Advertisement

ಕಣ್ಣು ಕಣ್ಣು ಕಲೆತಾಗ…ಐಲೈನರ್‌ನಿಂದ ಲೈನ್‌ ಹೊಡೀರಿ!

07:45 AM Sep 13, 2017 | Harsha Rao |

“ಹೆಣ್ಣಿನ ಸೌಂದರ್ಯ ಕಣ್ಣಲ್ಲಿ’ ಎಂಬ ಮಾತಿದೆ. ಕಂಗಳನ್ನು ಕಾಪಾಡಿಕೊಳ್ಳಲು ಉಪಯೋಗವಾಗುವ ಅಲಂಕಾರಿಕ ವಸ್ತುಗಳಲ್ಲಿ ಕಾಜಲ್‌ ಅಥವಾ ಕಾಡಿಗೆಗೆ ಅಗ್ರಸ್ಥಾನ. ಶತಮಾನಗಳಿಂದಲೂ ಬಳಕೆಯಲ್ಲಿರುವ ಕಾಜಲ್‌ ಈಗ ಅನೇಕ ವಿಧಗಳ ರೂಪಾಂತರವನ್ನು ಪಡೆದಿವೆ.

Advertisement

ಹುಡುಗಿಯೊಬ್ಬಳು ಡಲ್‌ ಆಗಿ ಕಾಣುತ್ತಿದ್ದರೆ ಒಂದೋ ಆಕೆಗೆ ಹುಷಾರಿಲ್ಲ ಅಥವಾ ಆಕೆ ಕಣ್ಣಿಗೆ ಕಾಜಲ್‌ ಹಚ್ಚೋಕೆ ಮರೆತಿದ್ದಾಳೆ ಅಂತ ಅರ್ಥ. ಅಂಥ ಅವಿನಾಭಾವ ಸಂಬಂಧ ಹೆಣ್ಮಕ್ಕಳಿಗೂ ಕಾಜಲ್‌ಗ‌ೂ. ಹೆಣ್ಣುಮಕ್ಕಳು ತಮ್ಮ ಬ್ಯಾಗ್‌ನಲ್ಲಿ ಅಥವಾ ಪರ್ಸಿನಲ್ಲಿ ಇಟ್ಟುಕೊಂಡಿರಲೇಬೇಕಾದ ಅಲಂಕಾರಿಕ ವಸ್ತುಗಳಲ್ಲಿ ಕಾಜಲ್‌ ಪ್ರಮುಖವಾದುದು. ಅದಿಲ್ಲದೆ ಮೇಕಪ್‌ ಯಾವತ್ತಿಗೂ ಅಪೂರ್ಣ. ಮಿಕ್ಕ ಯಾವುದೇ ಅಲಂಕಾರಿಕ ಸಾಮಗ್ರಿಗಳಿಲ್ಲದಿದ್ದರೂ ಪರವಾಗಿಲ್ಲ, ಕಾಜಲ್‌ ಒಂದಿದ್ದರೆ ಸಾಕು. ಲುಕ್ಕೇ ಬದಲಾಗುತ್ತದೆ. 

ಹಿಂದಿನವರು ಕಣ್ಣಿನ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಕಾಡಿಗೆ ಹಚ್ಚುತ್ತಿದ್ದರು. ಮನೆಯಲ್ಲಿಯೇ ಕಾಡಿಗೆಯನ್ನು ತಯಾರಿಸುವುದು ಅವರಿಗೆ ಗೊತ್ತಿತ್ತು. ಆದರೆ ಈಗ ಕಾಡಿಗೆ ಅಥವಾ ಕಾಜಲ್‌ ಅನ್ನೋದು ಮೇಕಪ್‌ನ ಭಾಗವಾಗಿದೆ. ಅಲ್ಲದೆ ಕಾಡಿಗೆ ಅಂದರೆ ಕಪ್ಪು ಅಂತ ಇದ್ದಿದ್ದು ಈಗ ಬದಲಾಗಿದೆ. ನಾನಾ ಬಣ್ಣದ ಕಾಡಿಗೆಗಳು ಮಾರುಕಟ್ಟೆಯಲ್ಲಿ ಲಭ್ಯ. ಗ್ರೀನ್‌, ಬ್ಲೂ, ಪರ್ಪಲ್‌, ರೆಡ್‌, ಯೆಲ್ಲೋ, ಆರೆಂಜ್‌, ಬ್ಲಾÂಕ್‌, ಬ್ರೌನ್‌ ಮುಂತಾದ ಆಯ್ಕೆಗಳು ಹೆಣ್ಮಕ್ಕಳ ಮುಂದಿವೆ.

