Advertisement
ಪಾಶ್ಚಾತ್ಯ ಮತ್ತು ಸಾಂಪ್ರದಾಯಿಕ, ಎರಡೂ ಬಗೆಯ ಉಡುಪುಗಳ ಜೊತೆ ತೊಡಬಹುದಾದ ಆಭರಣಗಳಲ್ಲಿ ಒಂದು, ಮುತ್ತಿನ ಹಾರ. ನಮ್ಮ ಅಜ್ಜಿ, ಮುತ್ತಜ್ಜಿಯರೂ ತೊಡುತ್ತಿದ್ದ ಈ ಸರಳ, ಸುಂದರವಾದ ಒಡವೆ ಇಂದಿಗೂ ಕ್ಲಾಸಿಕ್. ತೊಟ್ಟ ಉಡುಗೆಗೆ ಇನ್ನಷ್ಟು ಮೆರುಗು ನೀಡುವ ಈ ಮುತ್ತಿನಹಾರವನ್ನು ರಾಜಮನೆತನದವರು, ಚಿತ್ರನಟಿಯರು, ರಾಜಕಾರಣಿಗಳು ತೊಟ್ಟಿದ್ದನ್ನು ನೀವು ನೋಡಿರಬಹುದು. ಸರಳ ಉಡುಗೆ ತೊಟ್ಟರೂ, ಮುತ್ತಿನ ಹಾರ ಅದಕ್ಕೆ ರಾಯಲ್ ಲುಕ್ ನೀಡುತ್ತದೆ. ಕೇವಲ ಮಹಿಳೆಯರಿಗಷ್ಟೇ ಸೀಮಿತವಾಗದೆ ಈ ಮುತ್ತಿನ ಹಾರ ಪುರುಷರಲ್ಲೂ ಫೇವರಿಟ್ ಆಗಿದೆ. ಮದುವೆ, ನಿಶ್ಚಿತಾರ್ಥ, ಹಬ್ಬ, ಪೂಜೆ ಮತ್ತು ಇತರ ಸಮಾರಂಭಗಳಿಗೆ ಮುತ್ತಿನ ಹಾರವನ್ನು ತೊಡಬಹುದು. ಸಾಂಪ್ರದಾಯಿಕ ಉಡುಗೆ ಜೊತೆ ಇದು ಚೆನ್ನಾಗಿ ಹೊಂದುತ್ತದೆ.
ಪಾಶ್ಚಾತ್ಯ ಉಡುಗೆ ಜೊತೆ ತೊಡುವುದಾದರೆ, ಮುತ್ತಿನ ಹಾರವನ್ನು ಫಾರ್ಮಲ್ ಸೂಟ್ ಜೊತೆ ತೊಡಬಹುದು. ಜೀನ್ಸ್ ಪ್ಯಾಂಟ್ ಜೊತೆ ಬಿಳಿ ಅಥವಾ ಬೇರೆ ಯಾವುದೇ ಸಾಲಿಡ್ ಕಲರ್ಡ್ (ಒಂದೇ ಬಣ್ಣದ) ಶರ್ಟ್ ತೊಟ್ಟು, ಮುತ್ತಿನ ಹಾರವನ್ನು ಧರಿಸಬಹುದು. ಸಾಲಿಡ್ ಕಲರ್ಡ್ ಬಟ್ಟೆಗಳ ಜೊತೆ ಮುತ್ತಿನ ಹಾರ ತುಂಬಾ ಚೆನ್ನಾಗಿ ಕಾಣಿಸುತ್ತದೆ. ಬಿಳಿ ಅಂಗಿ ಜೊತೆ, ಕಪ್ಪು ಬಣ್ಣದ ಪೆನ್ಸಿಲ್ ಸ್ಕರ್ಟ್ (ಲಂಗ) ತೊಟ್ಟು, ಮುತ್ತಿನ ಹಾರ ಧರಿಸಬಹುದು. ಆಫೀಸ್, ಮೀಟಿಂಗ್, ಪ್ರಶಸ್ತಿ ಪ್ರದಾನ ಅಥವಾ ಇತರ ಫಾರ್ಮಲ್ ಸಮಾರಂಭಗಳಿಗೆ ಅಧಿಕ ಆಕ್ಸೆಸರೀಸ್ ತೊಡಲು ಸಾಧ್ಯವಾಗದೆ ಇರುವ ಕಾರಣ, ಈ ಸಿಂಪಲ್ ಮುತ್ತಿನ ಹಾರ ತೊಡುವುದು ಉತ್ತಮ ಆಯ್ಕೆ. ಪಾರ್ಟಿಗಳಿಗೆ ಲಿಟಲ್ ಬ್ಲಾಕ್ ಡ್ರೆಸ್ ಜೊತೆಯೂ ಈ ಮುತ್ತಿನ ಹಾರ ತೊಡಬಹುದು. ಕೇಶಾಲಂಕಾರಕ್ಕೂ ಮುತ್ತಿನಹಾರ
