Advertisement
ಟಿ - ಶರ್ಟ್ ಮೇಲೆ ಸ್ಲೋಗನ್, ಅಂದರೆ ಘೋಷ ವಾಕ್ಯ ಇರುವುದು ಹೊಸತೇನಲ್ಲ. ಅಕ್ಷರ, ಪದ, ವಾಕ್ಯಗಳನ್ನು ಒಳಗೊಂಡ ಟಿ-ಶರ್ಟ್‌ಗಳನ್ನು ನೀವು ಖಂಡಿತ ನೋಡಿರುತ್ತೀರ. ಆದರೀಗ, ಈ ಟ್ರೆಂಟ್ ಎಷ್ಟು ಸುದ್ದಿಯಲ್ಲಿದೆ ಅಂದರೆ, ಶರ್ಟ್ ಅಥವಾ ಟಿ-ಶರ್ಟ್‌ಗಷ್ಟೇ ಸೀಮಿತವಾಗದೆ ಹುಡಿ, ಸ್ವೆಟರ್, ಜಾಕೆಟ್, ಡ್ರೆಸ್, ಜಂಪ್ ಸೂಟ್, ಡಂಗ್ರಿ, ಕೋಟ್, ಕ್ರಾಪ್ ಟಾಪ್ ಹಾಗು ಕುರ್ತಾಗಳ ಮೇಲೂ ಸ್ಲೋಗನ್‌ಗಳು ಕಾಣಿಸಿಕೊಳ್ಳುತ್ತಿವೆ!
ಬಟ್ಟೆಯ ಮೇಲೆ ಬರೆದಿರುವ ಸ್ಲೋಗನ್ ಎಲ್ಲರ ಕಣ್ ಸೆಳೆಯುವಂತೆ ಇರಬೇಕು ಎಂಬ ಕಾರಣದಿಂದ, ಉಡುಗೆಯ ಮಟೀರಿಯಲ್ (ಬಟ್ಟೆ) ಬಗ್ಗೆಯೂ ಜನ ತಲೆ ಕೆಡಿಸಿಕೊಳ್ಳುತ್ತಿಲ್ಲ. ಉಣ್ಣೆಯಾದರೂ ಓಕೆ, ಹತ್ತಿಯಾದರೂ ನೋ ಪ್ರಾಬ್ಲಿಂ, ರೇಶಿಮೆ ಮೇಲಾದರೂ ಸೈ, ಒಟ್ಟಿನಲ್ಲಿ ಚಂದದ ಸ್ಲೋಗನ್ ಬರೆದಿರಬೇಕು ಅಷ್ಟೇ. ಬಟ್ಟೆಯಂತೆ ಬಣ್ಣಕ್ಕೂ ಯಾವ ನಿಯಮವಿಲ್ಲ. ಸ್ಲೋಗನ್ ಎದ್ದು ಕಾಣುವಂತೆ ಇರಬೇಕಷ್ಟೇ. ಸುದ್ದಿಗಳೆಲ್ಲ ಬಟ್ಟೆ ಮೇಲೆ
ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿರುವ ವಿಷಯಗಳು, ಸುದ್ದಿಯಲ್ಲಿರುವ ವಿಷಯ ಅಥವಾ ವಸ್ತುಗಳು, ತಮ್ಮ ವ್ಯಕ್ತಿತ್ವವನ್ನು ಬಿಂಬಿಸುವ ಪದಗಳು, ಹೆಸರು, ಇಷ್ಟದ ತಿನಿಸು, ಊರು, ದೇಶ, ಸಿನಿಮಾ, ನೆಚ್ಚಿನ ನಟ-ನಟಿಯ ಹೆಸರು, ದೇಶ-ಭಾಷೆಯ ಮೇಲಿನ ಪ್ರೇಮ, ಹೀಗೆ ಊಹಿಸಲು ಸಾಧ್ಯವಾಗದಷ್ಟು ವಿಷಯಗಳು, ಬಟ್ಟೆ ಮೇಲಿನ ಬರಹಕ್ಕೆ ವಸ್ತುವಾಗಬಹುದು. ಈ ಕ್ರೇಜ್‌ಗೆ ಲಿಂಗ/ವಯಸ್ಸಿನ ಭೇದವಿಲ್ಲದೆ, ಜನರು ಮಾರು ಹೋಗಿದ್ದಾರೆ. ಶಾಲೆ-ಕಾಲೇಜು ಮಕ್ಕಳಷ್ಟೇ ಅಲ್ಲ, ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳೆಲ್ಲ ಒಟ್ಟಾಗಿ ಒಂದೇ ರೀತಿಯ ಬರಹ ಇರುವ ವಸ್ತ್ರಗಳನ್ನು ಧರಿಸುತ್ತಿದ್ದಾರೆ. ಅಷ್ಟೇ ಯಾಕೆ, ವಯಸ್ಸಾದವರೂ “ಕ್ರೇಝಿ ಬರಹ’ ಇರುವ ಬಟ್ಟೆ ತೊಟ್ಟು, ತಾವಿನ್ನೂ ಯಂಗ್ ಅಂತ ಸಾರಿ ಹೇಳುತ್ತಿದ್ದಾರೆ. ಕನ್ನಡ ರಾಜ್ಯೋತ್ಸವದ ಸಮಯದಲ್ಲಿ, ಕನ್ನಡ ಪ್ರೇಮ ಸಾರುವ ಅಂಗಿ ಧರಿಸಿ, ಫ್ಯಾಷನ್ ಜೊತೆಗೆ, ಭಾಷಾಪ್ರೇಮ ಮೆರೆಯುವವರೂ ಇದ್ದಾರೆ.
