Advertisement

ಹೆಸ್ಕಾಂ ಆವರಣ ಸುಂದರ ಪರಿಸರ ತಾಣ

03:39 PM Apr 03, 2019 | Naveen |

ನರಗುಂದ: ಒಂದು ಸರಕಾರಿ ಕಚೇರಿ ಸುತ್ತಲಿನ ಪರಿಸರ ಹೇಗಿರಬೇಕು? ಎಂಬುದಕ್ಕೆ ಪಟ್ಟಣದ ಹೆಸ್ಕಾಂ ಕಚೇರಿ ಮಾದರಿಯಾಗಿದೆ. ಹೌದು. ಸಾರ್ವಜನಿಕರ ಮನೆ, ಕಚೇರಿಗಳಿಗೆ ವಿದ್ಯುತ್‌ ಪೂರೈಸುವಲ್ಲಿ ಸದಾ ಜನರಿಂದ ನಿಂದನೆಗಳಿಗೆ ಒಳಗಾಗುತ್ತಲೇ ಬಂದಿರುವ ಹೆಸ್ಕಾಂ ಸಿಬ್ಬಂದಿ ಪರಿಸರಕ್ಕೆ ನೀಡುತ್ತಿರುವ ಕೊಡುಗೆ ಗಮನಾರ್ಹವಾಗಿದೆ.

Advertisement

ಹೆಸ್ಕಾಂ ಸಿಬ್ಬಂದಿ ಕಚೇರಿ ಮುಂಭಾಗದಲ್ಲಿ ಸಸ್ಯಪಾಲನೆಯ ಜತೆಗೆ ಸುಂದರ ಪರಿಸರ ನಿರ್ಮಿಸಿದ್ದಾರೆ. ಪಕ್ಷಿ ಸಂಕುಲಕ್ಕೆ ಜೀವಜಲ ನೀಡುವ ಕಾಯಕವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಹೀಗಾಗಿ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಹೆಸ್ಕಾಂ ಕಚೇರಿ ಹೆದ್ದಾರಿಯಲ್ಲಿ ಸಾಗುವ ಪ್ರಯಾಣಿಕರನ್ನು ಒಂದೆರಡು ಕ್ಷಣ ತಿರುಗಿ ನೋಡುವಂತಾಗುತ್ತಿದೆ.

ಮಹಾ ಗಣಪತಿ ಮಂದಿರ: ಹೆಸ್ಕಾಂ ಆವರಣದಲ್ಲಿ ಮಹಾ ಗಣಪತಿ ಮಂದಿರ ನಿರ್ಮಿಸಿದ್ದು, ಭಕ್ತರ ಶ್ರದ್ಧಾ ಕೇಂದ್ರವಾಗಿದೆ. ದೇವಸ್ಥಾನ ಸುತ್ತ ಸುಂದರ ಹೂದೋಟ, ವಿವಿಧ ಗಿಡ ಮರಗಳನ್ನು
ಬೆಳೆಸಿ ಪೋಷಣೆ ಮಾಡುತ್ತ ಬರಲಾಗಿದ್ದು, ಹೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದ ಪ್ರಯತ್ನದ ಫಲದಿಂದ ಪ್ರಯಾಣಿಕರು, ಸಾರ್ವಜನಿಕರು ಇಂದು ತಂಪಾದ ನೆರಳಿನಲ್ಲಿ ಕೂಡ್ರುವಂತಾಗಿದೆ.

ಪಕ್ಷಿಗಳಿಗೆ ಜೀವಜಲ: ಕಚೇರಿ ಆವರಣದಲ್ಲಿರುವ ಗಿಡಗಳ ಬೊಡ್ಡೆಗೆ ಸಣ್ಣ ಸಣ್ಣ ಡಬ್ಬಗಳನ್ನು ಕಟ್ಟಲಾಗಿದ್ದು, ದಿನನಿತ್ಯ ಮೂರು ಅವಧಿಗೆ ಡಬ್ಬಿಗಳಿಗೆ ನೀರು ತುಂಬಿಸಿ ಪಕ್ಷಿ ಸಂಕುಲಕ್ಕೆ ಕುಡಿವ ನೀರಿನ ದಾಹ ನೀಗಿಸುವ ಕಾರ್ಯ ಮಾಡಲಾಗಿದೆ.

ದಾಹ ನೀಗಿಸುವ ಕೆಲಸ: ಹೂದೋಟ ಒಳಗಡೆ ಸಣ್ಣದೊಂದು ನೀರಿನ ಟ್ಯಾಂಕ್‌ ನಿರ್ಮಿಸಲಾಗಿದ್ದು, ಪುರಸಭೆ ನಲ್ಲಿಯಿಂದ ನೀರು ತುಂಬಿಸುತ್ತಾರೆ. ನೀರಿನ ಕೊರತೆ ಬಿದ್ದರೆ ದುಡ್ಡು ಖರ್ಚು ಮಾಡಿ ಟ್ಯಾಂಕರ್‌ನಿಂದ ನೀರು ತುಂಬಿಸಿ ಪ್ರಯಾಣಿಕರ ದಾಹ ನೀಗಿಸುವಲ್ಲಿ ಮುಂದಾಗಿದ್ದಾರೆ. ಹೆಸ್ಕಾಂ ಸಿಬ್ಬಂದಿ ಕಾರ್ಯ ಜನರ ಮೆಚ್ಚುಗೆ ಗಳಿಸಿದೆ. ಹೀಗೆಯೇ ಎಲ್ಲ ಸರಕಾರಿ ಕಚೇರಿಗಳ ಮುಂದೆ ಸಸ್ಯ ಸಂಕುಲ, ಸುಂದರ ಪರಿಸರ ನಿರ್ಮಿಸಿದರೆ ಪರಿಸರ ರಕ್ಷಣೆಯಲ್ಲಿ ಅಧಿಕಾರಿಗಳ ಕೊಡುಗೆ ಕಾಣಬಹುದು.

Advertisement

ನಮ್ಮ ಕಚೇರಿ ಸಿಬ್ಬಂದಿ ಪರಿಸರ ರಕ್ಷಣೆಯಲ್ಲಿ ಜಾಗೃತರಾಗಿದ್ದಾರೆ. ದಶಕಗಳಿಂದ ಕಚೇರಿ ಮುಂದೆ ಗಿಡ ಮರಗಳನ್ನು ಬೆಳೆಸಲಾಗಿದೆ.ಬೇಸಿಗೆಯಲ್ಲಿ ಪಕ್ಷಿ ಸಂಕುಲಕ್ಕೆ ನೀರಿನ ಡಬ್ಬಗಳನ್ನು ಕಟ್ಟಿ ದಾಹ ನೀಗಿಸುವ ಸಣ್ಣ ಪ್ರಯತ್ನ ಮಾಡಿದ್ದೇವೆ. ಸುಂದರ ಪರಿಸರ ನಿರ್ವಹಣೆಯಲ್ಲಿ ಸಿಬ್ಬಂದಿಯ ಉತ್ಸುಕತೆ ಗಮನಾರ್ಹವಾಗಿದೆ.
. ಐ.ವೈ.ಮಣ್ಣೂರ. ಹೆಸ್ಕಾಂ ಅಧಿಕಾರಿ

ಸಿದ್ಧಲಿಂಗಯ್ಯ ಮಣ್ಣೂರಮಠ

Advertisement

Udayavani is now on Telegram. Click here to join our channel and stay updated with the latest news.

Next