ಹೊಸದುರ್ಗ: ರಾಜ್ಯ, ರಾಷ್ಟ್ರ ಸಮಾಜದ ಅಭಿವೃದ್ಧಿಯ ಜೊತೆಗೆ ವೈಯಕ್ತಿಕ ಬದುಕನ್ನು ಸುಂದರಗೊಳಿಸುವ ಸಲುವಾಗಿ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಭಗೀರಥ ಪೀಠದ ಡಾ| ಪುರುಷೋತ್ತಮಾನಂದಪುರಿ ಸ್ವಾಮೀಜಿ ಹೇಳಿದರು.
ತಾಲೂಕಿನ ಬ್ರಹ್ಮವಿದ್ಯಾನಗರದಲ್ಲಿರುವ ಭಗೀರಥ ಮಠದಲ್ಲಿ ಹಮ್ಮಿಕೊಂಡಿದ್ದ ವ್ಯಕ್ತಿತ್ವ ವಿಕಸನ ಹಾಗೂ ನಾಯಕತ್ವ ಬೆಳವಣಿಗೆ ತರಬೇತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ವ್ಯಕ್ತಿಗಳಲ್ಲಿ ಜ್ಞಾನ ಸಾಮರ್ಥ್ಯ, ಕೌಶಲ್ಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಂದ ನಾನಾ ವಿಷಯಗಳ ಕುರಿತು ತರಬೇತಿ ನೀಡಲಾಗುತ್ತಿದೆ. ಇದು ಸುಂದರ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ಮುಂದಿನ ಪೀಳಿಗೆಗೆ ನಾವೆಲ್ಲರೂ ಆದರ್ಶವಾಗಿರಬೇಕೆಂದರೆ ನಮ್ಮೆಲ್ಲರ ಜೀವನ ಶುದ್ಧವಾಗಿರಬೇಕು ಎಂದರು.
ಮಹಿಳೆಯರು ಮತ್ತು ಕಾನೂನು ವಿಷಯದ ಕುರಿತು ಮಾತನಾಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು, ನಮ್ಮದೇಶದಲ್ಲಿ ಹೆಣ್ಣಿಗೆ ಪೂಜನೀಯ ಸ್ಥಾನವಿದೆ. ಹೆಣ್ಣಿನಲ್ಲಿರುವ ಶಕ್ತಿಯಿಂದ ಇಂದು ಮಹಿಳೆ ಎಲ್ಲ ರಂಗಗಳಲ್ಲಿಯೂ ತನ್ನದೇ ಆದ ಕಾರ್ಯವೈಖರಿಯಿಂದ ಗುರುತಿಸಲ್ಪಟ್ಟಿದ್ದಾಳೆ. ಮಹಿಳೆಯರಿಗೆ ಪುರುಷರಷ್ಟೇ ಸಮಾನ ಶಿಕ್ಷಣವನ್ನು ಪಡೆಯುವ ಅಧಿಕಾರವಿದೆ. ಇದು ಸರಕಾರದ ಜವಾಬ್ದಾರಿಯೂ ಆಗಿದೆ. ದೇಶದ ಸಂವಿಧಾನದಲ್ಲಿ ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗಾಗಿಯೇ ಅನೇಕ ಕಾನೂನುಗಳಿವೆ. ಸ್ವಾಮಿ ವಿವೇಕಾನಂದರು ಹೇಳುವಂತೆ ನಮ್ಮ ಜೀವನದ ಶಿಲ್ಪಿಗಳು ನಾವೇ ಆಗಬೇಕು ಎಂಬ ಮಾತನ್ನು ಅರಿತಿರುವ ಮಹಿಳೆಯರು ಸ್ವಾವಲಂಬಿಗಳಾಗುತ್ತಿದ್ದಾರೆ. ಹೊಸ ಸಮಾಜ ನಿರ್ಮಾಣಕ್ಕೆ ಹೆಣ್ಣಿನ ಪಾತ್ರ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿ ಕಾ ಮಾತನಾಡಿ, ಇಂದು ಹೆಣ್ಣುಮಕ್ಕಳು ಕಾಲಿರಿಸದ ಕ್ಷೇತ್ರವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಸಾಧನೆಯತ್ತ ಮುಖ ಮಾಡಿದ್ದಾರೆ. ಬಡತನ ಇನ್ನಿತರ ಕಾರಣಕ್ಕೆ ಹೆಣ್ಣಿಗೆ ಬೇಗ ಮದುವೆ ಮಾಡಲಾಗುತ್ತಿದೆ. ಅಪ್ರಾಪ್ತ ಮಕ್ಕಳನ್ನು ಮದುವೆ ಮಾಡಲು ಮುಂದಾದರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಮಹಿಳೆಯರಿಗೆ ಶಿಕ್ಷಣ ನೀಡಿದರೆ ಸಮಾಜದಲ್ಲಿ ದೊಡ್ಡ ಹುದ್ದೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಪೋಷಕರು ಮಕ್ಕಳ ಸಾಧನೆಗೆ ಒತ್ತಾಸೆಯಾಗಿ ನಿಲ್ಲಬೇಕು ಎಂದರು.
ಉಪ್ಪಾರ ನಿಗಮದ ಅಧ್ಯಕ್ಷ ಗಿರೀಶ್ ಉಪ್ಪಾರ್, ಉಪ್ಪಾರ ಕುಲಶಾಸ್ತ್ರ ಅಧ್ಯಯನ ಸಮಿತಿ ಅಧ್ಯಕ್ಷ ಡಾ| ಮೇತ್ರಿ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಡಾ| ದ್ವಾರಕಾನಾಥ್, ಹೃದಯ ರೋಗ ತಜ್ಞ ಡಾ| ಮಂಜುನಾಥ್, ಜಯದೇವ ಆಸ್ಪತ್ರೆ ವೈದ್ಯ ಡಾ| ಶಂಕರ್, ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್. ಲಿಂಗಮೂರ್ತಿ, ಸಿಐಡಿ ಎಸ್‌ಪಿ ರವಿ ಡಿ. ಚನ್ನಣ್ಣನವರ್ ವಿವಿಧ ವಿಷಯಗಳ ಕುರಿತು ಮಾತನಾಡಿದರು.
ಬಡತನ ಇನ್ನಿತರ ಕಾರಣಕ್ಕೆ ಹೆಣ್ಣಿಗೆ ಬೇಗ ಮದುವೆ ಮಾಡಲಾಗುತ್ತಿದೆ. ಅಪ್ರಾಪ್ತ ಮಕ್ಕಳನ್ನು ಮದುವೆ ಮಾಡಲು ಮುಂದಾದರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಮಹಿಳೆಯರಿಗೆ ಶಿಕ್ಷಣ ನೀಡಿದರೆ ಸಮಾಜದಲ್ಲಿ ದೊಡ್ಡ ಹುದ್ದೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಪೋಷಕರು ಮಕ್ಕಳ ಸಾಧನೆಗೆ ಒತ್ತಾಸೆಯಾಗಿ ನಿಲ್ಲಬೇಕು. –
ಜಿ. ರಾಧಿಕಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