Related Articles
ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ್ ರಾಯ್ ಅವರ “ಸೈಮನ್ ಗೋ ಬ್ಯಾಕ್’ ಎಂಬ ಘೋಷ ವಾಕ್ಯವೂ ಈಗ ಫ್ಯಾಷನ್ ಸ್ಟೇಟ್‌ಮೆಂಟ್. ಅಷ್ಟೇ ಯಾಕೆ, “ಮಾಡು ಇಲ್ಲವೆ ಮಡಿ’, “ಜೈ ಹಿಂದ್’, “ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು’, “ಕಾಯಕವೇ ಕೈಲಾಸ’ದಂಥ ಸಾಲುಗಳು ಕೂಡಾ ಫ್ಯಾಷನ್‌ಪ್ರಿಯರ ಮನ ಗೆದ್ದಿವೆ.
Advertisement
ಸಾಮಾಜಿಕ ಜಾಲತಾಣಗಳಲ್ಲಿ ವಿಷಯವೊಂದು ಟ್ರೆಂಡ್ ಆಗಲು ಜೊತೆಗೆ ಹ್ಯಾಷ್‌ಟ್ಯಾಗ್ (#)ಲಗತ್ತಿಸುತ್ತಾರೆ. ಆ ಹ್ಯಾಷ್ ಟ್ಯಾಗ್ ಉಳ್ಳ ಪದಗಳನ್ನೂ ದಿರಿಸಿನ ಮೇಲೆ ಬರೆಸಿಕೊಂಡು ಓಡಾಡುವರಿದ್ದಾರೆ. ಉದಾಹರಣೆಗೆ – #ILoveIndia, #Mental HealthIsImportant,#MyMomIsTheBest, #NaariShakti, ಎಂದೆಲ್ಲಾ ಬರೆಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಈ ರೀತಿಯ ವಾಕ್ಯಗಳು ಇರುವ ವಸ್ತ್ರಗಳನ್ನು ಆನ್‌ಲೈನ್ ಮೂಲಕ ಖರೀದಿಸಬಹುದು. ಡೈಲಾಗ್ ಟ್ರೆಂಡ್
ಸಿನಿಮಾ ಡೈಲಾಗ್ ಕೂಡ ಈ ಸ್ಟೈಲ್ ಟ್ರೆಂಡ್ ಆಗಲು ಕೊಡುಗೆ ನೀಡಿವೆ. ಬೋಡ ಶೀರ?, ಸಲಾಂ ರಾಕಿ ಭಾಯ್, ಐಯಾಂ ಗಾಡ್, ಗಾಡ್ ಈಸ್ ಗ್ರೇಟ್, ಐ ಲೈಕ್ ಇಟ್, ಜಂಗಲ್ ಮೇ ಸಿಂಗಲ್ ಶೇರ್, ಧಮ್ ಬೆಕೋಲೆ, ಹೌಲ ಹೌಲ, ಟಗರು ಬಂತು ಟಗರು, ಶಾಂತಂ ಪಾಪಂ… ಹೀಗೆ ಜನರು ತಮ್ಮ ನೆಚ್ಚಿನ ಸಿನಿಮಾದ ಡೈಲಾಗ್ ಅನ್ನು ವಸ್ತ್ರದ ಮೇಲೆ ಮೂಡಿಸಲು ಕಸ್ಟಮೈಸ್ಡ್ ಆಯ್ಕೆಗಳ ಮೊರೆ ಹೋಗುತ್ತಾರೆ.
