“ಮೂರು ಸಿನಿಮಾ ಮಾಡಿ ವಾಪಾಸ್ ಹೋಗಬೇಕೆಂದುಕೊಂಡು ನಾನು ಬಂದಿಲ್ಲ. ಇಲ್ಲಿದ್ದೇ ಏನಾದರೂ ಸಾಧಿಸಬೇಕೆಂದಿದ್ದೇನೆ …’
– ಸಿಕ್ಕಾಪಟ್ಟೆ ವಿಶ್ವಾಸದೊಂದಿಗೆ ಹೇಳಿದರು ಸ್ವಾತಿ ಕೋಂಡೆ. ಅಷ್ಟಕ್ಕೂ ಯಾರು ಈ ಸ್ವಾತಿ ಕೋಂಡೆ ಎಂದರೆ ಈಗಷ್ಟೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನವನಟಿ ಎನ್ನಬೇಕು. ಈಗಾಗಲೇ ಬಿಡುಗಡೆಯಾಗಿರುವ “ಬ್ಯೂಟಿಫುಲ್ ಮನಸುಗಳು’ ಚಿತ್ರದಲ್ಲೊಂದು ಪ್ರಮುಖ ಪಾತ್ರ ಮಾಡುವ ಮೂಲಕ ಗುರುತಿಸಿಕೊಂಡವರು ಸ್ವಾತಿ. ಹೀಗೆ ಸಣ್ಣ ಪಾತ್ರವೊಂದರ ಮೂಲಕ ದೊಡ್ಡ ಅವಕಾಶ ಪಡೆದ ಸ್ವಾತಿ ಈಗ “ವೆನಿಲ್ಲಾ’ ಧ್ಯಾನದಲ್ಲಿದ್ದಾರೆ. ಏನಿದು ವೆನಿಲ್ಲಾ ಎಂದರೆ ಜಯತೀರ್ಥ ನಿರ್ದೇಶನದ ಹೊಸ ಸಿನಿಮಾ. ಅಂದು ತಮ್ಮ “ಬ್ಯೂಟಿಫುಲ್ ಮನಸುಗಳು’ ಚಿತ್ರದಲ್ಲಿ ಸಣ್ಣ ಪಾತ್ರವೊಂದನ್ನು ಕೊಟ್ಟಿದ್ದ ಜಯತೀರ್ಥ ಈಗ “ವೆನಿಲ್ಲಾ’ ಮೂಲಕ ಸ್ವಾತಿಗೆ ನಾಯಕಿಪಟ್ಟ ಕೊಟ್ಟಿದ್ದಾರೆ. ಸಹಜವಾಗಿಯೇ ಸ್ವಾತಿ ಖುಷಿಯಾಗಿದ್ದಾರೆ. ಸ್ವಾತಿ ತುಮಕೂರಿನ ಹುಡುಗಿ. ಕಾಲೇಜು ಮುಗಿಸುತ್ತಿದ್ದಂತೆ ಸಿನಿಮಾದಲ್ಲಿ ಆಸಕ್ತಿ ತೋರಿದ ಸ್ವಾತಿಗೆ ಅವರ ಕುಟುಂಬ ಕೂಡಾ ಬೆಂಬಲವಾಗಿ ನಿಲ್ಲುತ್ತದೆ.
ಹಾಗಾಗಿ, “ಬ್ಯೂಟಿಫುಲ್ ಮನಸುಗಳು’ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದಾರೆ ಸ್ವಾತಿ. ಅದು ಮುಗಿಯುತ್ತಿದ್ದಂತೆ “ಕಮರೊಟ್ಟು ಚೆಕ್ಪೋಸ್ಟ್’ ಸಿನಿಮಾದಲ್ಲೂ ಸ್ವಾತಿಗೆ ಅವಕಾಶ ಸಿಕ್ಕಿದೆ. ಈ ಸಿನಿಮಾದಲ್ಲೂ ಅವರಿಗೆ ಹೊಸ ಬಗೆಯ ಪಾತ್ರ ಸಿಕ್ಕಿದೆಯಂತೆ. “ವೆನಿಲ್ಲಾ’ದಲ್ಲಿ ಇನ್ನೋಸೆಂಟ್ ಜೊತೆಗೆ ಬಬ್ಲಿಯಾಗಿ ಕಾಣಿಸಿಕೊಂಡಿರುವ ಸ್ವಾತಿಗೆ ಸಾಕಷ್ಟು ಅವಕಾಶಗಳು ಬರುತ್ತಿವೆ. ಆದರೆ ಸ್ವಾತಿಗೆ ವಿಭಿನ್ನ ಪಾತ್ರಗಳ ಮೂಲಕ ಮಿಂಚಬೇಕೆಂಬ ಆಸೆ ಇರುವುದರಿಂದ ಹೊಸ ಬಗೆಯ ಪಾತ್ರಕ್ಕಾಗಿ ಎದುರು ನೋಡುತ್ತಿದ್ದಾರೆ.
“ಸಾಕಷ್ಟು ಅವಕಾಶಗಳು ಬರುತ್ತಿವೆ. ನಾನು ಸವಾಲಿನ ಪಾತ್ರಕ್ಕಾಗಿ ಎದುರು ನೋಡುತ್ತಿದ್ದು, ಅಂತಹ ಪಾತ್ರ ಸಿಗುವ ನಿರೀಕ್ಷೆ ಇದೆ’ ಎನ್ನುತ್ತಾರೆ. ಇನ್ನು, ನಟನೆಗೆ ಅವಕಾಶವಿದ್ದರೆ ಯಾವುದೇ ತೆರನಾದ ಪಾತ್ರವಾದರೂ ಮಾಡಲು ಸಿದ್ಧ ಎನ್ನುವ ಸ್ವಾತಿ, ಯಾವುದೇ ಒಂದು ಪಾತ್ರಕ್ಕೆ ಅಂಟಿಕೊಳ್ಳಲು ನಾನು ರೆಡಿಯಿಲ್ಲ. ಹೊಸ ಪ್ರಯೋಗ ಮಾಡುತ್ತಲೇ ಇರಬೇಕು. ಭಿನ್ನ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕು ಎನ್ನುತ್ತಾರೆ. ಅಂದಹಾಗೆ, ಸ್ವಾತಿ ಒಳ್ಳೆಯ ಡ್ಯಾನ್ಸರ್ ಹಾಗೂ ಪೆಂಟರ್ ಕೂಡಾ.
– ರವಿ ರೈ