ಕಾಜಲ್‌ ಇತಿಹಾಸ:
ಕಾಜಲ್‌ ಅಥವಾ ಕಾಡಿಗೆ ಜಗತ್ತಿಗೆ ಪರಿಚಯವಾಗಿದ್ದು ಈಜಿಪ್ಟ್ನವರಿಂದ. ಅಲ್ಲಿ ಗಂಡಸರೂ ಕಾಡಿಗೆ ಬಳಸುತ್ತಿದ್ದರು. ಚೆನ್ನಾಗಿ ಕಾಣಲು ಮಾತ್ರವೇ ಅಲ್ಲ, ಕಾಡಿಗೆ ಅವರನ್ನು ಸೂರ್ಯನ ಶಾಖ, ಮರಳಿನ ಕಣ ಕಣ್ಣಿನೊಳಗೆ ಸೇರುವುದರಿಂದ ರಕ್ಷಣೆ ಒದಗಿಸುತ್ತಿತ್ತು. ಈಗಾದರೆ ಕೈಯಿಂದ ಹಚ್ಚುವ ಕಾಡಿಗೆಯಿಂದ ಹಿಡಿದು, ಐ ಪೆನ್ಸಿಲ್‌, ಜೆಲ್‌, ಲಿಕ್ವಿಡ್‌ ಐ ಲೈನರ್‌, ಐ ಲೈನರ್‌ ಬ್ರಶ್‌ಗಳು ಲಭ್ಯ. 

ಕಾಡಿಗೆ ಕೂಡ ಐಲೈನರ್‌ ವರ್ಗಕ್ಕೆ ಸೇರುತ್ತದೆ. ಈಗಂತೂ ಮಾರುಕಟ್ಟೆಯಲ್ಲಿ ಹಲವು ವಿಧಗಳ ಐಲೈನರ್‌ಗಳು ಬಂದಿವೆ.

Advertisement

ಲಿಕ್ವಿಡ್‌ ಐಲೈನರ್‌
ಇದನ್ನು ಬಳಸುವಾಗ ತುಂಬಾ ಎಚ್ಚರಿಕೆ ಮತ್ತು ಏಕಾಗ್ರತೆ ಅಗತ್ಯ. ಕೈಗಳು ಒಂಚೂರು ಅಲುಗಾಡಿದರೂ ಕೆಲಸ ಹಾಳಾಗಿಬಿಡುತ್ತದೆ. ಗೆರೆ ಬಿಡಿಸುವಾಗ ಹೆಚ್ಚು ಕಮ್ಮಿಯಾಗಿಬಿಟ್ಟರೆ ಅದನ್ನು ಅಳಿಸಲು ತುಂಬಾ ಕಷ್ಟ ಪಡಬೇಕಾಗುತ್ತದೆ. ಆದರೆ ಒಮ್ಮೆ ಸರಿಯಾಗಿ ಹಾಕಿಬಿಟ್ಟಿರೆಂದರೆ ಆ ದಿನ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುವುದು ಖಂಡಿತ. ಅಷ್ಟು ಆಕರ್ಷಣೆ ಇದರಿಂದ ದೊರೆಯುವುದು. ಇದು ಕ್ಯಾಷುವಲ್‌ ದಿರಿಸುಗಳಿಗೆ ಸರಿಹೊಂದುವುದಿಲ್ಲ. ವಿಶೇಷ ಸಮಾರಂಭಗಳಿಗೆಂದು ಅದ್ಧೂರಿಯಾಗಿ ಹೊರಟಾಗ ಖಂಡಿತ ಲಿಕ್ವಿಡ್‌ ಐಲೈನರ್‌ ಸಾಥ್‌ ನೀಡುತ್ತದೆ.

ಜೆಲ್‌ ಐಲೈನರ್‌
ಗಾಢವಾದ ಬಣ್ಣಕ್ಕಾಗಿ ಜೆಲ್‌ ಐಲೈನರ್‌ಅನ್ನು ಬಳಸಬಹುದು. ಸ್ವಲ್ಪ ಹೆಚ್ಚಿಗೆ ಹಚ್ಚಿದರೂ ಕಣ್ಣಿನ ಅಂದ ಹಾಳಾಗುವುದರಿಂದ ಮಿತವಾಗಿ ಅಪ್ಲೆ„ ಮಾಡಬೇಕು. ಹಚ್ಚಿದ್ದು ಸ್ವಲ್ಪ ಜಾಸ್ತಿಯಾದರೆ ಅದನ್ನು ಉಳಿದ ಕಡೆಗೆ ಎಚ್ಚರಿಕೆಯಿಂದ ಸ್ಪ್ರೆಡ್‌ ಮಾಡಬಹುದು. ಈ ನಿಯಂತ್ರಣ ಸಾಧ್ಯವಾದಲ್ಲಿ ಜೆಲ್‌ ಐಲೈನರ್‌ ಬಳಸಿ ನಾನಾ ಪ್ರಯೋಗಗಳನ್ನೂ ಮಾಡಬಹುದು. ಉದಾಹರಣೆಗೆ ಬೆಕ್ಕಿನ ಕಣ್ಣಿನ ವಿನ್ಯಾಸವನ್ನು ಸೃಷ್ಟಿಸಬಹುದು. 