ಇತ್ತೀಚೆಗಷ್ಟೇ ಬಹಳಷ್ಟು ಸದ್ದು ಮಾಡಿದ “ಹೌದು ಹುಲಿಯ’ ಎಂಬ ವಾಕ್ಯವೂ ಈಗ ಶರ್ಟ್‌ನ ಮೇಲೆ ಕಾಣಿಸಿಕೊಳ್ಳುತ್ತಿದೆ. ಇಂಥ ಟ್ರೆಂಡಿ ವಾಕ್ಯಗಳ ಬಟ್ಟೆಗೆ ಸಾಕಷ್ಟು ಬೇಡಿಕೆ ಇದೆ. ನೀವು, ನಿಮ್ಮಿಷ್ಟ
ನಿಮಗೆ ಬೇಕಾದ ಭಾಷೆಯಲ್ಲಿ, ಬೇಕಾದ ಸ್ಲೋಗನ್‌ಅನ್ನು, ಬೇಕಾದ ಬಣ್ಣ, ವಿನ್ಯಾಸ ಮತ್ತು ಶೈಲಿಯಲ್ಲಿ ಮೂಡಿಸಲು ಆನ್‌ಲೈನ್‌ನಲ್ಲಿ ಆಯ್ಕೆಗಳಿವೆ. ಅದನ್ನು ಬಟ್ಟೆಯ ಮೇಲೆ ಪ್ರಿಂಟ್ ಮಾಡಿಕೊಡುತ್ತಾರೆ. ಆನ್‌ಲೈನ್‌ನಲ್ಲಷ್ಟೇ ಅಲ್ಲ, ಡಿಜಿಟಲ್ ಪ್ರಿಂಟಿಂಗ್ ಔಟ್‌ಲೆಟ್‌ಗಳಲ್ಲಿಯೂ ನಿಮಗೆ ಬೇಕಾದಂತೆ ಸ್ಲೋಗನ್ ಶರ್ಟ್‌ಗಳನ್ನು ಖರೀದಿಸಬಹುದು. ಗೆಳತಿಯರೆಲ್ಲಾ ಒಟ್ಟಾಗಿ…
ಈ ಟ್ರೆಂಡ್ ಅನ್ನು ಮೊದಲೆಲ್ಲ ಹುಡುಗರು ಮಾತ್ರ ಫಾಲೋ ಮಾಡುತ್ತಿದ್ದರು. ಆದರೆ ಈಗ ಹೆಣ್ಮಕ್ಕಳೂ ಸ್ಲೋಗನ್ ಕ್ರೇಜ್‌ಗೆ ಬಿದ್ದಿದ್ದಾರೆ. ಶಾಲೆ-ಕಾಲೇಜು ಡೇ, ಆಫೀಸ್ ಔಟಿಂಗ್, ಸ್ಪಿನ್‌ಸ್ಟರ್ ಪಾರ್ಟಿ (ಮದುಮಗಳಿಗಾಗಿ, ಆಕೆಯ ಗೆಳತಿಯರು ನಡೆಸುವ ಪಾರ್ಟಿ), ಹುಟ್ಟುಹಬ್ಬ ಮುಂತಾದ ಸಂದರ್ಭಗಳಲ್ಲಿ, ತಮಗೆ ಇಷ್ಟವಾದ, ತಮ್ಮ ಸ್ನೇಹವನ್ನು ಸಾರುವಂಥ ಬರಹಗಳನ್ನು ಡ್ರೆಸ್‌ನ ಮೇಲೆ ಮೂಡಿಸಿಕೊಳ್ಳುತ್ತಿದ್ದಾರೆ. ನೀವು ಇದುವರೆಗೂ ಇದನ್ನು ಟ್ರೈ ಮಾಡಿಲ್ಲವಾದರೆ, ಮುಂಬರುವ ಮಹಿಳಾ ದಿನಾಚರಣೆ ದಿನ, ಗೆಳತಿಯರೆಲ್ಲ ಒಟ್ಟಾಗಿ, ನಾರಿ ಶಕ್ತಿಯನ್ನು ಸಾರುವ ಬರಹಗಳನ್ನು ಬಟ್ಟೆ ಮೇಲೆ ಮೂಡಿಸಿಕೊಳ್ಳಿ. ದ್ವಂದ್ವಾರ್ಥ ಬೇಡ…
ಕೆಲವೊಮ್ಮೆ, ಬಟ್ಟೆಯ ಮೇಲೆ ಬರೆದಿರುವ ವಾಕ್ಯಗಳು ನಮ್ಮನ್ನು ಮುಜುಗರಕ್ಕೆ, ನಗೆಪಾಟಲಿಗೆ ಈಡು ಮಾಡಬಹುದು. ಹಾಗಾಗಿ, ಅಶ್ಲೀಲ/ ದ್ವಂದ್ವಾರ್ಥ ಬರುವ ವಾಕ್ಯಗಳನ್ನು ಬರೆಸಿಕೊಳ್ಳಬೇಡಿ. ಬಟ್ಟೆ ಮೇಲೆ ಏನು ಬರೆದಿದೆ ಅಂತ ಕುತೂಹಲಕ್ಕೆ ಕಣ್ಣಾಡಿಸುವವರ ನೋಟಕ್ಕೆ ಮುಜುಗರ ಪಟ್ಟುಕೊಳ್ಳಬೇಡಿ. -ಅದಿತಿಮಾನಸ ಟಿ.ಎಸ್.