ಉಂಗುರ, ಓಲೆ, ಬಳೆ, ಬ್ರೇಸ್‌ಲೆಟ್, ಮಾಟಿ, ಡಾಬು, ವಂಕಿ, ಸೊಂಟಪಟ್ಟಿ ಮತ್ತು ಇತರ ಆಭರಣಗಳಲ್ಲೂ ಮುತ್ತುಗಳನ್ನು ಕಾಣಬಹುದು. ಅವುಗಳನ್ನು ಹೆಚ್ಚಾಗಿ ನೃತ್ಯಗಾರರು ಮತ್ತು ವಧುಗಳು ತೊಡುತ್ತಾರೆ. ಇವೆಲ್ಲ ಅಲ್ಲದೆ ಮಹಿಳೆಯರು, ಮುತ್ತಿನ ಹಾರವನ್ನು ಕತ್ತಿಗೆ ಹಾಕುವ ಬದಲು ಮುಡಿಗೇರಿಸಿ ಸಿಂಗಾರ ಮಾಡುತ್ತಾರೆ. ಸರಳ ಬನ್ (ತುರುಬು) ಸುತ್ತ ಮುತ್ತಿನ ಹಾರವನ್ನು ಕಟ್ಟಿ ಕೇಶ ವಿನ್ಯಾಸ ಮಾಡಲಾಗುತ್ತದೆ. ಗಗನ ಸಖೀಯರು ಸಾಮಾನ್ಯವಾಗಿ ಇಂಥ ಹೇರ್‌ಸ್ಟೈಲ್ ಮಾಡಿಕೊಳ್ಳುತ್ತಾರೆ. ಈ ಫ್ಯಾಷನ್‌ನ ಪ್ರಭಾವವನ್ನು ಮದುವೆಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ಎಥಿ°ಕ್ ಡೇಯಂಥ ಸಮಾರಂಭಗಳಲ್ಲಿ, ಹಬ್ಬ ಮತ್ತು ಪೂಜೆಗಳಿಗೆ ಬರುವ ಮಹಿಳೆಯರಲ್ಲಿ ನೋಡಬಹುದು.
Related Articles
ನಿಜವಾದ ಮುತ್ತುಗಳು ದುಬಾರಿ. ಆದರೆ, ಪ್ಲಾಸ್ಟಿಕ್ ಮತ್ತು ಇತರ ವಸ್ತುಗಳಿಂದ ತಯಾರಿಸಲಾದ ಆರ್ಟಿಫಿಷಿಯಲ್ ಮುತ್ತುಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುತ್ತದೆ. ಅವುಗಳನ್ನು ನಾವೇ ಸ್ವತಃ ಪೋಣಿಸಿ, ಮಾಲೆ ತಯಾರಿಸಬಹುದು. ಒಡವೆಗಳು ಚಿನ್ನ ಅಥವಾ ಬೆಳ್ಳಿಯದ್ದೇ ಆಗಿರಬೇಕೆಂದು ಏನಿಲ್ಲ. ಇವುಗಳನ್ನು ಜಂಕ್ ಜುವೆಲ್ಲರಿಗೆ ಬಳಸಲಾಗುವ ಲೋಹದಿಂದ, ಪ್ಲಾಸ್ಟಿಕ್, ಗಾಜು ಮತ್ತು ಮರದ ತುಂಡಿನಿಂದಲೂ ತಯಾರಿಸಬಹುದು. ಇವುಗಳಿಂದ ಕಿವಿಯೋಲೆ, ಕೈಬಳೆ, ಮುಂತಾದವುಗಳನ್ನೂ ನಾವೇ ತಯಾರಿಸಬಹುದು. ಇಂಟರ್‌ನೆಟ್‌ನಲ್ಲಿ ಈ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು. ಹಾಗಾಗಿ ನಿಮ್ಮ ಕಪಾಟಿನಲ್ಲಿರುವ ಹಳೇ ಮುತ್ತಿನ ಹಾರಗಳನ್ನು ಹೊರತೆಗೆಯಿರಿ. ನಿಮ್ಮ ಕ್ರಿಯಾಶೀಲತೆ ಬಳಸಿ ಪ್ರಯೋಗ ಮಾಡಿ, ಅವುಗಳಿಗೆ ಹೊಸ ಕಳೆ, ಆಕಾರ ಮತ್ತು ಜೀವ ನೀಡಿ. ಇವುಗಳನ್ನು ತೊಟ್ಟರೆ, ನೀವೂ ಮೇಕ್ ಓವರ್ ಪಡೆದಂತಾಗುತ್ತದೆ!
Advertisement
– ಅದಿತಿಮಾನಸ ಟಿ.ಎಸ್.