ಶ್ಯಾಡೋ ಐಲೈನರ್‌
ಇದನ್ನು ಮನೆಯಲ್ಲಿಯೇ ತಯಾರಿಸಿಕೊಂಡು ಹಚ್ಚಬೇಕು. ತೆಳುವಾದ ಬ್ರಶ್‌ಅನ್ನು ಐ ಶ್ಯಾಡೋ ಪೌಡರ್‌ನಲ್ಲಿ ಆಡಿಸಿ ಹುಬ್ಬಿನ ಕೆಳಗೆ ರೆಪ್ಪೆಗಳ ಮೇಲೆ ಹಿತವಾಗಿ ಅಪ್ಲೆ„ ಮಾಡಬೇಕು. ಈ ಪ್ರಯೋಗವನ್ನು ವಾಟರ್‌ಲೈನಿಂಗ್‌ ಭಾಗದ ಮೇಲೆ ಹಾಕಬಾರದು. ತೇವಗೊಂಡರೆ ಬಣ್ಣ ಕಿತ್ತುಕೊಂಡು ಶ್ಯಾಡೋ ಎಫೆಕ್ಟ್ ಹಾಳಾಗುತ್ತದೆ.

ಲೈನ್‌ ಹೊಡೆಯೋದು ಹೇಗೆ?
ಮೊದಲು ಕನ್ನಡಿ, ಪೆನ್ಸಿಲ್‌ ಐಲೈನರ್‌, ಮೇಕಪ್‌ ರಿಮೂವರ್‌- ಇವು ಮೂರನ್ನು ಪಕ್ಕದಲ್ಲಿ ಇಟ್ಟುಕೊಳ್ಳಿ.

1.ಸರಿಯಾಗಿ ಕುಳಿತುಕೊಳ್ಳಿ
ಕನ್ನಡಿ ಮುಂದೆ ಕುಳಿತುಕೊಳ್ಳುವಾಗ ಐಲೈನರ್‌ ಹಚ್ಚಲು ಸುಲಭವಾಗುವ ಭಂಗಿಯಲ್ಲಿ ಕುಳಿತುಕೊಳ್ಳಿ. ಇದರಿಂದ ಏಕಾಗ್ರತೆ ಸಾದ್ಯವಾಗುವುದು. ಕೈ ಅಡ್ಡ ಬರುವಂತೆ, ಅಥವಾ ನೆರಳು ಅಡ್ಡ ಬರುವಂತೆ ಕುಳಿತರೆ ಏಕಾಗ್ರತೆ ತಪ್ಪುವುದು ಸಹಜ.

2. ಐಲೈನರ್‌ ಹಚ್ಚುವಾಗ ಎರಡು ವಿಧಗಳನ್ನು ಅನುಸರಿಸಬಹುದು. ರೆಪ್ಪೆ ಮೇಲೆ ಗೆರೆ ಎಳೆಯುವಾಗ ತಪ್ಪಾಗಬಹುದು ಎಂಬ ಭಯವಿದ್ದರೆ ಮೊದಲು ಚುಕ್ಕೆಗಳನ್ನು ಇಟ್ಟು ನಂತರ ಅವುಗಳನ್ನು ಜೋಡಿಸುತ್ತಾ ಹೋಗಬಹುದು. ಇನ್ನೊಂದು ವಿಧವೆಂದರೆ ಮಧ್ಯದಿಂದ ಪ್ರಾರಂಭಿಸಿ ಹೊರಭಾಗದ ತನಕ ತೀಡಿ. ಆಮೇಲೆ ಮಧ್ಯದಿಂದ ಪ್ರಾರಂಭಿಸಿ ಒಳಭಾಗದ ಕಡೆಗೆ ಮೆತ್ತಗೆ ತೀಡಿ. 

3. ನಂತರ ಕನ್ನಡಿಯಲ್ಲಿ ನೋಡಿಕೊಳ್ಳಿ. ರೆಪ್ಪೆಗೂದಲ ಮೇಲೆ ಒಂದು ತೆಳುವಾದ ಲೈನ್‌ನಿಂದಾಗಿ ಖಾಲಿ ಖಾಲಿ ಎನ್ನಿಸುತ್ತದೆ. ಅದನ್ನು ಹೋಗಲಾಡಿಸಲು ಮೇಲಿನ ರೆಪೆಗೂದಲು ಮತ್ತು ಕೆಳಗಿನ ರೆಪ್ಪೆಗೂದಲೆರಡನ್ನೂ ಐಲೈನರ್‌ನಿಂದ ತೀಡಬೇಕು. ಕೆಲವರು ಮೇಲಿನ ಅಥವಾ ಕೆಳಗಿನ ರೆಪ್ಪೆಗೂದಲಿಗೆ ಮಾತ್ರ ಹಚ್ಚುವುದನ್ನು ಇಷ್ಟಪಡುತ್ತಾರೆ. ಆಯ್ಕೆ ನಿಮ್ಮದು.

-ಮೇಘಾ ಗೊರವರ

Advertisement

Udayavani is now on Telegram. Click here to join our channel and stay updated with the latest news.

Next