ತಹಸೀಲ್ದಾರ್ ಪ್ರಮೋದ್ ಎಲ್.ಪಾಟೀಲ್, ಗಣಿ ಅಧಿಕಾರಿಗಳಾದ ಪ್ರವೀಣ್, ಉದಯರವಿ, ಪೊಲೀಸ್ ಇನ್ಸ್ ಪೆಕ್ಟರ್ ಕೆ.ಪ್ರಭಾಕರ್ ಇತರರಿದ್ದರು.